ಯಾದಗಿರಿಯ ಮೈಲಾಪುರದ ಮೈಲಾರಲಿಂಗ ಜಾತ್ರೆ ಸೋಮವಾರ ನಡೆದಿದೆ. ಜಾತ್ರೆಯಲ್ಲಿ ಮೈಲಾರ ಪಲ್ಲಕಿ ಮೇಲೆ ಭಕ್ತರು ಕುರಿಮರಿಗಳನ್ನು ಎಸೆಯುವ ಸಂಪ್ರದಾಯಕ್ಕೆ ಜಿಲ್ಲಾಡಳಿತ ತಡೆಯೊಡ್ಡಿತ್ತು. ಭಕ್ತರು ತಂದಿದ್ದ ಕುರಿಮರಿಗಳನ್ನು ದೇವಾಲಯ ಪ್ರವೇಶ ರಸ್ತೆಯಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವುಗಳನ್ನು ಹರಾಜು ಹಾಕಿದ್ದು, ದೇವಾಲಯಕ್ಕೆ ಆದಾಯ ಬಂದಿದೆ.
ಪ್ರತಿವರ್ಷವೂ ಸಂಕ್ರಾಂತಿ ವೇಳೆ ನಡೆಯುವ ಜಾತ್ರೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೂರಾರು ಭಕ್ತರು ಕುರಿಮರಿಗಳನ್ನು ತಂದು, ಉತ್ಸವ ಪಲ್ಲಕ್ಕೆ ಮೇಲೆ ಎಸೆಯುತ್ತಿದ್ದರು. ಈ ರೀತಿ ಎಸೆಯುವುದು ಪ್ರಾಣಿಹಿಂಸೆಯಾಗುತ್ತದೆ ಎಂದು ಅಂತಹ ಪದ್ದತಿಗೆ ಈ ವರ್ಷ ಜಿಲ್ಲಾಡಳಿತ ತಡೆಯೊಡ್ಡಿತ್ತು. ದೇವಾಲಯಕ್ಕೆ ಬರುವ ರಸ್ತೆಗಳನ್ನು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಪರಿಶೀಲನೆ ನಡೆಸಿತ್ತು. ಇದರಿಂದಾಗಿ, ಸುಮಾರು 683 ಕುರಿಮರಿಗಳನ್ನು ಅಧಿಕಾರಿಗಳು ಭಕ್ತರಿಂದ ವಶಕ್ಕೆ ಪಡೆದಿದ್ದರು.
ಜಿಲ್ಲಾಡಳಿತ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಹಲವರು ಭಾಗವಹಿಸಿದ್ದರು. ಪ್ರತಿ ಕುರಿಮರಿಗಳಿಗೆ 1,400ರಿಂದ 2,900 ರೂ.ವರೆಗಿನ ಮೌಲ್ಯಕ್ಕೆ 8 ಮಂದಿ ಟೆಂಡರ್ ಪಡೆದುಕೊಂಡಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಸುಮಾರು 12 ಲಕ್ಷಕ್ಕೂ ಅಧಿಕ ಹಣ ಬಂದಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣ ಭೂಪಾಲರೆಡ್ಡಿ ತಿಳಿಸಿದ್ದಾರೆ.