ಶಹಾಪುರ್ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಪುಸ್ತಕ ಪ್ರೇಮಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಲ್ಲಿಕಾರ್ಜುನ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಶೋಷಿತರು ಮತ್ತು ಹಿಂದುಳಿದವರ ಧ್ವನಿಯಾಗಿದ್ದರು ಎಂದು ಹೇಳಿದರು. ಅವರ ಆದರ್ಶಗಳನ್ನು ಇಂದಿನ ಪೀಳಿಗೆ ಅರಿತುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಸಿದ್ದಣ್ಣಗೌಡ ಪೊಲೀಸ್ ಪಾಟೀಲ್ ಮಾತನಾಡಿ, “ಭಾರತದ ಸಂವಿಧಾನವು ಇಡೀ ಜಗತ್ತಿಗೆ ಮಾದರಿಯಾದ ಶ್ರೇಷ್ಠ ಗ್ರಂಥವಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಅರ್ಥ ಮತ್ತು ಮೌಲ್ಯಗಳನ್ನು ಅರಿತುಕೊಳ್ಳಬೇಕು. ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ನಡೆಯಬೇಕು” ಎಂದು ತಿಳಿಸಿದರು.

ನೀಲಕಂಠ ಬಡಿಗೇರ ಮಾತನಾಡಿ, “ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣದ ಕನಸು ಕಂಡ ಮಹಾನ್ ಚಿಂತಕರು. ಆ ಕನಸನ್ನು ಸಾಕಾರಗೊಳಿಸಲು ಅಂಬೇಡ್ಕರ್ ಅವರು ಜೀವನವನ್ನೇ ಸಮರ್ಪಿಸಿದರು. ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ ಅವರು, ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಒದಗಿಸಿದರು” ಎಂದು ಹೇಳಿದರು.

“ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ಸಂವಿಧಾನದ ಮೂಲಕ ಪಡೆದಿದ್ದಾರೆ. ಶೋಷಿತರ ಪ್ರತಿಯೊಬ್ಬರ ರಕ್ತದ ಕಣದಲ್ಲೂ ಅಂಬೇಡ್ಕರ್ ಇದ್ದಾರೆ” ಎಂದು ಅವರು ಅಭಿಪ್ರಾಯಪಟ್ಟರು.
ಖಾಸಮಠ ಗುರಮಿಠಕಲ್ ಮುರಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, “ಶರಣ ಚಿಂತನೆ, ಬುದ್ಧ ಹಾಗೂ ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವುದು ಇಂದಿನ ಅಗತ್ಯವಾಗಿದೆ. ಹುರಸಗುಂಡಗಿ ಗ್ರಾಮದಲ್ಲಿ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ” ಎಂದು ಹೇಳಿದರು.

“ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ದಾರಿ ತೋರಿವೆ. ಪ್ರತಿಯೊಬ್ಬರ ಮನೆಯ ಜಗಲಿಗಳ ಮೇಲೆ ದೇವರ ಚಿತ್ರಗಳ ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರ, ಸಂವಿಧಾನದ ಪೀಠಿಕೆ ಮತ್ತು ಚಿಂತನೆಗಳ ಪುಸ್ತಕಗಳು ಇರಬೇಕು” ಎಂದು ಸಲಹೆ ನೀಡಿದರು.
ದಸಂಸ ಹಿರಿಯ ಮುಖಂಡ ಮರೆಪ್ಪ ಚಟ್ಟೇಕರ್ ಮಾತನಾಡಿ, “ಅಂಬೇಡ್ಕರ್ ಅವರ ವಿಚಾರಗಳು ಕೇವಲ ಶೋಷಿತರ ಪರವಾಗಿಯೇ ಅಲ್ಲ, ಇಡೀ ಮಾನವಕುಲದ ಹಿತಕ್ಕಾಗಿ ಇದ್ದವು. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಭಾರತವನ್ನು ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿದೆ” ಎಂದರು.

“ಮಕ್ಕಳಿಗೆ ಉನ್ನತ ಶಿಕ್ಷಣದ ಜೊತೆಗೆ ಅಂಬೇಡ್ಕರ್ ಅವರ ಚಿಂತನೆಗಳನ್ನು ತಿಳಿಸಬೇಕು. ಸಂವಿಧಾನದ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು, ಮತದಾನದ ಹಕ್ಕು ಮತ್ತು ಗೌರವಯುತ ಬದುಕನ್ನು ನೀಡಿದವರು ಅಂಬೇಡ್ಕರ್” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಪ್ರಕಾಶ ಮಹಾಸ್ವಾಮಿಗಳು ಮಾತನಾಡಿ, “ಅಂಬೇಡ್ಕರ್ ಜಯಂತಿ ಜ್ಞಾನ, ಜಾಗೃತಿ, ವಿಜ್ಞಾನ ಮತ್ತು ಸಾಮಾಜಿಕ ಅರಿವಿನ ಜಯಂತಿಯಾಗಿದೆ. ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಇದು ಯಾವ ಚಿನ್ನಕ್ಕಿಂತಲೂ ಅಮೂಲ್ಯ” ಎಂದು ಹೇಳಿದರು.

