ನಗರದಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಲಂ ಜನಾಂದೋಲನ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ.
ಧರಣಿ ಉದ್ದೇಶಿಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೇಣುಕಾ ಸರಡಿಗಿ ಮಾತನಾಡಿ, ‘ಯಾದಗಿರಿ ನಗರದ ನಿವೇಶನ ರಹಿತರ ಸಮಸ್ಯೆಯನ್ನು 2017ರಿಂದ ಜಿಲ್ಲಾಡಳಿತದ ಗಮನಕ್ಕೆ ತರಲಾಗುತ್ತಿದೆ. 2020ರಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಆರು ದಿನಗಳ ಕಾಲ ಧರಣಿ ನಡೆಸಿದ ಸಂದರ್ಭದಲ್ಲಿ ಮುಂಡರಗಿಯಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ನೀಡುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಬಳಿಕ ಕೋವಿಡ್ ಕಾರಣದಿಂದ ಪ್ರಕ್ರಿಯೆ ಸ್ಥಗಿತಗೊಂಡಿತು’ ಎಂದು ತಿಳಿಸಿದ್ದಾರೆ.
‘2021ರಲ್ಲಿ ಮತ್ತೆ ಪ್ರತಿಭಟನೆ ನಡೆಸಿ ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2023ರ ಮಾರ್ಚ್‌ನಲ್ಲಿ 15 ದಿನಗಳ ಕಾಲ ಅನಿರ್ದಿಷ್ಟ ಸತ್ಯಾಗ್ರಹ ನಡೆಸಿದಾಗ, ಚುನಾವಣೆ ಬಳಿಕ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಮಸ್ಯೆ ಬಗೆಹರಿದಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘2025ರ ಡಿಸೆಂಬರ್ 5ರಂದು ಹಾಗೂ 2026ರ ಜೂನ್ 10ರಂದು ಜಿಲ್ಲಾಧಿಕಾರಿಗಳಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ನಿವೇಶನ ರಹಿತರ ಬೇಡಿಕೆ ಈಡೇರುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ; ಕಾರಾಗೃಹ ಡಿಐಜಿ ಬಂಧನ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಶಾಹಾಪೂರಕರ್, ಸಂಚಾಲಕಿ ಸಂಗೀತಾ ಹಪ್ಪಳ, ಉಪಾಧ್ಯಕ್ಷೆ ಈರಮ್ಮ ಕೋಳೂರ, ಉಪಾಧ್ಯಕ್ಷರು ಯಂಕಮ್ಮ ಮಾಳಿಕೇರಿ, ಸ್ಲಂ ಮಹಿಳಾ ಮುಖಂಡರ ಶಂಕ್ರಮ್ಮ ಕೋಟಿಮನಿ ಸೇರಿದಂತೆ ಇನ್ನಿತರರು ಭಾಗವಹಿಸಿದರು.




