ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಪರಶುರಾಮ್ ನೀಲನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜಿಲ್ಲಾ ಸಂಚಾಲಕ ಶರಣು ಎಸ್. ನಾಟೇಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿದ್ದಾರೆ. ಅಸ್ಪೃಶ್ಯತೆ, ಮೂಢನಂಬಿಕೆ ಹಾಗೂ ಮೇಲು-ಕೀಳು ಮನೋಭಾವ ತೊಡೆದುಹಾಕಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗ ತೋರಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಮುಂದಾಗಬೇಕು’ ಎಂದರು.
‘ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 21 ವರ್ಷಗಳಿಂದ ರಾಜ್ಯಾದ್ಯಂತ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ. ಶೋಷಿತ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಸರ್ಕಾರದ ಯೋಜನೆಗಳು ಅರ್ಹ ಬಡಜನರಿಗೆ ತಲುಪುವಂತೆ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.
‘ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಪರಶುರಾಮ್ ನೀಲನಾಯಕ, ದಸಂಸದ ಇತಿಹಾಸ ಮತ್ತು ಹೋರಾಟದ ಹಿನ್ನೆಲೆಯನ್ನು ಅರಿಯದೆ ಇಂತಹ ಹೇಳಿಕೆ ನೀಡಿರುವುದು ಖಂಡನೀಯ’ ಎಂದರು.
‘ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮಹಿಳಾ ಶೋಷಣೆ ಹಾಗೂ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದ್ದು, ಸಾಮಾಜಿಕ ಸಮಾನತೆ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ಬದ್ಧವಾಗಿದೆ’ ಎಂದು ತಿಳಿಸಿದರು.
ಸಭೆಯಲ್ಲಿ ಅಂಜನೇಯ ಯಾದಗಿರಿ, ತಿಪ್ಪಣ್ಣ ಲಂಡನಕರ್, ಖಂಡಪ್ಪ ಸಾಹುಕಾರ್, ಮಹಾದೇವ ಗುರುಸಿಣಿಗಿ, ಮಲ್ಲಿಕಾರ್ಜುನ ನಾಟೇಕರ್ ಹತ್ತಿಗೂಡುರು, ಪ್ರಭು ಕಂಚಕನೂರು ಹಾಗೂ ಭೀಮರಾಯ ಕಾಗಿ ಅವರನ್ನು ಜಿಲ್ಲಾ ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಖಜಾಂಚಿಯಾಗಿ ಭೀಮರಾಯ ಕಾಗಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಮಹಿಳಾ ಸಮಿತಿ ಸಂಚಾಲಕಿಯಾಗಿ ಗಂಗಮ್ಮ ಸುಂಗಲ್ಕರ್ ಹಾಗೂ ಸದಸ್ಯರಾಗಿ ಮಹಾಲಕ್ಷ್ಮಿ ಚೇಪ್ಪಟಲಾ, ಚಂದಮ್ಮ ಬೇಳಿಗೇರಿ, ಮಹಾದೇವಮ್ಮ ಬನ್ನಮ್ಮ ಯಲಸತ್ತಿ ಮತ್ತು ತನ್ನ ತೀರಂ ಸುರಪುರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದನ್ನು ಓದಿದ್ದೀರಾ? ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ ನಡುವೆ ಕಣ್ಣೀರಿಡುತ್ತಿರುವ ಸ್ಲಂ ನಿವಾಸಿಗಳು
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಶಿವಶರಣಪ್ಪ ವಾಡಿ, ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಮಂಜುಳಾ, ರಾಜ್ಯ ಸಮಿತಿ ಸದಸ್ಯೆ ಜ್ಯೋತಿ ದೊಡ್ಡಮನಿ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಅನಸೂಗುರು, ಬಾಬು ತಲಾರಿ, ಬಸವರಾಜ್ ತೇಲಗರ್ ಆಶನಾಳ, ಶರಣು ಚತುರ್ಥಿವೇದಿ, ಶರಣು ಸಿ. ಮಮ್ಮದರ್, ಬಸವರಾಜ್ ಯಮನೂರು, ರಾಮಲಿಂಗ ಮೋಟ್ನಳ್ಳಿ, ಹಣಮಂತ ಕಂಚಕನ್ನೂರು, ಬಸವರಾಜ್ ಯಲಸತ್ತಿ, ನಾಗಪ್ಪ ಯಲಸತ್ತಿ, ಕೃಷ್ಣ ನರಸಪ್ಪ ಸೇರಿದಂತೆ ಹಲವರು ಇದ್ದರು. ಕಲಾವಿದರಾದ ಶಾಂತಯ್ಯ ಮಠಮತಿ ಹಾಗೂ ಸುಭಾಷ್ ದೋರನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.




