ಮೈಸೂರು ಲಸಿಕಾ ಸಂಸ್ಥೆಯ ಆರಂಭಿಕ ಇತಿಹಾಸವು ರೋಚಕವಾಗಿದೆ. ಆರಂಭದಲ್ಲಿ ಸಂಸ್ಥೆಯು ಬೆಂಗಳೂರಿನ ಹೈ ಗ್ರೌಂಡ್ಸ್ನ ರೇಸ್ ಕೋರ್ಸಿನ ರೇಸ್ ವ್ಯೂ ಬಳಿಯ ಅತಿಥಿ ಗೃಹದಲ್ಲಿ ಕಾರ್ಯನಿರ್ವಹಿಸಿತು. ಅಲ್ಲಿಯೇ ಲಸಿಕಾ ಉತ್ಪಾದನೆ ನಡೆಯಿತು. ನಂತರ, ಹೈ ಗ್ರೌಂಡ್ಸ್ ಬಳಿ ಹೊಸ ಕಟ್ಟಡದಲ್ಲಿ ಕೆಲಕಾಲ ಲಸಿಕೆಯ ಉತ್ಪಾದನೆಯಾಯಿತು. ಲಸಿಕೆ ತಯಾರಿಕೆಗೆ ಮಲೆನಾಡಿನಿಂದ ಕೊಂಡುತಂದ ಕೋಣಗಳು ಮತ್ತು ಗಂಡು ಎಮ್ಮೆ ಕರುಗಳನ್ನು ಬಳಸಿದರು.
ಜಾನುವಾರುಗಳಿಗೆ ದೊಡ್ಡರೋಗ ಬಂದರೆ ಊರಿನ ದನಗಳೆಲ್ಲಾ ಸತ್ತು ಬೀಳುತ್ತಿದ್ದವು. ಸಾವಿನ ಪ್ರಮಾಣ ನೂರಕ್ಕೆ ನೂರು. ಆದ್ದರಿಂದಲೇ ದೊಡ್ಡರೋಗದ ಇನ್ನೊಂದು ಹೆಸರು ‘ಜಾನುವಾರು ಪ್ಲೇಗ್’ (Cattle Plague). ಅದೊಂದು ವೈರಾಣು ಕಾಯಿಲೆ. ವಿಶ್ವದೆಲ್ಲೆಡೆ ಹಲವು ಸಹಸ್ರಮಾನಗಳಿಂದ ಪಶುಗಳನ್ನು ಕಾಡುತ್ತಿದ್ದ ಕಾಯಿಲೆ. ತೀವ್ರವಾದ ಜ್ವರ, ಭೇದಿ, ರಕ್ತಭೇದಿ, ಬಾಯಿ ಹುಣ್ಣು, ಮೂಗು ಹಾಗೂ ಕಣ್ಣಿನಲ್ಲಿ ಕೀವು ಮಿಶ್ರಿತ ಲೋಳೆಯ ಸೋರಿಕೆ, ಖಿನ್ನತೆ ಮತ್ತಿತರೆ ರೋಗ ಲಕ್ಷಣಗಳಿಂದ ದೊಡ್ಡರೋಗವನ್ನು ಗುರುತಿಸಲಾಗುತ್ತಿತ್ತು. ಅದೊಂದು ಸಾಂಕ್ರಾಮಿಕ ಕಾಯಿಲೆ. ಜಾನುವಾರುಗಳ ಸಂಪರ್ಕ, ಕಲುಷಿತ ನೀರು, ಆಹಾರ, ಗಾಳಿಯಿಂದ ರೋಗ ಹರಡುತ್ತಿತ್ತು.
