ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅವರು ಪ್ರತಿಪಾದಿಸಿದ ಭಕ್ತಿಮಾರ್ಗದ ದಾರಿಯಲ್ಲಿ ಎಲ್ಲರೂ ನಡೆಯಬೇಕು ಎಂದು ವಿಜಯಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ ಸಲಹೆ ನೀಡಿದರು.
ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಮಾತನಾಡಿ, “ಎಲ್ಲ ಸ್ತ್ರೀಯರಿಗೂ ಮಾದರಿಯಾಗುವ ವ್ಯಕ್ತಿತ್ವವನ್ನು ಮಲ್ಲಮ್ಮ ಹೊಂದಿದ್ದರು. ಕಷ್ಟ ಕಾರ್ಪಣ್ಯವನ್ನು ಸಹಿಸುವ ಸಹನೆ ಅವರಲ್ಲಿತ್ತು. ಸಹನೆ, ಧೈರ್ಯ ಮತ್ತು ತಾಳ್ಮೆಗೆ ಇನ್ನೊಂದು ಹೆಸರೆಂಬಂತೆ ಬದುಕಿದ್ದರು” ಎಂದು ಅಭಿಪ್ರಾಯಪಟ್ಟರು.
“ಮಲ್ಲಮ್ಮನವರ ವ್ಯಕ್ತಿತ್ವವು ಆದರ್ಶ ಪ್ರಾಯವಾಗಿದ್ದು, ಅವರು ನೈತಿಕತೆ, ಧಾರ್ಮಿಕ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ಎಂಹತ ಕಷ್ಟಗಳು ಬಂದರೂ ಹೆದರದೇ, ಪರರಿಗೆ ಒಳಿತು ಮಾಡುವ ಗುಣ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಲ್ಲಿತ್ತು. ಅಂತಹ ಸದ್ಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಅರಣ್ಯ ಇಲಾಖೆಯ ವಸಾಹತುಶಾಹಿ ವಿರುದ್ಧ ನಾಗರಹೊಳೆ ಆದಿವಾಸಿಗಳ ಹಕ್ಕು ಹೋರಾಟ
ಡಾ. ಎಲ್ ಎಚ್ ಬಿದರಿ ಮಾತನಾಡಿ, “ಹೇಮರೆಡ್ಡಿ ಮಲ್ಲಮ್ಮ ಕೇವಲ ರೆಡ್ಡಿ ಸಮಾಜಕ್ಕೆ ಸೀಮಿತವಾಗಿಲ್ಲ. ಇಡೀ ಸ್ತ್ರೀ ಕುಲದ ಅನರ್ಘ್ಯ ರತ್ನ” ಎಂದು ಸ್ಮರಿಸಿದರು.
ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕ ಆಕಾಶ್ ತಿಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಿದ್ಯಾವತಿ ಅಂಕಲಗಿ ಇದ್ದರು.




