ಜಾಬ್‌ಕಾರ್ಡ್‌ನಲ್ಲಿನ ಸಮಸ್ಯೆ ಸರಿಪಡಿಸಿಕೊಳ್ಳಲು ತಾಳಿಕೋಟೆ ಸರ್ಕಾರಿ ಕಚೇರಿಗೆ ಬಂದಿದ್ದ ಮಹಿಳಾ ಕೂಲಿಕಾರರೊಬ್ಬರಿಗೆ ಸಿಬ್ಬಂದಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮೊಬೈಲ್ ಕಸಿದುಕೊಂಡು ದಬ್ಬಾಳಿಕೆ ನಡೆಸಿದ್ದು, ಜೀವ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಳಿಕೋಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬಳಿಕ ಸಂಘದ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ತಾಳಿಕೋಟೆ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಸೆ.4ರಂದು ಮಧ್ಯಾಹ್ನ ಬಂಟನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಳ್ಳಿಗಿ ಗ್ರಾಮದ ಮಹಿಳಾ ಕೂಲಿಕಾರರಾದ ಲಕ್ಷ್ಮೀ ಕೋರಿ ಅವರು ಜಾಬ್‌ಕಾರ್ಡ್‌ನಲ್ಲಿನ ಸಮಸ್ಯೆ ಸರಿಪಡಿಸಿಕೊಡುವಂತೆ ಮನವಿ ಸಲ್ಲಿಸಲು ತಾಳಿಕೋಟಿ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿದ್ದರು. ಈ ವೇಳೆ ಸಿಬ್ಬಂದಿಯೊಬ್ಬರು ತಮ್ಮೊಂದಿಗೆ ಅಸಭ್ಯವಾಗಿ ಹಾಗೂ ಅವಾಚ್ಯ ಶಬ್ದಗಳಿಂದ ಮಾತನಾಡಿ ನಿಂದಿಸಿದ್ದಾರೆ. ಅಲ್ಲದೆ, ಮೊಬೈಲ್ ಫೋನ್ ಕಸಿದುಕೊಂಡು ಕಚೇರಿಯಿಂದ ಹೊರಗೆ ದಬ್ಬುವ ರೀತಿಯಲ್ಲಿ ವರ್ತಿಸಿ ಅವಮಾನ ಹಾಗೂ ಬೆದರಿಕೆ ಹಾಕಿದ್ದಾರೆ ಎಂದು ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ದಾಬಲಸಾಬ ನದಾಫ್ ಆರೋಪಿಸಿದರು.
ತಮ್ಮ ಹಕ್ಕಿನ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಬರುವ ಕೂಲಿಕಾರರೊಂದಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ, ಮಹಿಳಾ ಕೂಲಿಕಾರರೊಬ್ಬರೊಂದಿಗೆ ಈ ರೀತಿಯ ವರ್ತನೆ ತೀವ್ರವಾಗಿ ಖಂಡನೀಯ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿತು.
ದೃಶ್ಯಾವಳಿಗಳನ್ನು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದರೆ ಸಂರಕ್ಷಿಸಬೇಕು. ಸಿಸಿಟಿವಿ ಹಾಗೂ ಸಂಬಂಧಪಟ್ಟ ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪ ಸಾಬೀತಾದರೆ ಸಂಬಂಧಿಸಿದ ಸಿಬ್ಬಂದಿಯ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ, ಅಮಾನತು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿತು.
ಶೆಳ್ಳಿಗಿ ಗ್ರಾಮದ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆಯಡಿ ಎದುರಿಸುತ್ತಿರುವ ಸಮಸ್ಯೆಗಳಿಗೂ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಸಂಘ ಒತ್ತಾಯಿಸಿತು.
ಸಂಘದ ಜಿಲ್ಲಾ ಮುಖಂಡ ರಮೇಶ ತಳವಾರ ಮಾತನಾಡಿ, ಶೆಳ್ಳಿಗಿ ಗ್ರಾಮದ ಎಲ್ಲ ಅರ್ಹ ಕೂಲಿಕಾರರಿಗೆ ಜಾಬ್‌ಕಾರ್ಡ್ ವಿತರಿಸಬೇಕು. ಹಳೆಯ ಜಾಬ್‌ಕಾರ್ಡ್‌ಗಳಲ್ಲಿನ ಹೆಸರು ಹಾಗೂ ಕುಟುಂಬ ಸದಸ್ಯರ ವಿವರಗಳಲ್ಲಿರುವ ತಪ್ಪುಗಳನ್ನು ಸರಿಪಡಿಸಬೇಕು. ಅರ್ಹ ಕೂಲಿಕಾರರ ಇ-ಕೆವೈಸಿ ಪೂರ್ಣಗೊಳಿಸುವ ಜೊತೆಗೆ, ಹೊಸದಾಗಿ ಅರ್ಹತೆ ಹೊಂದಿರುವ ಕುಟುಂಬಗಳಿಗೆ ಜಾಬ್‌ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಕೂಲಿಕಾರರಿಗೆ ಕಾನೂನುಬದ್ಧವಾಗಿ ಕೆಲಸ ಒದಗಿಸಬೇಕು. ಕೆಲಸದ ಬೇಡಿಕೆ, ಹಾಜರಾತಿ ಸೇರಿದಂತೆ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬರಗಾಲ ಹಾಗೂ ಉದ್ಯೋಗದ ಕೊರತೆಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಮುಖಂಡ ಹುಲಗಪ್ಪ ಚಲವಾದಿ ಮಾತನಾಡಿ, ಕೂಲಿಕಾರರು ತಮ್ಮ ಹಕ್ಕುಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರೊಂದಿಗೆ ಗೌರವಯುತವಾಗಿ ವರ್ತಿಸುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜನಸಾಮಾನ್ಯರ ಸೇವೆಗಾಗಿ ಇರುವ ಸರ್ಕಾರಿ ಕಚೇರಿಗಳಲ್ಲಿ ದಬ್ಬಾಳಿಕೆ ಅಥವಾ ಅವಮಾನಕಾರಿ ವರ್ತನೆಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಕೋರಿ, ಲಕ್ಷ್ಮೀ ನಗನೂರು,ಶ್ರೀದೇವಿ,ಶಿವುಬಾಯಿ ಅಂಬಳೂರು, ಅನ್ನಪೂರ್ಣ ಪೂಜಾರಿ ಸೇರಿದಂತೆ ಸಂಘದ ಮುಖಂಡರು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.