ಮೈಸೂರು ಸಂಸ್ಥಾನದಲ್ಲಿ ಮೈಸೂರು, ಬೆಂಗಳೂರು, ಕೋಲಾರ, ತುಮಕೂರು, ಹಾಸನ, ಕಡೂರು, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಿದ್ದವು. ಲಭ್ಯ ಮಾಹಿತಿಯಂತೆ, 1924-25ರಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಣಿಸಿಕೊಂಡ ದೊಡ್ಡರೋಗದಿಂದ 12,198 ದನಗಳು ಸಾವಿಗೀಡಾದವು. ಹಲವು ದೇಶಗಳಲ್ಲಿ ದೊಡ್ಡರೋಗದ ಉಪಟಳವಿತ್ತು. ಅದರ ನಿಯಂತ್ರಣಕ್ಕೆ ಜಾಗತಿಕ ಮಟ್ಟದಲ್ಲಿ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯು 1924ರಲ್ಲಿ ಅಸ್ತಿತ್ವಕ್ಕೆ ಬಂತು. ಅದೇ ಸಮಯಕ್ಕೆ ಮೈಸೂರು ಸಂಸ್ಥಾನದಲ್ಲಿ ಡಾ. ಲೆಸ್ಲಿ ಚಾರ್ಲ್ಸ್ ಕೋಲ್ಮನ್‌ರವರು ಕೃಷಿ ಇಲಾಖೆಯ ನಿರ್ದೇಶಕರಾಗಿದ್ದರು. ಪ್ರಾಣಿಗಳಿಗೆ ಸಂಬಂಧಿಸಿದ ಮೂರು ಇಲಾಖೆಗಳಾದ ಅಮೃತ್ ಮಹಲ್ ಇಲಾಖೆ, ಜಾನುವಾರು ಇಲಾಖೆ ಮತ್ತು ನಾಗರಿಕ ಪಶುವೈದ್ಯಕೀಯ ಇಲಾಖೆಗಳ ಮೇಲುಸ್ತುವಾರಿಯು ಅವರದ್ದೇ ಆಗಿತ್ತು. ಜಾನುವಾರುಗಳ ದೊಡ್ಡರೋಗವನ್ನು ನಿಯಂತ್ರಣಕ್ಕೆ ತರಲು ಅದಕ್ಕೆ ಅಗತ್ಯವಿರುವ ಸೀರಮ್ ಅಥವಾ ಲಸಿಕೆ ತಯಾರಿಸಲು ಒಂದು ಸಂಸ್ಥೆಯನ್ನು ಸ್ಥಾಪಿಸಲು ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಲ್ಲಿ ನಿವೇದಿಸಿಕೊಂಡರು. ಅದರಂತೆ, ಕೋಲ್ಮನ್‌ರವರ ಅಭಿಲಾಷೆಯಂತೆ ಕೋಲ್ಮಿಂಚಿನಂತೆ 1928ರಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯೇ ‘ಮೈಸೂರು ಸೀರಮ್ ಇನ್ಸಿ÷್ಟಟ್ಯೂಟ್’ ಅಥವಾ ‘ಮೈಸೂರು ಲಸಿಕಾ ಸಂಸ್ಥೆ’. ಈಗ, 2026ರಲ್ಲಿ ಸಂಸ್ಥೆಯು ಶತಮಾನೋತ್ಸವ ಆಚರಣೆಯ ಸಿರಿಯಲ್ಲಿದೆ.
ಹೈ ಗ್ರೌಂಡ್ಸ್‌ನ ಅತಿಥಿ ಗೃಹದಲ್ಲಿ ಲಸಿಕೆಯ ಉತ್ಪಾದನೆ
