ಆದಿವಾಸಿಗಳು ಕೇವಲ ಅರಣ್ಯದ ನಿವಾಸಿಗಳಲ್ಲ; ಅವರು ಅರಣ್ಯದ ಜೀವನಾಡಿ, ಪ್ರಕೃತಿಯ ನಿಜವಾದ ಸಂರಕ್ಷಕರು. ಅವರ ಹಕ್ಕುಗಳನ್ನು ಕಸಿಯುವುದು ಎಂದರೆ ಸಂವಿಧಾನದ ಆತ್ಮವನ್ನೇ ನಿರ್ಲಕ್ಷಿಸುವಂತಾಗಿದೆ. ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆ, ಬದುಕಿನ ವಿಧಾನ ಮತ್ತು ಅರಣ್ಯದೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಗೌರವಿಸುವುದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ನೈತಿಕ ಮತ್ತು ಕಾನೂನುಬದ್ಧ ಜವಾಬ್ದಾರಿಯಾಗಿದೆ.
ವಸಾಹತುಶಾಹಿ ಮನೋಭಾವದ ಅರಣ್ಯ ಆಡಳಿತದ ವಿರುದ್ಧ ನಾಗರಹೊಳೆ ಆದಿವಾಸಿ ಸಮುದಾಯಗಳು ಮತ್ತೊಮ್ಮೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕ ಅರಣ್ಯ ಇಲಾಖೆ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಆದಿವಾಸಿಗಳ ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಅಕ್ರಮವಾಗಿ ತಡೆಯುತ್ತಿರುವುದಾಗಿ ಆರೋಪಿಸಿರುವ ‘ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ'(NAJHSS), ಇದು ಅರಣ್ಯ ಹಕ್ಕುಗಳ ಕಾಯ್ದೆ(FRA 2006) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಖಂಡಿಸಿದೆ.
ಕಾಡು ಎಂದರೆ ಕೇವಲ ಮರಗಳು, ಪ್ರಾಣಿಗಳು ಅಥವಾ ಪ್ರವಾಸಿ ತಾಣವಲ್ಲ. ಅದು ಆದಿವಾಸಿಗಳ ಬದುಕು, ಸಂಸ್ಕೃತಿ, ನಂಬಿಕೆ ಮತ್ತು ಅಸ್ತಿತ್ವದ ನೆಲೆ. ಕಾಡಿನಲ್ಲಿ ಹುಟ್ಟಿ ಬೆಳೆದ, ಕಾಡನ್ನೇ ದೇವರಂತೆ ಆರಾಧಿಸುವ ಸಮುದಾಯಗಳ ಬದುಕಿನ ಮೇಲೆ ಇಂದು ಅರಣ್ಯ ಕಾಯ್ದೆಗಳು ಮತ್ತು ಪುನರ್ವಸತಿ ಯೋಜನೆಗಳ ಹೆಸರಿನಲ್ಲಿ ನಿರಂತರವಾಗಿ ಒತ್ತಡ ಹೇರಲಾಗುತ್ತಿದೆ.
ಆದಿವಾಸಿಗಳು ಕಾಡನ್ನು ನಾಶಪಡಿಸಿದ ಇತಿಹಾಸವಿಲ್ಲ. ಬದಲಿಗೆ, ಕಾಡನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರಕೃತಿಯೊಡನೆ ಸಹಜೀವನ ನಡೆಸಿದ ಈ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಆಚರಣೆಗಳು ಮತ್ತು ಜೀವನ ಶೈಲಿಯ ಮೂಲಕ ಪರಿಸರ ಸಮತೋಲನ ಕಾಪಾಡಿಕೊಂಡಿವೆ. ಆದರೆ ಕಾಡಿನ ನೈಜ ಜೀವನದ ಅರಿವಿಲ್ಲದ ಆಡಳಿತ ವ್ಯವಸ್ಥೆಗಳು, ʼರಕ್ಷಣೆʼ ಹೆಸರಿನಲ್ಲಿ ಮೂಲ ನಿವಾಸಿಗಳನ್ನೇ ಕಾಡಿನಿಂದ ಹೊರಹಾಕಲು ಮುಂದಾಗಿವೆ.

