ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ರೈತರ ಖಾತೆಗೆ ಕನಿಷ್ಠ ₹25 ಸಾವಿರ ಬರ ಪರಿಹಾರ, ಕೃಷಿ ಸಾಲ ಸಂಪೂರ್ಣ ಮನ್ನಾ ಹಾಗೂ ಕಾಲುವೆಗಳಿಗೆ ನಿರಂತರ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ಗುರುವಾರ ಸುರಪುರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಳಿಕ ಹಿರಿಯ ರೈತ ಮುಖಂಡ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಬೆಳೆಗಳು ಒಣಗುತ್ತಿದ್ದು, ಕೃಷಿಯನ್ನೇ ಅವಲಂಬಿಸಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ಕೇವಲ ₹2,500 ಬರ ಪರಿಹಾರ ರೈತರ ನಷ್ಟಕ್ಕೆ ಹೋಲಿಸಿದರೆ ಸಮರ್ಪಕವಲ್ಲ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನೆರವಿನೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳ ಕೃಷಿ ಸಾಲ ವಸೂಲಾತಿಯನ್ನು ಒಂದು ವರ್ಷ ಮುಂದೂಡುವುದು ಶಾಶ್ವತ ಪರಿಹಾರವಲ್ಲ. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ, ಮುಂದಿನ ಕೃಷಿ ಚಟುವಟಿಕೆಗಳಿಗೆ ಹೊಸ ಸಾಲ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ಸಜ್ಜೆ, ಶೇಂಗಾ, ಮೆಣಸಿನಕಾಯಿ, ಸೂರ್ಯಕಾಂತಿ, ಹತ್ತಿ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಸೆ.27ರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ಬೆಳೆಗಳು ಒಣಗಿ ರೈತರಿಗೆ ಮತ್ತಷ್ಟು ನಷ್ಟವಾಗುವ ಆತಂಕವಿದೆ. ಹೀಗಾಗಿ ಕಾಲುವೆಗಳಿಗೆ ನಿರಂತರ ನೀರು ಹರಿಸಿ, ವಾರಬಂದಿ ವ್ಯವಸ್ಥೆ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಸಾರಿಗೆ ಬಸ್ ದರ ಏರಿಕೆ ಮಾಡಬಾರದು. ದರ ಹೆಚ್ಚಳವಾದರೆ ದುಡಿಯುವ ವರ್ಗ ಹಾಗೂ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಆದ್ದರಿಂದ ಬಸ್ ದರ ಏರಿಕೆ ಪ್ರಸ್ತಾವನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ: ತಂದೆ ವಿರುದ್ಧ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಸಾಹೇಬ್‌ಗೌಡ ಮದಲಿಂಗನಾಳ, ವೆಂಕಟೇಶಗೌಡ ಕುಪಗಲ್, ಹಣಮಂತ್ರಾಯ ಚಂದಲಾಪೂರ, ಮಹಾದೇವಮ್ಮ ಬೇವಿನಾಳಮಠ, ಸೀತಾರಾಮ ರಾಠೋಡ, ದೇವೇಂದ್ರಪ್ಪ ಪತ್ತಾರ, ದೇವಿಂದ್ರಪ್ಪ ಬಳಿಚಕ್ರ, ಲಕ್ಷ್ಮಣಗೌಡ, ತಮ್ಮಪ್ಪ ಬಾಪೂರು, ಅಬ್ದುಲ್ ಮಜೀದ್ ಬಿಚ್ಚಾಲಿ, ಹನುಮಗೌಡ ನಾರಾಯಣಪೂರ, ತಿಪ್ಪಣ್ಣ ಜಂಪಾ, ತಿರುಪತಿ ಕುಪಗಲ್, ಕಾಮರಾಯ ಮದಲಿಂಗನಾಳ, ಮಲ್ಲಣ್ಣ ಹಾಲಭಾವಿ, ಸಾಹೇಬ್‌ಗೌಡ ಮದಲಿಂಗನಾಳ ಸೇರಿದಂತೆ ಹಲವರು ಭಾಗವಹಿಸಿದರು.