ಮೈಸೂರು ಲಸಿಕಾ ಸಂಸ್ಥೆಯ ಆರಂಭಿಕ ಇತಿಹಾಸವು ರೋಚಕವಾಗಿದೆ. ಆರಂಭದಲ್ಲಿ ಸಂಸ್ಥೆಯು ಬೆಂಗಳೂರಿನ ಹೈ ಗ್ರೌಂಡ್ಸ್ನ ರೇಸ್ ಕೋರ್ಸಿನ ರೇಸ್ ವ್ಯೂ ಬಳಿಯ ಅತಿಥಿ ಗೃಹದಲ್ಲಿ ಕಾರ್ಯನಿರ್ವಹಿಸಿತು. ಅಲ್ಲಿಯೇ ಲಸಿಕಾ ಉತ್ಪಾದನೆ ನಡೆಯಿತು. ನಂತರ, ಹೈ ಗ್ರೌಂಡ್ಸ್ ಬಳಿ ಹೊಸ ಕಟ್ಟಡದಲ್ಲಿ ಕೆಲಕಾಲ ಲಸಿಕೆಯ ಉತ್ಪಾದನೆಯಾಯಿತು. ಲಸಿಕೆ ತಯಾರಿಕೆಗೆ ಮಲೆನಾಡಿನಿಂದ ಕೊಂಡುತಂದ ಕೋಣಗಳು ಮತ್ತು ಗಂಡು ಎಮ್ಮೆ ಕರುಗಳನ್ನು ಬಳಸಿದರು. ಅವುಗಳನ್ನು ಸಂಪಂಗಿರಾಮನಗರ ಕೆರೆಯ (ಸಂಪಂಗಿ ಟ್ಯಾಂಕ್, ಈಗಿನ ಕಂಠೀರವ ಸ್ಟೇಡಿಯಂ) ಬಳಿ ಇದ್ದ ಛತ್ರಮ್ ಬಯಲಿನಲ್ಲಿ ಕೂಡಿ ಹಾಕಿ ಮೇಯಿಸಲಾಗುತ್ತಿತ್ತು. ಅಂತಹ ಮಂದೆಗೆ ‘ರಿಸರ್ವ್ ಡಿಪೋ’ ದನಗಳೆಂದು ಕರೆದರು. ಅಕಸ್ಮಾತ್ ಅವುಗಳಲ್ಲಿ ಸೋಂಕುರೋಗಗಳು ಕಂಡುಬಂದರೆ ಬೆಂಗಳೂರಿನಿಂದ 11 ಕಿಲೋಮೀಟರ್ ದೂರದ ಕೆಂಚನಹಳ್ಳಿ ಕಾವಲಿಗೆ ಸ್ಥಳಾಂತರಿಸಲಾಗುತ್ತಿತ್ತು.

ದೊಡ್ಡರೋಗದ ಸೀರಮ್ ನೀಡಿಕೆಯಿಂದ ನಾಲ್ಕು ವರ್ಷಗಳಲ್ಲಿ, 1930 ರ ಹೊತ್ತಿಗೆ, ರೋಗವು ತಕ್ಕಮಟ್ಟಿಗೆ ಹತೋಟಿಗೆ ಬಂತು. ಸಂಸ್ಥೆಗಾಗಿ ಹೆಬ್ಬಾಳದಲ್ಲಿ ಹೊಸ ಸ್ಥಳವನ್ನು 1930ರಲ್ಲಿ ಗುರುತಿಸಲಾಯಿತು. ಅದಕ್ಕೆ ಹೊಸದಾಗಿ ಕಟ್ಟಡ ನಿರ್ಮಿಸಲು ಹೆಬ್ಬಾಳದ ಕೃಷಿ ಫಾರ್ಮಿನ ಬಳಿ ನಿವೇಶನದ ಬೆಲೆ ರೂ. 11,000 ಒಳಗೊಂಡಂತೆ ಒಟ್ಟು ರೂ. 80,000 ಮಂಜೂರಾಯಿತು. ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ನಿರ್ಮಾಣ ಕಾರ್ಯಗಳೆಲ್ಲಾ ಎರಡು ವರ್ಷಗಳಲ್ಲಿ ಮುಗಿದು ಮಾರ್ಚ್ 10, 1932ರಿಂದ ಬೆಂಗಳೂರಿನ ಹೆಬ್ಬಾಳಕ್ಕೆ ಸಂಸ್ಥೆಯು ಸ್ಥಳಾಂತರವಾಯಿತು. ಕಾಲಾನಂತರದಲ್ಲಿ, ಮೈಸೂರು ಸೀರಮ್ ಇನ್‌ಸ್ಟಿಟ್ಯೂಟ್ ಅನ್ನು 1979ರಿಂದ ‘ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ’ ಎಂದು ಹೆಸರಿಸಲಾಗಿದೆ.
