ವಿದ್ಯಾರ್ಥಿಗಳು ಏಕಾಗ್ರತೆ, ಶಿಸ್ತು ರೂಢಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಯಶಸ್ಸು ಸಾಧ್ಯ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಹಣಕಾಸು ಉಪಾಧಿಕಾರಿ ಯಲ್ಲಾಲಿಂಗ ಜನವಾಡ ಹೇಳಿದರು.
ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ. ಪಾಟೀಲ ಪದವಿ ಪೂರ್ವ ಕಾಲೇಜು ಹಾಗೂ ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಹಾಗೂ ನೀಟ್-2026 ಸಾಧಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಲು ವಿದ್ಯಾರ್ಥಿಗಳು ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಮನೋಭಾವ ಬೆಳೆಸಿಕೊಳ್ಳಬೇಕು. ಗುರಿ ಸಾಧನೆಗೆ ಶಿಸ್ತು ಮತ್ತು ಏಕಾಗ್ರತೆಯೇ ಯಶಸ್ಸಿನ ಮೂಲಮಂತ್ರವಾಗಿವೆ ಎಂದು ಹೇಳಿದರು.
ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್ ಸಂಯೋಜಕ ಪ್ರೇಮ ಕಿಶೋರ ಚೌಧರಿ ಮಾತನಾಡಿ, “ಕಳೆದ ವರ್ಷ ಅಲೆನ್-ಬಿ.ಎಲ್.ಡಿ.ಇ ಸಂಸ್ಥೆಯಲ್ಲಿ ತರಬೇತಿ ಪಡೆದ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಯಶಸ್ಸು ಸಾಧಿಸಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೀಟ್-2026ರ ಸಾಧಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಸಾಧಕ ವಿದ್ಯಾರ್ಥಿಗಳು ತಮ್ಮ ಅಧ್ಯಯನ ವಿಧಾನ, ಸಮಯ ನಿರ್ವಹಣೆ ಹಾಗೂ ಪರೀಕ್ಷಾ ಸಿದ್ಧತೆಯ ಅನುಭವಗಳನ್ನು ಹಂಚಿಕೊಂಡು, ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪದೊಂದಿಗೆ ಗುರಿಯತ್ತ ಸಾಗುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ.ಎಂ. ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೊಡ್ಡು ಮಹೇಶ್ವರರಾವ, ಕಾಲೇಜಿನ ಸಂಯೋಜಕಿ ಡಾ. ಮುಕ್ತಾ ಬನ್ನೂರ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.




