ಬರಗಾಲ, ಅಂತರ್ಜಲ ಕುಸಿತ, ಸುಡುಬಿಸಿಲು ಹಾಗೂ ಕೃಷಿ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸಬೇಕು ಎಂದು ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶದ ಬಾಗಲಕೋಟೆ ಜಿಲ್ಲಾ ಘಟಕ ಆಗ್ರಹಿಸಿದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘ, ಸಕ್ಕರೆ, ಎಥನಾಲ್, ಕಾಕಂಬಿ, ಬಗಾಸ್ ಸೇರಿದಂತೆ ಉಪಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ದೊರೆಯುವ ಆದಾಯದಲ್ಲೂ ರೈತರಿಗೆ ನ್ಯಾಯಯುತ ಪಾಲು ನೀಡಬೇಕು ಎಂದು ಒತ್ತಾಯಿಸಿದೆ.
ಕಬ್ಬು ಪೂರೈಸಿದ 15 ದಿನಗಳೊಳಗೆ ಬಿಲ್ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು. ವಿಳಂಬ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕ ಮಾಪನ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಂಘದ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಆಗ್ರಹಿಸಿದರು.
ಪ್ರತಿ ವರ್ಷ ಬೆಲೆಗಾಗಿ ರೈತರು ಹೋರಾಟ ನಡೆಸುವುದನ್ನು ತಪ್ಪಿಸಲು, ಕಬ್ಬು ಹಂಗಾಮು ಆರಂಭಕ್ಕೂ ಮುನ್ನವೇ ರೈತ ಸಂಘಟನೆಗಳು, ಕಾರ್ಖಾನೆ ಮಾಲೀಕರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಬೆಲೆ ನಿಗದಿಪಡಿಸುವ ಶಾಶ್ವತ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಶೋಕ ಮಂತ್ರಿ, ಮಲ್ಲಪ್ಪ ಗಾಣಿಗೇರ ಹಾಗೂ ಬಸಯ್ಯ ಮೂತಿಮಠ ಉಪಸ್ಥಿತರಿದ್ದರು.