‘ಆರಂಭದ ದಶಕದಲ್ಲಿ ಹೈದರಾಬಾದ್ ಮತ್ತು ತಿರುವಾಂಕೂರು ಸಂಸ್ಥಾನಗಳ ಪಶುವೈದ್ಯರು ಈ ಸಂಸ್ಥೆಯಲ್ಲಿ ತರಬೇತಿ ಪಡೆದರು. ಮದ್ರಾಸಿನ ಪಶುವೈದ್ಯಕೀಯ ಇಲಾಖೆಯವರು ಲಸಿಕಾ ಸಂಸ್ಥೆಯ ಸಂಘಟನೆ ಮತ್ತು ಲಸಿಕೆಗಳ ತಯಾರಿಕಾ ವೆಚ್ಚದ ಕುರಿತು ಮಾಹಿತಿ ಪಡೆದರು. ಡಾ. ಪಾರ್ಥಸಾರಥಿಯವರ ನಾಯಕತ್ವದಲ್ಲಿ ಸಂಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಿತು.’ ಎಂದು ಡಾ. ಕೋಲ್ಮನ್‌ರವರು 1929-30ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಅದೇ ಸಾಲಿನಲ್ಲಿ ಹೆಮೊರೇಜಿಕ್ ಸೆಪ್ಟಿಸೀಮಿಯಾ ಲಸಿಕೆ (ಗಂಟಲು ರೋಗ), ಹೆಮೊರೇಜಿಕ್ ಸೆಪ್ಟಿಸೀಮಿಯಾ ಸೀರಮ್, ಕುರಿ ಸಿಡುಬು ಲಸಿಕೆ, ಮೇಕೆ ವೈರಸ್, ಬ್ಲಾಕ್ ಕ್ವಾರ್ಟರ್ (ಚಪ್ಪೆ ರೋಗ) ಫಿಲ್ಟೆಟ್ ಮತ್ತು ಬ್ಲಾಕ್ ಕ್ವಾರ್ಟರ್ ಸೀರಮ್ ತಯಾರಿಕೆ ನಡೆಯಿತು. ತಯಾರಿಸಿದ ಇಂತಹ ಜೈವಿಕಗಳನ್ನು ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಬಳಸಲಾಗುತ್ತಿತ್ತು. ಮೈಸೂರು ಸಂಸ್ಥಾನದಲ್ಲಿ ದೊಡ್ಡರೋಗದಿಂದಾದ ಮರಣವು ಸಾರ್ವಕಾಲಿಕ ದಾಖಲೆಯಾಗಿ 1930ರಲ್ಲಿ 4,295ಕ್ಕೆ ಇಳಿಯಿತು. ಸಂಸ್ಥೆ ಆರಂಭವಾದ ನಾಲ್ಕು ವರ್ಷಗಳಲ್ಲಿ ದೊಡ್ಡರೋಗ ನಿಯಂತ್ರಣದಲ್ಲಿ ಅಗಾದವಾದ ಸಾಧನೆ ಮಾಡಲಾಯಿತು.

ವರ್ಷಗಳುರುಳಿದಂತೆ, ನೆರಡಿ ರೋಗ, ಕೋಳಿ ಕಾಲರಾ ಲಸಿಕೆ ಮುಂತಾದ ಲಸಿಕೆಗಳ ಉತ್ಪಾದನೆ ಮುಂದುವರೆಯಿತು. ‘ಬೆಬೇಶಿಯಾ ಮೊಟಾಸಿ’ ಎಂಬ ಪರಾವಲಂಭಿಯನ್ನು ಕುರಿಗಳ ರಕ್ತದಲ್ಲಿ 1933ರಲ್ಲಿ ಮೊಟ್ಟಮೊದಲ ಬಾರಿಗೆ ಸಂಸ್ಥೆಯಲ್ಲಿ ಪತ್ತೆಹಚ್ಚಲಾಯಿತು. ಅದೇ ವರ್ಷದಲ್ಲಿ ಮೈಸೂರು ರಾಜ್ಯದಲ್ಲಿ ಗಂಟಲು ರೋಗ ಪತ್ತೆಗೆ ಅನುಕೂಲಕರವಾಗಬಹುದಾದ ರೋಗ ಲಕ್ಷಣಗಳನ್ನು ವಿಜ್ಞಾನಿಯೊಬ್ಬರು ಪತ್ತೆಹಚ್ಚಿದರು. ಆರಂಭದ ವರ್ಷಗಳಲ್ಲಿ ಡಾ. ಪಾರ್ಥಸಾರಥಿ, ಎಸ್. ಡಿ. ಆಚಾರ್, ಡಾ. ಪಿ. ಎಂ. ನಾರಾಯಣ ಸ್ವಾಮಿ ನಾಯ್ಡುರವರು ವಿಜ್ಞಾನಿಗಳಾಗಿ ಕಾರ್ಯ ನಿರ್ವಹಿಸಿದರು.