“ಬುದ್ಧನ ಶಾಂತಿ, ಬಸವಣ್ಣನವರ ಕ್ರಾಂತಿ ಹಾಗೂ ಅಂಬೇಡ್ಕರ್ ಅವರ ಜ್ಞಾನವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಇವು ಯಾವತ್ತೂ ಆರದ ದೀಪಗಳಂತೆ ಸಮಾಜಕ್ಕೆ ಬೆಳಕು ನೀಡುತ್ತವೆ” ಎಂದು ಹೇಳಿದರು.
ಅವರು ಮುಂದುವರಿದು, “ಅಸಮಾನತೆ, ಅಸ್ಪೃಶ್ಯತೆ ಹಾಗೂ ಶೋಷಣೆಯ ವಿರುದ್ಧ ಹೋರಾಡಿ ಸಮಾಜಕ್ಕೆ ಹೊಸ ದಿಕ್ಕು ನೀಡಿದವರು ಅಂಬೇಡ್ಕರ್. ನಾವು ಇಂದು ಮನುಷ್ಯರಾಗಿ ಗೌರವದಿಂದ ಬದುಕುತ್ತಿರುವುದಕ್ಕೆ ಅವರ ಶ್ರಮವೇ ಕಾರಣ” ಎಂದು ತಿಳಿಸಿದರು.

ಗ್ರಾಮದಲ್ಲಿ ಅಂಬೇಡ್ಕರ್ ಸ್ಟಡಿ ಸರ್ಕಲ್ ಆರಂಭಿಸಿ, ಡಿಜಿಟಲ್ ಗ್ರಂಥಾಲಯ ಹಾಗೂ ಮಕ್ಕಳಿಗಾಗಿ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂದು ಕರೆ ನೀಡಿದ ಅವರು, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟು ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪೆನ್, ನೋಟ್‌ಬುಕ್, ಬ್ಯಾಗ್ ಸೇರಿದಂತೆ ವಿದ್ಯಾಭ್ಯಾಸಕ್ಕೆ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮಂಜುನಾಥ ತೇಳಿಗೇರಿ, ಶೇಖರ್ ಬಡಿಗೇರ ಸ್ವಾಗತಿಸಿದರು ಮೌನೇಶ ವಂದಿಸಿದರು.
ಈ ಸಂದರ್ಭದಲ್ಲಿ ರಾಜು ಅಣಬಿ, ಮಲ್ಲಿಕಾರ್ಜುನ ಪೂಜಾರಿ, ಶರಣು ಹುರಸಗುಂಡಗಿ, ಶ್ರೀಶೈಲ ಹೊಸ್ಮನಿ, ನಾಗಣ್ಣ ಬಡಿಗೇರ, ಮರೆಪ್ಪ ಚಟ್ಟರಕರ್, ರಾಮಣ್ಣ ಸಾದ್ಯಾಪೂರ್, ಶಿವಪುತ್ರ ಜವಳಿ, ಗುರುನಾಥ ಬಾಣತಿಹಾಳ, ಚಂದ್ರಶೇಖರ ಜಿನ್ಕೇರಿ, ಮಾಹಾದೇವಿ ದಿಗ್ಗಿ, ನಿಜಗುಣ ಪೂಜಾರಿ, ಶರಣು ದೋರನಹಳ್ಳಿ, ಶಿವು ಪೋತೆ, ಮಹಾಲಿಂಗಪ್ಪ ನಾಯ್ಕಲ್, ಶರಭಣ್ಣ ದೋರನಹಳ್ಳಿ, ಶರಣು ತಂಗಡಗಿ, ಮಾಳಪ್ಪ ಸಲಾದಪೂರ್, ವಿಶ್ವ ನಾಟೇಕಾರ, ಬಸಲಿಂಗಪ್ಪ ಕೋಳಿ, ಸೈಯುಬು ಚಿತ್ತಾಪೂರಕರ್, ಸುನೀಲ್ ಹೊಸಮನಿ, ಬಸವರಾಜ ಚಿಪ್ಪರ್, ನಿಂಗಪ್ಪ ದೋರನಹಳ್ಳಿ, ಸಂತೋಷ ಗೋಗಿ, ಅಯ್ಯಪ್ಪ ಗೊಂದೆನೂರ್ ಸೇರಿದಂತೆ ಇನ್ನಿತರರು ಭಾಗವಹಿಸಿದರು.




