ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಸಮುದಾಯ ಆಧಾರಿತ ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ವರ್ಲ್ಡ್ ವಿಷನ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಶಹಾಪುರದ ವ್ಯವಸ್ಥಾಪಕ ಅನಿಲ್ ತೇಜಪ್ಪ ಬಲ್ಲೂರ್ಕರ್ ಹೇಳಿದರು.
ಬೆನಕನಹಳ್ಳಿ ಗ್ರಾಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ವತಿಯಿಂದ ಗ್ರಾಮ ಮಟ್ಟದ ಕಾರ್ಯಕರ್ತೆಯರಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ನಡುವೆ ಉತ್ತಮ ಸಹಕಾರ ಮತ್ತು ಸಮನ್ವಯತೆ ಅಗತ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಸಮುದಾಯದ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಗುರುತಿಸಿ ಸೂಕ್ತ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಸೀನಿಯರ್ ಹೆಲ್ತ್ ಆಫೀಸರ್ ನಾಗರಾಜ್ ಹೊಸಮನಿ ಅವರು ಆರೋಗ್ಯದ ಮಹತ್ವ ಕುರಿತು ಮಾಹಿತಿ ನೀಡಿದರು. ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಮಕ್ಕಳ ಆರೈಕೆ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ವಿವರಿಸಿದ ಅವರು, ಆರೋಗ್ಯಕರ ಕುಟುಂಬ ಮತ್ತು ಸಮುದಾಯ ನಿರ್ಮಾಣದಲ್ಲಿ ಗ್ರಾಮ ಮಟ್ಟದ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್ಲಪ್ಪ, ಮಾಜಿ ಉಪಾಧ್ಯಕ್ಷ ಆಂಜನೇಯ, ಎಸ್‌ಡಿಎಂಸಿ ಉಪಾಧ್ಯಕ್ಷ ಸಿದ್ದಪ್ಪ, ನಾಗಪ್ಪ ಉಪ್ಪಾರ್, ವೀರೇಶ್ ನಂದಿಹಾಳ, ಶಿವಯೋಗಿ, ಆರೋಗ್ಯ ಅಧಿಕಾರಿ ಪ್ರಿಯಾ, ಅಂಗನವಾಡಿ ಕಾರ್ಯಕರ್ತೆ ಮಹಾದೇವಮ್ಮ, ಆರೋಗ್ಯ ಕಾರ್ಯಕರ್ತೆ ಚಂದ್ರಕಲಾ ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತ ನಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ: ಶಿಕ್ಷಕನಿಗೆ 25 ವರ್ಷ ಜೈಲು
ಮೋಹನ್ ಕುಮಾರ್ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಮಾರ್ಟಿನ್ ಶಾಂತಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಗ್ರಾಮದ ಹಿರಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದ ಸದಸ್ಯರು ಮತ್ತು ಪೋಷಕರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