ಮಹಾರಾಜರಾದ ನಾಲ್ವಡಿಯವರ ಭೇಟಿ
ಮಾರ್ಚ್ 1934ರಲ್ಲಿ ದಿವಾನರಾದ ಮಿರ್ಜಾ ಇಸ್ಮಾಯಿಲ್‌ರವರು ಹೆಬ್ಬಾಳದ ಮೈಸೂರು ಸೀರಮ್ ಸಂಸ್ಥೆಗೆ ಭೇಟಿಯಿತ್ತರು. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಗ್ವಾಲಿಯರ್‌ನ ಮಹಾರಾಜರಾದ ಜಿವಾಜಿರಾವ್ ಸಿಂದಿಯಾರೊಂದಿಗೆ 1936ರಲ್ಲಿ ಸಂಸ್ಥೆಗೆ ಆಗಮಿಸಿ ಎಲ್ಲಾ ವಿಭಾಗಗಳಿಗೆ ಭೇಟಿ ಕೊಟ್ಟು ಲಸಿಕೆ ತಯಾರಿಕೆಯ ಕಾರ್ಯವಿಧಾನಗಳನ್ನು ಆಸಕ್ತಿಯಿಂದ ವೀಕ್ಷಿಸಿದರು.

ಕೊಲ್ಲಾಪುರ, ಉಜ್ಜಯಿನಿ, ಇಂದೋರ್, ಭೂಪಾಲ್, ಭಾವನಗರ, ಸವಣೂರು, ಜೋಧಪುರ, ಸಾಂಗ್ಲಿ, ಬೆಳಗಾಂ, ಪಾಂಡಿಚೆರಿ, ಮದ್ರಾಸ್, ಕಾಥಿಯಾವಾರಿ, ಆಗ್ರಾ, ಪಲ್ಲಮ್‌ಕೊಟ್ಟಾ, ಅಲಹಾಬಾದ್, ಹೈದರಾಬಾದ್, ಕೊಲಂಬೋ, ತಿರುವನಂತಪುರ, ಬರೋಡಾ, ಕೊಡಗು, ಪುದುಕೊಟ್ಟೆ, ಕೊಚಿನ್, ರಾಮದುರ್ಗ, ಈಚಲಕಾರಂಜಿ, ಮೊರ್ವಿ ಸ್ಟೇಟ್, ಸಾವಂತವಾಡಿ ಮತ್ತಿತರ ರಾಜ್ಯಗಳಿಗೆ ಸೀರಮ್ ಹಾಗೂ ಲಸಿಕೆಗಳನ್ನು ಪೂರೈಸಲಾಗುತ್ತಿತ್ತು. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1936ರಲ್ಲಿ ರೂಪಿತವಾದ ಹೆಬ್ಬಾಳದ ಮೈಸೂರು ಸೀರಮ್ ಇನ್‌ಸ್ಟಿಟ್ಯೂಟ್ ರಾಜ್ಯವಷ್ಟೇ ಅಲ್ಲದೆ ದೇಶದಲ್ಲಿಯೇ ಹಲವಾರು ಜಾನುವಾರು ಕಾಯಿಲೆಗಳನ್ನು ತಡೆಗಟ್ಟಿ ದೇಶದ ಪಶು ಸಂಪತ್ತನ್ನು ಕಾಪಾಡಿದೆ, ಇಂದಿಗೂ ಹಲವು ರಾಜ್ಯಗಳಿಗೆ ಲಸಿಕೆಗಳನ್ನು ಕಳುಹಿಸಿಕೊಟ್ಟು ಪಶು ಸಂಪತ್ತನ್ನು ಕಾಪಾಡುತ್ತಿದೆ.