ಒಂದು ಕಡೆ ಅರಣ್ಯ ಪ್ರವಾಸೋದ್ಯಮ, ಸಫಾರಿ, ಜಂಗಲ್ ರೆಸಾರ್ಟ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರವಾಸಿಗರು, ವಿದೇಶಿಗರು ಕಾಡಿನೊಳಗೆ ಸಂಚಾರ ಮಾಡಬಹುದು. ವಾಹನಗಳ ಓಡಾಟಕ್ಕೂ ಅವಕಾಶ ಇದೆ. ಆದರೆ ಪೀಳಿಗೆಯಿಂದ ಕಾಡಿನಲ್ಲೇ ಬದುಕು ಕಟ್ಟಿಕೊಂಡ ಆದಿವಾಸಿಗಳಿಗೆ ತಮ್ಮ ಸಂಪ್ರದಾಯಿಕ ಆಚರಣೆಗಾಗಿ ಕಾಡಿಗೆ ತೆರಳುವುದಕ್ಕೂ ನಿರ್ಬಂಧ ಹೇರಲಾಗುತ್ತಿದೆ. ಇದು ಸ್ಪಷ್ಟ ದ್ವಂದ್ವ ನೀತಿ.
ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ವನ್ಯಜೀವಿಗಳ ಸ್ವಾಭಾವಿಕ ಜೀವನಕ್ಕೆ ಅಡ್ಡಿಯಾಗುತ್ತಿದೆ. ಮಾನವ ಉಪಟಳ ಹೆಚ್ಚಿದಂತೆ ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡುತ್ತಿದ್ದು, ಮಾನವ–ವನ್ಯಜೀವಿ ಸಂಘರ್ಷಕ್ಕೂ ಇದು ಕಾರಣವಾಗುತ್ತಿದೆ. ಇದರ ಹೊಣೆ ಸರ್ಕಾರ ಮತ್ತು ಅರಣ್ಯ ಇಲಾಖೆಗಳ ಅವೈಜ್ಞಾನಿಕ ನೀತಿಗಳ ಮೇಲಿದೆ.

ಪುನರ್ವಸತಿ ಹೆಸರಿನಲ್ಲಿ ಆದಿವಾಸಿಗಳನ್ನು ಕಾಡಿನಿಂದ ದೂರ ಮಾಡಿದರೂ, ಅವರಿಗೆ ಪರ್ಯಾಯ ಬದುಕಿನ ಭದ್ರತೆ ಸಿಗುತ್ತಿಲ್ಲ. ಕಾಡಿನ ಹೊರಗಿನ ಬದುಕು ಅವರಿಗೆ ಅಪರಿಚಿತ. ಭೂಮಿ ಇಲ್ಲ, ಮೂಲಸೌಕರ್ಯ ಇಲ್ಲ, ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳೂ ಇಲ್ಲದ ಕಾರಣ ಅನೇಕ ಕುಟುಂಬಗಳು ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿವೆ.

ಅರಣ್ಯ ಸಂರಕ್ಷಣೆ ಎಂದರೆ ಮೂಲ ನಿವಾಸಿಗಳನ್ನು ಹೊರಹಾಕುವುದು ಅಲ್ಲ; ಅವರ ಹಕ್ಕುಗಳನ್ನು ಗೌರವಿಸಿ, ಅವರ ಜ್ಞಾನ ಮತ್ತು ಬದುಕಿನ ಪದ್ಧತಿಗಳೊಂದಿಗೆ ಪ್ರಕೃತಿಯನ್ನು ಉಳಿಸುವುದೇ ನಿಜವಾದ ಸಂರಕ್ಷಣೆ. ಆದಿವಾಸಿಗಳ ಅಸ್ತಿತ್ವವನ್ನು ಕಾಪಾಡದೇ ಅರಣ್ಯ ಉಳಿಯುವುದಿಲ್ಲ ಎಂಬ ಸತ್ಯವನ್ನು ಸರ್ಕಾರಗಳು ಅರಿಯಬೇಕಿದೆ.

