ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾದಾಗ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ವರ್ಷಾರಂಭದಿಂದಲೇ ಆಸಕ್ತಿಯಿಂದ ಓದಲಾರಂಭಿಸಿದರೆ ಪರೀಕ್ಷೆಯ ಯಶಸ್ಸು ನೀರು ಕುಡಿದಷ್ಟೇ ಸುಲಭವಾಗುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ. ಆನಂದ್.ಕೆ ಹೇಳಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
“ವಿದ್ಯಾರ್ಥಿಗಳು ಕಠಿಣ ಅಧ್ಯಯನ ಶೈಲಿ ರೂಢಿಸಿಕೊಳ್ಳಬೇಕು. ವಿಷಯ ಕರಗತ ಮಾಡಿಕೊಂಡು ಮನನ ಮಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಮೌಲ್ಯಮಾಪನಕ್ಕೆ ಒಳಪಡಿಸಿಕೊಳ್ಳಬೇಕು ಇದರಿಂದ ಓದಿದ್ದೆಲ್ಲವೂ ಸ್ಮೃತಿಪಟಲದಲ್ಲಿ ಉಳಿಯುತ್ತದೆ. ವಿದ್ಯಾಭ್ಯಾಸದೊಟ್ಟಿಗೆ ದೈಹಿಕ ಚಟುವಟಿಕೆಗಳಿಗೂ ಒತ್ತು ನೀಡಬೇಕು. ಆಸಕ್ತಿದಾಯಕ ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಅಧ್ಯಯನ ಇನ್ನಷ್ಟು ಸುಲಭವಾಗುತ್ತದೆ” ಎಂದು ಸಲಹೆ ನೀಡಿದರು.
ಇದನ್ನೂ ಓದಿ> ಔರಾದ್ | ಪಿಯುಸಿ ಫಲಿತಾಂಶ : ಜನತಾ ಪ್ರವೀಣ ಪಿಯು ಕಾಲೇಜು ಉತ್ತಮ ಸಾಧನೆ
“ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸೇಂಟ್ ಜೋಸೆಫ್ ಪಿಯು ಕಾಲೇಜಿನ ಪ್ರಜ್ಞಾ ಗಲಗಲಿ ಮತ್ತು ಸಿದ್ದಿ ಜಿ ತೋನ್ಸಿವಾಲ್, ದ್ವಿತೀಯ ಸ್ಥಾನ ಪಡೆದ ವಿ.ಬಿ ದರಬಾರ ಪಿಯು ಕಾಲೇಜಿನ ಸರ್ವಜ್ಞ ಗುರ್ಜಾಲ ಹಾಗೂ ತೃತೀಯ ಸ್ಥಾನ ಪಡೆದ ಶ್ರೀ ಬಿ ಎಂ ಪಾಟೀಲ ಕಾಲೇಜಿನ ಕನಿಶಾ ಕಮಲೇಶ ಪೋರವಾಲ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ನಗರದ ರೇಡಿಯಂಟ್ ಪಿಯು ಕಾಲೇಜಿನ ನುಝಾತ ಫಾತಿಮಾ ತಾಳಿಕೋಟಿ, ದ್ವಿತೀಯ ಸ್ಥಾನ ಪಡೆದ ಆಕ್ಸ್‌ಫರ್ಡ್ ಪಿಯು ಕಾಲೇಜಿನ ಲಕ್ಕಿ ಪರಸಪ್ಪ ಅಡಿಗಿಮನಿ ಹಾಗೂ ತೃತೀಯ ಸ್ಥಾನ ಪಡೆದ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾಶ್ರೀ ಪ್ರಕಾಶ ಕಾಮನಕೇರಿ, ಪೂಜಾ ಈಟಿ ಆಕ್ಸ್‌ಫರ್ಡ್ ಪಿಯು ಕಾಲೇಜಿನ ಭಾಗ್ಯ ಪುಂಡಲಿಕಪ್ಪ ಹೊಸಮನಿ ಮತ್ತು ನಂದಿತಾ, ತುಂಗಳ ಸೈನ್ಸ್ ಪಿಯು ಕಾಲೇಜಿನ ಪೃಥ್ವಿ ಪತ್ತಾರ, ಸುಶ್ಮಿತಾ ಈರಪ್ಪ ಜಿಲ್ಲೆಗೆ ಉತ್ತಮ ನಿದರ್ಶನವಾಗಿದ್ದಾರೆ” ಎಂದು ಶ್ಲಾಘಿಸಿದ ಜಿಲ್ಲಾಧಿಕಾರಿಗಳು ಸ್ಮರಣಿಕೆ ಜತೆಗೆ ಪುಷ್ಪಗುಚ್ಛ ನೀಡಿ ಸಾಧಕ ವಿಧ್ಯಾರ್ಥಿಗಳನ್ನು ಅಭಿನಂದಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ ಕೆ ಹೊಸಮನಿ ಮಾತನಾಡಿ “ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಬಿ ಪಾಟೀಲ್ ಅವರು ಸಾಧಕ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಹಣ ವಿನಿಯೋಗಿಸಿ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ. ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನಿಡಗುಂದಿ | ಗೊಳಸಂಗಿ ಕಾಲೇಜಿನಲ್ಲಿ ʼಮನೆ ಮನೆಗೆ ಅಂಬೇಡ್ಕರ್ʼ ಅಭಿಯಾನ
ಅಭಿನಂದಿತ ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಕಾರಣರಾದ ಪೋಷಕರು, ಶಿಕ್ಷಕರು ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ ಕೆ ಹೊಸಮನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಮತ್ತು ಗಣ್ಯರು ಇದ್ದರು.