ಸಂಸ್ಥೆಯು 1938ರ ನಂತರ ಹೊಸ ಲಸಿಕೆಗಳಾದ ರೇಬಿಸ್ ಲಸಿಕೆ, ನೆರಡಿ ರೋಗದ ಸಪೋನಿನ್ ಲಸಿಕೆ, ಕೋಳಿ ಅಮ್ಮ ಲಸಿಕೆ, ರೂಪ್ (ಬ್ಯಾಕ್ಟೀರಿಯಲ್) ಲಸಿಕೆ, ರಾಣೀಖೇತ್ ಲಸಿಕೆ, ರಾಣೀಖೇತ್ ಇಮ್ಯೂನ್ ಸೀರಮ್, ಇನ್‌ಫೆಕ್ಷಿಯಸ್ ಫೆಲೈನ್ ಎಂಟರೈಟಿಸ್ ಲಸಿಕೆ ಮತ್ತು ಕಂಟೇಜಿಯಸ್ ಪೊಸ್ಚುಲರ್ ಡರ್ಮಟೈಟಿಸ್ ಲಿಂಫ್ ಮುಂತಾದ ಲಸಿಕೆಗಳನ್ನು ಉತ್ಪಾದಿಸಿತು. ಟೆಟನಸ್ (ಧನುರ್ವಾಯು) ಲಸಿಕೆಯ ಕಾರ್ಯಕ್ಷಮತೆಯ ಪರೀಕ್ಷೆ ಹಾಗೂ ಜಾನುವಾರುಗಳ ನಿಗೂಡ ಖಾಯಿಲೆಗಳ ಕುರಿತ ಸಂಶೋಧನೆಯೂ ನಡೆಯಿತು. ಆನೆಗಳಲ್ಲಿ ಗರ್ಭ ತಪಾಸಣೆ ಮಾಡಲು ಕ್ಯುಬೋನಿ ಪರೀಕ್ಷೆಯ ಅಳವಡಿಕೆಯ ಸಾಧ್ಯಾಸಾಧ್ಯತೆಗಳ ಸಂಶೋಧನೆಯು 1939ರಲ್ಲಿ ನಡೆಯಿತು. ಸಂಸ್ಥೆ ಉತ್ಪಾದಿಸಿದ ರೇಬಿಸ್ ಲಸಿಕೆಯನ್ನು ಬಾಂಬೆಯ ಹಾಪ್‌ಕಿನ್ ಸಂಸ್ಥೆಯು ಪರೀಕ್ಷಿಸಿ ಉತ್ತಮ ಲಸಿಕೆಯೆಂದು 1943ರಲ್ಲಿ ಪ್ರಮಾಣ ಪತ್ರ ನೀಡಿತು.
ರೈತ ದೇಶದ ಬೆನ್ನೆಲುಬು: ಎತ್ತುಗಳು ರೈತನ ಬೆನ್ನೆಲುಬು
ದೇಶದ ಆಹಾರ ಭದ್ರತೆಗಾಗಿ ದುಡಿವ ಅನ್ನದಾತ ರೈತರನ್ನು ‘ರೈತ ದೇಶದ ಬೆನ್ನೆಲುಬು’ ಎಂದು ಹುರಿದುಂಬಿಸುತ್ತೇವೆ. ಅಂತಹ ರೈತನಿಗೆ ಅನಾದಿ ಕಾಲದಿಂದಲೂ ಬೆನ್ನೆಲುಬುಗಳಾಗಿ ಬೇಸಾಯಕ್ಕೆ ಪ್ರಾಣಿಶಕ್ತಿಯನ್ನು ಒದಗಿಸಿದ್ದು ಎತ್ತುಗಳು. ಆದ್ದರಿಂದ ಪಶುವೈದ್ಯರು ದೊಡ್ಡರೋಗವನ್ನು ನಿಯಂತ್ರಿಸಿದ್ದರಿಂದ ‘ಎತ್ತುಗಳು ರೈತನ ಬೆನ್ನೆಲುಬು’ ಎಂದು ವ್ಯಾಖ್ಯಾನಿಸಲಾಗಿದೆ. ನಾಲ್ವಡಿಯವರ ಕಾಲದ ಕೃಷಿ ಅಭಿವೃದ್ಧಿಗೆ, ನಂತರದ 1960-70ರ ದಶಕದ ‘ಹಸಿರು ಕ್ರಾಂತಿ’ಗೆ ದೊಡ್ಡರೋಗ, ನೆರಡಿ ರೋಗ, ಚಪ್ಪೆ ರೋಗ, ಗಂಟಲು ರೋಗ ಮುಂತಾದ ಕಾಯಿಲೆಗಳಿಂದ ಬದುಕುಳಿದ ಎತ್ತುಗಳ ಕೊಡುಗೆಯು