ಈ ದಿನ.ಕಾಮ್ ಜತೆಗೆ ಮಾತನಾಡಿದ ಜೆ ಕೆ ತಿಮ್ಮ, “2026ರ ಮೇ 5ರಂದು ಮೂರ್ಕಲ್ ಪ್ರದೇಶದಲ್ಲಿ ‘ಸಂರಕ್ಷಣೆಯ ಇತಿಹಾಸ, ಹಿಂಸೆ ಮತ್ತು ಜನರ ಹೋರಾಟ’ ವಿಷಯದಡಿ ಮೂರು ದಿನಗಳ ಸಮುದಾಯ ಸಂವಾದ ಆಯೋಜಿಸಲಾಗಿತ್ತು. 27ಕ್ಕೂ ಹೆಚ್ಚು ಹಾಡಿಗಳ ಗ್ರಾಮಸಭೆಗಳನ್ನು ಪ್ರತಿನಿಧಿಸುವ ಎನ್ಎಜೆಹೆಚ್ಎಸ್ಎಸ್ ನಡೆಸುತ್ತಿದ್ದ ಈ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಬಲವಂತವಾಗಿ ತಡೆದಿದೆ ಇದು ಗ್ರಾಮಸಭೆಗಳಿಗೆ ತೋರಿದ ಅಗೌರವ” ಎಂದು ಆರೋಪಿಸಿದರು.
“ಗ್ರಾಮಸಭೆಗಳೇ ಅರಣ್ಯ ಹಕ್ಕುಗಳನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ಪ್ರಾಥಮಿಕ ಪ್ರಾಧಿಕಾರಗಳು ಎಂದು FRA 2006ರ ಸೆಕ್ಷನ್ 5 ಸ್ಪಷ್ಟಪಡಿಸುತ್ತಿದ್ದರೂ, ಅರಣ್ಯ ಇಲಾಖೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕಿದೆ. ಈ ಕ್ರಮವು ಸಂವಿಧಾನದ 19(1)(a), 19(1)(b), 25 ಮತ್ತು 29ನೇ ವಿಧಿಗಳ ಉಲ್ಲಂಘನೆಯಾಗಿದೆ” ಎಂದು ಹೇಳಿದರು.

“ಮೇ 5ರ ಬೆಳಿಗ್ಗೆ ವಿವಿಧ ಗ್ರಾಮಸಭೆಗಳ ಆದಿವಾಸಿಗಳು ಮೂರ್ಕಲ್ ಅಜ್ಜಯ್ಯನಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲು ಆಗಮಿಸಿದಾಗ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್. ಲಕ್ಷ್ಮಿಕಾಂತ್ ಹಾಗೂ ವಲಯ ಅರಣ್ಯಾಧಿಕಾರಿ ಅಭಿಷೇಕ್ ಪಿ.ಎಸ್. ನೇತೃತ್ವದ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಇದೇ ವೇಳೆ ಅರಣ್ಯ ಹಕ್ಕುಗಳ ತಜ್ಞರು, ವಕೀಲರು, ಮಾನವ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರನ್ನು ವೀರನಹೊಸಹಳ್ಳಿ ಅರಣ್ಯ ಗೇಟ್‌ನಲ್ಲಿ ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ತಡೆಹಿಡಿಯಲಾಗಿದೆ” ಎಂದು ಕಿಡಿಕಾರಿದರು.
ಬಳ್ಳೆ ರಮೇಶ್ ಮಾತನಾಡಿ, “ಅರಣ್ಯ ಇಲಾಖೆಯ ಅಡ್ಡಿಪಡಿಸುವ ಪ್ರಯತ್ನಗಳ ನಡುವೆಯೂ, ಗ್ರಾಮಸಭೆಗಳ ಒಪ್ಪಿಗೆಯೊಂದಿಗೆ ಮೇ 5ರಿಂದ 7ರವರೆಗೆ ಬಾಳೆಕೋವು ಹಾಡಿಯಲ್ಲಿ ಸಮುದಾಯ ಸಂವಾದ ಯಶಸ್ವಿಯಾಗಿ ನಡೆಯಿತು. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ವಿವಿಧ ಆದಿವಾಸಿ ಹೋರಾಟಗಾರರು, ಸಮುದಾಯ ನಾಯಕರು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಂವಾದದಲ್ಲಿ ಕೊಡಗಿನ ಕಾಫಿ ತೋಟಗಳಲ್ಲಿ ನಡೆಯುತ್ತಿರುವ ಕಾರ್ಮಿಕ ಮತ್ತು ಮಾನವ ಹಕ್ಕು ಉಲ್ಲಂಘನೆಗಳ ಪ್ರಶ್ನೆಯೂ ಪ್ರಸ್ತಾಪಿಸಲಾಯಿತು. AISA ಮತ್ತು FFF ಕರ್ನಾಟಕ ಸಂಘಟನೆಗಳ ಸದಸ್ಯರೂ ಬೆಂಬಲ ಸೂಚಿಸಿದರು” ಎಂದು ಹೇಳಿದರು.

