ನಾಲ್ಕು ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆ ಘೋಷಣೆಯಾದ ಬಳಿಕ ಅಂದರೆ ಮಾರ್ಚ್15ರಿಂದ ಈವರೆಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ 11,000 ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗದ (ಇಸಿಐ) ಹೇಳಿದೆ.
ಹೆಚ್ಚುವರಿಯಾಗಿ, ಸಿ-ವಿಜಿಲ್ ಅಪ್ಲಿಕೇಶನ್ ಮೂಲಕ 3,10,393 ದೂರುಗಳನ್ನು ಪರಿಹರಿಸಲಾಗಿದೆ. 100 ನಿಮಿಷಗಳಲ್ಲಿ 96.01% ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇದನ್ನು ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆ: ಪ್ರಧಾನಿ ಭಾಷಣದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಸಿಪಿಐ ಸಂಸದ
ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಮತ್ತು AI- ರಚಿತ ವಿಷಯವನ್ನು ನಿಯಂತ್ರಿಸುವ ಕಾನೂನು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಯಾವುದೇ ಕಾನೂನುಬಾಹಿರ ವಿಚಾರಗಳನ್ನು ಮೂರು ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ನಿರ್ದೇಶಿಸಿದೆ.
ಮಾದರಿ ನೀತಿ ಸಂಹಿತೆ (MCC) ಉಲ್ಲಂಘಿಸುವ, ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸುವ, ಸುಳ್ಳು ಹರಡುವ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆಯೋಗವು ತಿಳಿಸಿದೆ. ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ರಾಜ್ಯ ಐಟಿ ನೋಡಲ್ ಅಧಿಕಾರಿಗಳು ಐಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಇನ್ನು ಚುನಾವಣಾ ನೀತಿ ಸಂಹಿತೆ ಜಾರಿ ಮತ್ತು ಅದರ ಉಲ್ಲಂಘನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಪಕ್ಷಪಾತ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ. ಸಿಎಂ ಸಿದ್ದರಾಮಯ್ಯ, “ಚುನಾವಣಾ ಆಯೋಗವು ಪಕ್ಷಪಾತ ಮತ್ತು ಇಬ್ಬಗೆಯ ನೀತಿ ಅನುಸರಿಸುತ್ತಿದೆ” ಎಂದು ದೂರಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಹೆಲಿಕಾಪ್ಟರ್ ಬಳಸಿ ಪ್ರಚಾರ ನಡೆಸಿದ್ದಾರೆ ಮತ್ತು ‘ನೇಕಾರರ ಕಾರ್ಡ್’ಗಳನ್ನು ವಿತರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಟಿಎಂಸಿ ದೂರು ನೀಡಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸುದ್ದಿವಾಹಿನಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇರಳದ ಕಾಂಗ್ರೆಸ್ ನಾಯಕ ಅನಿಲ್ ಅಕ್ಕರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ.
ಇನ್ನು ಚುನಾವಣೆ ಘೋಷಣೆಯಾದ ನಂತರ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ದಾಳಿಗಳು ನಡೆಯುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮತ್ತು ಆಯೋಗವು ಇದನ್ನು ತಡೆಯುತ್ತಿಲ್ಲ ಎಂಬುದು ಪ್ರತಿಪಕ್ಷಗಳ ವಾದವಾಗಿದೆ.
ಮಾರ್ಚ್ 15 ರಂದು ಚುನಾವಣೆ ಘೋಷಣೆಯಾಗಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದಿತ್ತು. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದ್ದು, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಮತದಾನ ನಡೆಯಲಿದೆ. ಎಲ್ಲ ಪ್ರದೇಶಗಳ ಮತ ಎಣಿಕೆ ಮೇ 4ರಂದು ನಡೆಯಲಿದೆ.