ಅಪಾರವಾಗಿದೆ. ಒಟ್ಟಾರೆ ಪಶು ಸಂಪತ್ತನ್ನು ಕಾಪಾಡಿಕೊಳ್ಳಲಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ. ಲೆಸ್ಲಿ ಕೋಲ್ಮನ್‌ರವರ ಮುಂದಾಲೋಚನೆಯಿಂದ 1926ರಲ್ಲಿ ಪ್ರಮುಖವಾಗಿ ದೊಡ್ಡರೋಗ ತಡೆಗಾಗಿ ಮೈಸೂರು ಲಸಿಕಾ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅಲ್ಲಿಂದ 80 ವರ್ಷಗಳ ನಂತರ 2006ರಲ್ಲಿ ದೇಶವು ದೊಡ್ಡರೋಗದಿಂದ ಮುಕ್ತವಾಗಿದೆಯೆಂದು ಘೋಷಿಸಲಾಗಿದೆ. ವಿಶ್ವಕ್ಕೆಲ್ಲಾ ಅನ್ವಯಿಸುವಂತೆ ಇಂತಹ ಘೋಷಣೆಯು ೨೦೧೧ರಲ್ಲಿ ಹೊರಬಿತ್ತು. ಸಂಸ್ಥೆಯು ಇತ್ತೀಚೆಗೆ ಪಿಪಿಆರ್ (ಪೆಸ್ಟೆ ಡೆಸ್ ಪೆಟಿಟ್ಸ್ ರೂಮಿನಂಟ್ಸ್) ಎಂಬ ಹೊಸದಾಗಿ ಉದ್ಬವಿಸಿದ ಕಾಯಿಲೆಗೆ ಲಸಿಕೆ ಉತ್ಪಾದಿಸುತ್ತಿದೆ. ಅದನ್ನು ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಪೂರೈಸಲು ಕ್ರಮ ವಹಿಸಿದೆ.

ಸಂಸ್ಥೆಯ ಆಧುನಿಕ ಸೌಲಭ್ಯಗಳು
ಇದೀಗ ಸಂಸ್ಥೆಯು ಕೇಂದ್ರ ಸ್ಥಾನದಲ್ಲಿ ಮುಖ್ಯ ಪ್ರಯೋಗಾಲಯವನ್ನು ಹೊಂದಿದೆ. ಉಳಿದಂತೆ, ರಾಜ್ಯದ ಹದಿಮೂರು ಕಡೆ : ಬೆಳಗಾವಿ, ಬಳ್ಳಾರಿ, ಗುಲ್ಬರ್ಗಾ, ಶಿವಮೊಗ್ಗ, ಬೀದರ್, ದಾವಣಗೆರೆ, ಮೈಸೂರು, ಶಿರಸಿ, ಸಿರಾ, ಬಾಗಲಕೋಟೆ, ಕೋಲಾರ, ಮಂಗಳೂರು ಮತ್ತು ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರಾದೇಶಿಕ ರೋಗ ಪತ್ತೆ ಪ್ರಯೋಗಾಲಯಗಳಿವೆ. ಬನ್ನೇರುಘಟ್ಟದಲ್ಲಿರುವುದು ವನ್ಯಜೀವಿಗಳ ರೋಗ ಪತ್ತೆ ಪ್ರಯೋಗಾಲಯ. ರೋಗನಿರ್ಣಯ ಕಿಟ್‌ಗಳನ್ನು ಉತ್ಪಾದಿಸುತ್ತಿದೆ. ರಾಜ್ಯಾದ್ಯಂತ ಜಾನುವಾರು ರೋಗಗಳ ಕ್ಲಿಷ್ಟಕರ ತಪಾಸಣೆಯ ಸಂದರ್ಭಗಳು ಉದ್ಭವವಾದಾಗ ಸಂಸ್ಥೆಯ ತಜ್ಞರನ್ನು ನಿಯೋಜನೆ ಮಾಡಲಾಗುತ್ತಿದೆ.
