ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ವತಿಯಿಂದ “ಹಿಂದಿ ಭಾಷೆ ಸಾಹಿತ್ಯದ ವಿವಿಧ ಆಯಾಮಗಳು” ವಿಷಯದ ಕುರಿತು ಸೆಪ್ಟೆಂಬರ್ 30ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ವಿಚಾರ ಸಂಕಿರಣದ ಸಂಯೋಜಕ ಪ್ರೊ. ನಾಮದೇವ ಎಂ.ಗೌಡ ತಿಳಿಸಿದ್ದಾರೆ.
ಭಾಷೆ ಹಾಗೂ ಸಾಹಿತ್ಯದ ಕುರಿತು ಇತ್ತೀಚಿನ ದಿನಗಳಲ್ಲಿ ಸಮಗ್ರ ಚಿಂತನೆ ಮತ್ತು ಚರ್ಚೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಠಿತ ವಿದ್ವಾಂಸರನ್ನು ಆಹ್ವಾನಿಸಿ, ವಿದ್ಯಾರ್ಥಿನಿಯರಲ್ಲಿ ಹಿಂದಿ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಹಾಗೂ ಅಧ್ಯಯನ ಮನೋಭಾವ ಬೆಳೆಸುವುದು ವಿಚಾರ ಸಂಕಿರಣದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಚಾರ ಸಂಕಿರಣವನ್ನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಉದ್ಘಾಟಿಸಲಿದ್ದು, ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯಕುಮಾರ ಬಿ. ಅಜೂರ ಉಪಸ್ಥಿತರಿರಲಿದ್ದಾರೆ.
ಮಹಾರಾಷ್ಟ್ರದ ನಲದುರ್ಗದ ಪ್ರೊ. ಹಾಶಿಂಬೆಗ್ ಮಿರ್ಜಾ ಹಾಗೂ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಭಾವನಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಹಿಂದಿ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಚಾರ ಮಂಡಿಸಲಿದ್ದಾರೆ.
This video cannot be played in your browser. Open the video directly
ವಿಚಾರ ಸಂಕಿರಣದ ಅಂಗವಾಗಿ ದಿನವಿಡೀ ವಿವಿಧ ಗೋಷ್ಠಿಗಳು ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.
ವಿಶ್ವವಿದ್ಯಾಲಯದ ಐಕ್ಯುಎಸಿ ನಿರ್ದೇಶಕರಾದ ಪ್ರೊ. ಶಾಂತಾದೇವಿ ಟಿ. ಹಾಗೂ ಪ್ರೊ. ಮಹೇಶ ಚಿಂತಾಮಣಿ ಅವರು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೌಲ್ಯಮಾಪನ ಕುಸಚಿವರಾದ ಪ್ರೊ. ಬಿ.ಎಲ್. ಲಕ್ಷ್ಮಣವರ್ ವಹಿಸಲಿದ್ದಾರೆ. ಪ್ರೊ. ರಾಜು ಬಾಗಲಕೋಟ, ಡಾ. ಗುಲಾಬ್ ರಾಠೋಡ್ ಹಾಗೂ ಡಾ. ಅಮರನಾಥ ಪ್ರಜಾಪತಿ ಉಪಸ್ಥಿತರಿರಲಿದ್ದಾರೆ ಎಂದು ಪ್ರೊ. ನಾಮದೇವ ಎಂ.ಗೌಡ ತಿಳಿಸಿದ್ದಾರೆ.