“ಮೂರ್ಕಲ್ ಪ್ರದೇಶ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ‘ಕೋರ್ ಏರಿಯಾ’ ಒಳಗಿದೆ ಎಂಬ ಕಾರಣ ನೀಡಿ ಕಾರ್ಯಕ್ರಮ ತಡೆಯಲು ಅರಣ್ಯ ಇಲಾಖೆ ಮುಂದಾಗಿತ್ತು. ಆದರೆ, ಗ್ರಾಮಸಭೆಗಳಿಗೆ ಯಾವುದೇ ‘ಕೋರ್ ಏರಿಯಾ’ ಘೋಷಣೆ ಕುರಿತು ಮಾಹಿತಿ ನೀಡಿಲ್ಲ ಹಾಗೂ ಒಪ್ಪಿಗೆಯನ್ನೂ ಪಡೆಯಲಾಗಿಲ್ಲ ಎಂದು ಎನ್ಎಜೆಹೆಚ್ಎಸ್ಎಸ್ ಪ್ರಶ್ನಿಸಿದೆ. ಅರಣ್ಯ ಇಲಾಖೆಯ ಏಕಪಕ್ಷೀಯ ಅಧಿಸೂಚನೆ ಆಧರಿಸಿ ಸಂವಿಧಾನಾತ್ಮಕ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು

ಜೆ ಎಸ್ ರಾಮಕೃಷ್ಣ ಮಾತನಾಡಿ, “ಅರಣ್ಯ ಸಿಬ್ಬಂದಿ ಮತ್ತು ಅರೆಸೈನಿಕರನ್ನು ಬಳಸಿ ಆದಿವಾಸಿಗಳನ್ನು ಬೆದರಿಸುವುದು, ಅತಿಥಿಗಳನ್ನು ಗಂಟೆಗಳ ಕಾಲ ತಡೆಹಿಡಿಯುವುದು ಹಾಗೂ ಪವಿತ್ರ ಆಚರಣೆಗಳನ್ನು ತಡೆಯುವುದು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧಗಳಾಗಿವೆ. ಜೇನುಕುರುಬ ಸಮುದಾಯವು ವಿಶೇಷವಾಗಿ ‘ಅತಿ ದುರ್ಬಲ ಜನಾಂಗೀಯ ಗುಂಪು'(PVTG) ಎಂದು ಮಾನ್ಯತೆ ಪಡೆದಿದ್ದು, FRA 2006ರ ಸೆಕ್ಷನ್ 3(1)(e) ಅಡಿಯಲ್ಲಿ ವಾಸಸ್ಥಳ ಹಾಗೂ ಆವಾಸಸ್ಥಾನದ ಹಕ್ಕುಗಳನ್ನು ಹೊಂದಿದೆ” ಎಂದರು.
“ಅರಣ್ಯ ಇಲಾಖೆ ಅನುಸರಿಸುತ್ತಿರುವ ‘ವಸಾಹತುಶಾಹಿ ಸಂರಕ್ಷಣೆ’ ಮನೋಭಾವವನ್ನು ಸಮಿತಿ ತೀವ್ರವಾಗಿ ಖಂಡಿಸಿದೆ. ಆದಿವಾಸಿಗಳನ್ನು ಕಾಡಿನ ರಕ್ಷಕರಾಗಿ ಕಾಣುವ ಬದಲು ‘ವನ್ಯಜೀವಿಗಳಿಗೆ ಅಪಾಯ’ವೆಂದು ಚಿತ್ರಿಸಲಾಗುತ್ತಿದೆ ಎಂದು ಆರೋಪಿಸಿ, ‘ಅರಣ್ಯ ಹಕ್ಕುಗಳ ಕಾಯ್ದೆ ಕೇವಲ ಕಾಗದದ ತುಂಡಲ್ಲ; ಅದು ಐತಿಹಾಸಿಕ ಅನ್ಯಾಯಕ್ಕೆ ನೀಡಲಾದ ಸಂವಿಧಾನಾತ್ಮಕ ಮಾನ್ಯತೆ’ ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚೌಡಮ್ಮ ಮಾತನಾಡಿ, “1996ರಲ್ಲಿ ತಾಜ್ ರೆಸಾರ್ಟ್ ನಿರ್ಮಾಣವನ್ನು ತಡೆದ ಐತಿಹಾಸಿಕ ಸ್ಥಳವಾದ ಮೂರ್ಕಲ್ ಅರಣ್ಯ ಇಲಾಖೆಯ ಆಸ್ತಿ ಅಲ್ಲ; ಅದು ಬೆಟ್ಟ ಕುರುಬ, ಜೇನುಕುರುಬ, ಪಣಿಯಾ, ಯರವ ಮತ್ತು ಸೋಲಿಗ ಸಮುದಾಯಗಳ ಪವಿತ್ರ ನೆಲವಾಗಿದೆ. ‘ನಾವು ಅನುಮತಿ ಬೇಡುವವರಲ್ಲ; ಕಾನೂನುಬದ್ಧ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಚಲಾಯಿಸುವವರು. ನಮ್ಮ ಹಕ್ಕುಗಳನ್ನು ಶರಣಾಗಿಸುವುದಿಲ್ಲ” ಎಂದು ಹೇಳುತ್ತ ಇಲಾಖೆ ಕ್ರಮ ಖಂಡಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ಶೋಷಿತರ ಗಟ್ಟಿ ಧ್ವನಿ ಎನ್ ರಾಚಯ್ಯ ‘ಸಮಾನತೆಯ ಸಮಾಜʼದ ಕನಸುಗಾರ….

ಆದಿವಾಸಿಗಳು ಕೇವಲ ಅರಣ್ಯದ ನಿವಾಸಿಗಳಲ್ಲ; ಅವರು ಅರಣ್ಯದ ಜೀವನಾಡಿ, ಪ್ರಕೃತಿಯ ನಿಜವಾದ ಸಂರಕ್ಷಕರು. ಅವರ ಹಕ್ಕುಗಳನ್ನು ಕಸಿಯುವುದು ಎಂದರೆ ಸಂವಿಧಾನದ ಆತ್ಮವನ್ನೇ ನಿರ್ಲಕ್ಷಿಸುವಂತಾಗಿದೆ. ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಆಚರಣೆ, ಬದುಕಿನ ವಿಧಾನ ಮತ್ತು ಅರಣ್ಯದೊಂದಿಗೆ ಇರುವ ಅವಿನಾಭಾವ ಸಂಬಂಧವನ್ನು ಗೌರವಿಸುವುದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ನೈತಿಕ ಮತ್ತು ಕಾನೂನುಬದ್ಧ ಜವಾಬ್ದಾರಿಯಾಗಿದೆ. ಅರಣ್ಯ ಕಿರು ಉತ್ಪನ್ನಗಳ ಸಂಗ್ರಹ, ಬಳಕೆ ಮತ್ತು ಮಾರಾಟಕ್ಕೆ ಸೂಕ್ತ ಅವಕಾಶ ಕಲ್ಪಿಸಿ, ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಿ, ಆದಿವಾಸಿಗಳಿಗೆ ಗೌರವಯುತ ಬದುಕಿನ ದಾರಿ ತೆರೆದಿಡಬೇಕಿದೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ಬದುಕು ಕಸಿಯುವುದಲ್ಲ, ಹಕ್ಕುಗಳನ್ನು ಉಳಿಸಿ ಬದುಕಲು ಅವಕಾಶ ಕಲ್ಪಿಸುವ ದಿಕ್ಕಿನಲ್ಲಿ ಸರ್ಕಾರ ನಡೆದುಕೊಂಡಾಗ ಮಾತ್ರ ಸಾಮಾಜಿಕ ನ್ಯಾಯದ ಅರ್ಥ ಸಾರ್ಥಕವಾಗುತ್ತದೆ.