ಹೀಗೆ ಹಲವು ವಿಧದಲ್ಲಿ ಪಶು ಸಂಪತ್ತನ್ನು ಕಾಪಾಡಿದ ಮೈಸೂರು ಲಸಿಕಾ ಸಂಸ್ಥೆಗೆ ಇದೀಗ ಶತಮಾನೋತ್ಸವದ ಸಿರಿ ಆಚರಣೆಯ ಸಂದರ್ಭ. ಸ್ವಾತಂತ್ರö್ಯ ಪೂರ್ವದಲ್ಲಿ ಶುದ್ಧ ಆಡಳಿತವಿದ್ದಂತೆ ಇದೀಗ ಆಧುನಿಕ ವೈಜ್ಞಾನಿಕ ಹಾಗೂ ಮಾಹಿತಿ ಯುಗದಲ್ಲಿ ಮತ್ತಷ್ಟು ಶುದ್ಧ ಆಡಳಿತವನ್ನು ಸಮಾಜವು ಸಂಸ್ಥೆಯಿಂದ ನಿರೀಕ್ಷಿಸುತ್ತಿದೆ.
ಕೊನೆಯ ಮಾತು
ಮೈಸೂರು ಲಸಿಕಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಾ. ಲೆಸ್ಲಿ ಕೋಲ್ಮನ್‌ರವರ ನೆನಪುಗಳು ಸಂಸ್ಥೆಯಲ್ಲಿ ಮಸುಕಾಗಿವೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಕೇವಲ ನೂರು ವರ್ಷಗಳ ಇತಿಹಾಸವನ್ನು ಮರೆತರೆ ಅಥವಾ ಮರೆತಂತೆ ನಟಿಸಿದರೆ ಅದು ಮಾನವ ಧರ್ಮಕ್ಕೆ ಬಗೆದ ದ್ರೋಹ, ಇತಿಹಾಸಕ್ಕೆ ಎಸಗಿದ ಅಪಚಾರ ಎನ್ನಿಸದಿರದು. ಡಾ. ಕೋಲ್ಮನ್‌ರವರು ಮೈಸೂರು ಸಂಸ್ಥಾನದಲ್ಲಿ ಕೃಷಿ ತಜ್ಞರಾಗಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ 1934ರಲ್ಲಿ ಕೆನಡಾ ದೇಶಕ್ಕೆ ಮರಳುವಾಗ ಮಾಡಿದ ವಿದಾಯ ಭಾಷಣದಲ್ಲಿ ಮೈಸೂರು ಲಸಿಕಾ ಸಂಸ್ಥೆ ಸೇರಿದಂತೆ ಅವರ ಕಾಲದಲ್ಲಾದ ಹಲವು ಅಭಿವೃದ್ಧಿ ಕೆಲಸಗಳ ಪ್ರಗತಿ ಕುರಿತು ತಮಗೆ ಪತ್ರ ಬರೆದು ತಿಳಿಸುವಂತೆ ರೈತ ಮುಖಂಡರನ್ನು ಮತ್ತು ಅಧಿಕಾರಿಗಳನ್ನು ಕೋರಿದರು. ಕುತೂಹಲ ತಡೆಯದೆ 1953ರಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಮೈಸೂರು ರಾಜ್ಯಕ್ಕೆ ತಾವು ಕೊಟ್ಟ ಕೊಡುಗೆಗಳ ಪ್ರಗತಿಯನ್ನು ಕಣ್ತುಂಬಿಕೊಂಡರು. ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಕೋಲ್ಮನ್‌ರವರನ್ನು ರಾಜ್ಯದ ಅತಿಥಿಯಾಗಿ ಪರಿಗಣಿಸಿದರು. ಇಂತಹ ಅಚ್ಚಳಿಯದ ಇತಿಹಾಸವನ್ನು ಅಳಿಸಿಹಾಕದೆ ಮುಂದಿನ ತಲೆಮಾರುಗಳಿಗೆ ದಾಟಿಸಬೇಕಾಗಿದೆ.
(ಆಧಾರ : ಪ್ರೊ. ಎಂ. ನಾರಾಯಣ ಸ್ವಾಮಿ, ೨೦೨೫. ಮೈಸೂರಿನ ಕೃಷಿ ಇತಿಹಾಸ.)

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ



