‘ನಾವು Gen Z’ ಎಂಬುದು ಈಗ ‘ಜಾಂತೇ ನಹೀನ್ ಹೋ, ಮೇರಾ ಬಾಪ್ ಕೌನ್ ಹೈ’ (ನನ್ನಪ್ಪ ಯಾರು ಗೊತ್ತಾ?) ಎಂಬ ಹಳೆಯ ಅಧಿಕಾರದ ಧೋರಣೆಯಂತಾಗಿದೆ. ಸಣ್ಣಪುಟ್ಟ ಅಸಮಾಧಾನ ಎದುರಾದಾಗಲೆಲ್ಲ ಇದನ್ನು ಬೆದರಿಕೆಯಾಗಿ ಬಳಸಲು ಆರಂಭಿಸಿದರೆ Gen Z ಬಗ್ಗೆ ಇರುವ ಸೌಹಾರ್ದ ಭಾವನೆ ಬೇಗನೆ ಕುಸಿಯುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಕಾರ್ಗಿಲ್‌ನ ಚೆಕ್‌ಪೋಸ್ಟ್‌ವೊಂದರಲ್ಲಿ ಮಹಿಳಾ ಪ್ರವಾಸಿಯೊಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಒಮರ್ ಅಬ್ದುಲ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಈ ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾರ್ಗಿಲ್‌ನ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ಸಂಚಾರ ನಿರ್ಬಂಧದ ಕುರಿತು ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. “ನಾವು Gen Z, ಇಂತಹ ಅಸಂಬದ್ಧತೆಯನ್ನು ಸಹಿಸುವುದಿಲ್ಲ” ಎಂದು ಆಕೆ ಹೇಳುತ್ತಿರುವುದು ವಿಡಿಯೋದಲ್ಲಿದೆ.
“ಪ್ರವಾಸಿಗರ ಸಂಚಾರಕ್ಕೂ ಏಕೆ ನಿರ್ಬಂಧ ವಿಧಿಸಲಾಗಿದೆ. ಕಾಶ್ಮೀರಿಗಳೊಂದಿಗೆ ಇಂತಹ ನಿರ್ಬಂಧಗಳನ್ನು ಹೇರುತ್ತಿದ್ದರಿ, ಈಗ ಪ್ರವಾಸಿಗರಿಗೂ ಹೇರಲು ಆರಂಭಿಸಿದ್ದೀರಿ” ಎಂದು ಆಕೆ ಆರೋಪಿಸಿದ್ದಾರೆ. ಈ ವೈರಲ್ ವಿಡಿಯೋಗೆ ಸಾವಿರಾರು ಮಂದಿ ಕಮೆಂಟ್ ಮಾಡಿದ್ದು, ಪರ ವಿರೋಧ ಚರ್ಚೆಗಳಾಗಿವೆ. ಕೆಲವರು ಆಕೆಯನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ವಿಚಾರಕ್ಕೆ ಹೀಗಾಗುವುದು ಸಹಜ ಎಂದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆ ಜುಲೈ 25ರಂದು ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಅವರು ಜೋಜಿಲಾ-ಗುಮ್ರಿ ಮಾರ್ಗದಲ್ಲಿ ಸಂಚರಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿತ್ತು.
ಇದನ್ನೂ ಓದಿ: POCSO ಪ್ರಕರಣಗಳಲ್ಲಿ ಬಾಲಕರಿಗೆ ಅನ್ಯಾಯ: ಮದ್ರಾಸ್ ಹೈಕೋರ್ಟ್ ಕಳವಳ
ಇಬ್ಬರು ಹಿರಿಯ ಅಧಿಕಾರಿಗಳು ಆರಂಭದಲ್ಲಿ ವಿಮಾನದ ಮೂಲಕ ಪ್ರಯಾಣಿಸಲು ಯೋಜಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ ಹೆಲಿಕಾಪ್ಟರ್ ಮೂಲಕ ಗುಮ್ರಿಗೆ ತೆರಳಿದ್ದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಗಿಲ್‌ಗೆ ಪ್ರಯಾಣಿಸಿದ್ದರು. ಅವರ ಸಂಚಾರಕ್ಕೆ ಅನುಕೂಲವಾಗುವಂತೆ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ಕೆಲಕಾಲ ತಡೆಹಿಡಿಯಲಾಗಿತ್ತು.
ಇದರಿಂದ ಪ್ರವಾಸಿಗರು ಸೇರಿದಂತೆ ಇತರ ಪ್ರಯಾಣಿಕರು ಸಂಚಾರ ನಿರ್ಬಂಧದಿಂದ ತೊಂದರೆ ಅನುಭವಿಸಿದ್ದರು. ಜುಲೈ 26ರಂದು ನಡೆದ ಕಾರ್ಗಿಲ್ ವಿಜಯ ದಿವಸ್ ಆಚರಣೆಗೆ ಒಂದು ದಿನ ಮುನ್ನ ಈ ಘಟನೆ ನಡೆದಿತ್ತು. 1999ರ ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯವನ್ನು ಸ್ಮರಿಸುವ ಹಾಗೂ ಆಪರೇಷನ್ ವಿಜಯ್‌ನಲ್ಲಿ ಹೋರಾಡಿದ ಯೋಧರನ್ನು ಗೌರವಿಸುವ ದಿನವಾಗಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.




