ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಕೇಳಿರುವ ಪ್ರಶ್ನೆಗೆ ಸಂಬಂಧಿಸಿದಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ನೀಡಿರುವ ʼದಲಿತರು ಆರ್‌ಎಸ್‌ಎಸ್ ಬಗ್ಗೆ ಚಕಾರ ಎತ್ತಿದರೆ ಸರ್ವನಾಶವಾಗುತ್ತಾರೆʼ ಎಂಬ ರೀತಿಯ ಹೇಳಿಕೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅವರ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ರಾಜು ಆಲಗೂರ ಟೀಕಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಸಚಿವ ಪ್ರಿಯಾಂಕ್ ಖರ್ಗೆ ಅವರು ಗೃಹಮಂತ್ರಿಯಾಗಿ ಹಾಗೂ ದೇಶದ ಪ್ರಜೆಯಾಗಿ ಆರ್‌ಎಸ್‌ಎಸ್‌ನ ನೋಂದಣಿ ಮತ್ತು ಅದರ ಕಾನೂನುಬದ್ಧ ಸ್ಥಿತಿಗತಿ ಕುರಿತು ಪ್ರಶ್ನೆ ಎತ್ತಿದ್ದಾರೆ. ಆದರೆ, ಅದಕ್ಕೆ ಉತ್ತರ ನೀಡುವ ಬದಲು ಆರ್‌ಎಸ್‌ಎಸ್ ನೀತಿಗಳನ್ನು ಸರಮರ್ಥಿಸಿಕೊಂಡಿರುವುದು ಖಂಡನೀಯ ಎಂದರು.
“ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಪ್ರಶ್ನಿಸುವ, ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ಸಾರ್ವಜನಿಕ ಸಂಸ್ಥೆಗಳ ಕುರಿತು ಮಾಹಿತಿ ಕೇಳುವ ಹಕ್ಕನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಂಘಟನೆ ಬಗ್ಗೆ ಪ್ರಶ್ನಿಸಿದರೆ ಸರ್ವನಾಶವಾಗುತ್ತದೆ ಎನ್ನುವ ಹೇಳಿಕೆ ನೀಡುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತರುವಂತದ್ದು” ಎಂದು ಹೇಳಿದರು.
“ದಲಿತರು ಆರ್‌ಎಸ್‌ಎಸ್ ಬಗ್ಗೆ ಪ್ರಶ್ನಿಸಿದರೆ ಸರ್ವನಾಶವಾಗುವುದಾದರೆ, ಅದು ಪ್ರಜಾಪ್ರಭುತ್ವವನ್ನು ನಂಬುವ ಸಂಘಟನೆಯೇ ಅಥವಾ ಭಯೋತ್ಪಾದನಾ ಮನೋಭಾವದ ಸಂಘಟನೆಯೇ ಎಂಬ ಅನುಮಾನ ಮೂಡುತ್ತದೆ” ಎಂದು ಆಲಗೂರ ವಾಗ್ದಾಳಿ ನಡೆಸಿದರು.
“ಸಂಸದ ರಮೇಶ ಜಿಗಜಿಣಗಿ ಅವರು ದಲಿತ ಸಮುದಾಯದ ಪ್ರತಿನಿಧಿಯಾಗಿ ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದರೆ, ಲೋಕಸಭೆಯಲ್ಲಾಗಲಿ ಅಥವಾ ಸಾರ್ವಜನಿಕ ವೇದಿಕೆಗಳಲ್ಲಾಗಲಿ ದಲಿತರ ಮೂಲಭೂತ ಸಮಸ್ಯೆಗಳು, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಎಷ್ಟು ಬಾರಿ ಧ್ವನಿ ಎತ್ತಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು” ಎಂದು ಪ್ರಶ್ನಿಸಿದರು.
“ಸಾರ್ವಜನಿಕ ಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಬೆದರಿಕೆ ಧಾಟಿಯ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕನ್ನು ಗೌರವಿಸಬೇಕು” ಎಂದು ಆಲಗೂರ ಆಗ್ರಹಿಸಿದರು.
ಇದನ್ನೂ ಓದಿದ್ದೀರಾ? ಸಮಸಮಾಜದ ಕಲ್ಪನೆ ಪ್ರತಿಪಾದಿಸಿದವರಲ್ಲಿ ನಯಸೇನ ಆಚಾರ್ಯರೂ ಒಬ್ಬರು: ಪ್ರೊ. ಹಾ ಮಾ ನಾಗರ್ಜುನ
ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಚರ್ಚೆ ನಡೆಯಬೇಕು. ವ್ಯಕ್ತಿಗಳು ಅಥವಾ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಗೌರವಿಸಬೇಕಿದ್ದು, ಸಾರ್ವಜನಿಕ ಜೀವನದಲ್ಲಿರುವವರು ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು ಎಂದು ರಾಜು ಆಲಗೂರ ತಿಳಿಸಿದ್ದಾರೆ.




