ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ಸೋಮವಾರ ಶಾಹಪುರ್ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಅರ್ಥಪೂರ್ಣವಾಗಿ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, “ರಕ್ತದಾನವು ಮಹಾದಾನಗಳಲ್ಲಿ ಶ್ರೇಷ್ಠವಾದದ್ದು. ರಕ್ತದ ಕೊರತೆಯಿಂದ ಅನೇಕ ಬಡ ಮತ್ತು ಅವಶ್ಯಕತೆಯಿರುವ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡುವುದರಿಂದ ಅವರ ಜೀವ ಉಳಿಸಲು ನೆರವಾಗಬಹುದು. ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವುದು ಅಗತ್ಯ” ಎಂದು ಹೇಳಿದರು.

ಅವರು ಮುಂದುವರಿದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಶ್ರೀಶೈಲ ಹೊಸಮನಿ ಮಾತನಾಡಿ, ‘ಅಂಬೇಡ್ಕರ್ ಅವರ ತತ್ವಗಳು ಸಮಾನತೆ, ಮಾನವೀಯತೆ ಮತ್ತು ಸಹೋದರತ್ವವನ್ನು ಸಾರುತ್ತವೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಹಕಾರ ಮನೋಭಾವವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.

‘ಸಮಾಜಮುಖಿ ಚಟುವಟಿಕೆಗಳ ಮೂಲಕ ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಯಿತು ಎಂದು ಅವರು ಹೇಳಿದರು.
ಈ ರಕ್ತದಾನ ಶಿಬಿರದಲ್ಲಿ ಒಟ್ಟು 30 ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ರಕ್ತದಾನ ಮಾಡಿದವರನ್ನು ಆಯೋಜಕರು ಅಭಿನಂದಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಎಸ್ಐಆರ್; “ಕಾಗದ ಪತ್ರಗಳಿಗಿಂತ ಜೀವಂತ ಮನುಷ್ಯರೇ ಮುಖ್ಯ”: ಮರೆಪ್ಪ ಚಟ್ಟೇರಕರ್
ಈ ಸಂದರ್ಭದಲ್ಲಿ ಜಯಂತೋತ್ಸವ ಅಧ್ಯಕ್ಷ ರಾಜು ಅಣಬಿ, ಶಿವಕುಮಾರ್ ತಳವಾರ್, ಶೇಖರ್ ಬಡಿಗೇರ್, ಬಸವರಾಜ ಚಿಪ್ಪರ್, ಶಿವು ಪೋತೆ, ನಿಂಗಪ್ಪ ದೋರನಹಳ್ಳಿ, ಶರಣು ದೋರನಹಳ್ಳಿ, ಸಂತೋಷ ಗೋಗಿ, ಮರಲಿಂಗ ಸಾವೂರ್, ರಾಯಪ್ಪ ಸಾಲಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




