ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ತಮ್ಮ ಸಂಪುಟ ವಿಸ್ತರಣೆ ಮಾಡಿದ್ದು, ಸಚಿವ ಸಂಪುಟದಲ್ಲಿ 23 ಶಾಸಕರು ಸೇರ್ಪಡೆಗೊಂಡಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷದ 21 ಶಾಸಕರು ಮತ್ತು ಮಿತ್ರಪಕ್ಷ ಕಾಂಗ್ರೆಸ್‌ನ ಇಬ್ಬರು ಶಾಸಕರು ಹೊಸ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಎರಡು ಪ್ರಮುಖ ಮಿತ್ರಪಕ್ಷಗಳಾದ ಐಯುಎಂಎಲ್ ಮತ್ತು ವಿಸಿಕೆ ಸದ್ಯ ಸಂಪುಟ ವಿಸ್ತರಣೆಯ ಭಾಗವಾಗಿಲ್ಲ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಈ ಎರಡೂ ಪಕ್ಷಗಳು ಟಿವಿಕೆ ಸರ್ಕಾರ ಬಹುಮತ ಪಡೆಯಲು ನಿರ್ಣಾಯಕವಾಗಿದೆ. ಐಯುಎಂಎಲ್ ಮತ್ತು ವಿಸಿಕೆ ಎರಡಕ್ಕೂ ತಲಾ ಒಂದು ಸಂಪುಟ ಸ್ಥಾನವನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ.
ಇದನ್ನು ಓದಿದ್ದೀರಾ? 6 ದಶಕದ ನಂತರ ತಮಿಳುನಾಡು ಸಚಿವ ಸಂಪುಟಕ್ಕೆ ಕಾಂಗ್ರೆಸ್; ಮೇ 21ಕ್ಕೆ ಇಬ್ಬರ ಪ್ರಮಾಣವಚನ
ಟಿವಿಕೆ ನಾಯಕತ್ವವು ಪ್ರಸ್ತುತ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಅನ್ನು ಸಮ್ಮಿಶ್ರ ಸಚಿವಾಲಯಕ್ಕೆ ಔಪಚಾರಿಕವಾಗಿ ಸೇರಲು ಆಹ್ವಾನಿಸುತ್ತಲೇ ಇದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ತಮಿಳುನಾಡು ಲೋಕೋಪಯೋಗಿ ಮತ್ತು ಕ್ರೀಡಾ ಸಚಿವ ಆಧವ್ ಅರ್ಜುನ, “ಮುಖ್ಯಮಂತ್ರಿಯವರು ಆಹ್ವಾನಿಸುತ್ತಲೇ ಇದ್ದಾರೆ. ನಾವು ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತೇವೆ. ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲನನ್ ಕೂಡ ಸಂಪುಟಕ್ಕೆ ಸೇರಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ವಿಜಯ್ ಮೇ 10ರಂದು ಒಂಬತ್ತು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆಯ ಬಲದ 15% ಅಂದರೆ ಸಂಪುಟದಲ್ಲಿ 35 ಸಚಿವರು ಇರಬಹುದು. ಇಂದು 23 ಹೊಸ ಸಚಿವರು ಸೇರ್ಪಡೆಗೊಳ್ಳುವುದರೊಂದಿಗೆ, ವಿಜಯ್ ಸರ್ಕಾರದಲ್ಲಿ ಸಚಿವರ ಸಂಖ್ಯೆ 32ಕ್ಕೆ ಏರಿದೆ. ವಿಸಿಕೆ ಮತ್ತು ಐಯುಎಂಎಲ್‌ನಂತಹ ಮಿತ್ರಪಕ್ಷಗಳಿಗೆ 3 ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ.
ಇದನ್ನು ಓದಿದ್ದೀರಾ? ನಾಯಕನಿಗಾಗಿ ಕಾದ ತಮಿಳುನಾಡು… ವಿಜಯ್ ಆಯ್ಕೆ ಮಾಡಿಕೊಂಡಿರಬಹುದೇ?
ಇಂದು ಪ್ರಮಾಣ ವಚನ ಸ್ವೀಕರಿಸಿದ ಶಾಸಕರಲ್ಲಿ ಟಿವಿಕೆಯ ಶ್ರೀನಾಥ್, ಕಮಲಿ ಎಸ್, ಸಿ ವಿಜಯಲಕ್ಷ್ಮಿ, ಆರ್‌ವಿ ರಂಜಿತ್‌ಕುಮಾರ್, ವಿನೋದ್, ರಾಜೀವ್, ಬಿ ರಾಜ್‌ಕುಮಾರ್, ವಿ ಗಾಂಧಿರಾಜ್, ಮಥನ್ ರಾಜ ಪಿ, ಜೆಗಡೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ಥಿಬನ್ ಎ, ರಮೇಶ್, ಪಿ ವಿಶ್ವನಾಥನ್, ಕುಮಾರ್ ಆರ್, ತೆನ್ನರಸು ಕೆ, ವಿ ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್ ಜೆ, ಡಿ ಶರತ್‌ಕುಮಾರ್, ಎನ್ ಮೇರಿ ವಿಲ್ಸನ್, ವಿಘ್ನೇಶ್ ಕೆ ಸೇರಿದ್ದಾರೆ.
ಇಬ್ಬರು ಕಾಂಗ್ರೆಸ್ ಶಾಸಕರು ರಾಜೇಶ್ ಕುಮಾರ್ ಮತ್ತು ತಿರು ಪಿ. ವಿಶ್ವನಾಥನ್ ಕೂಡ ಸೇರ್ಪಡೆಗೊಂಡಿದ್ದಾರೆ. ಸುಮಾರು ಆರು ದಶಕಗಳಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಸರ್ಕಾರದ ಭಾಗವಾಗುತ್ತಿರುವುದು ಇದೇ ಮೊದಲು. ಕಾಂಗ್ರೆಸ್ ಕೊನೆಯ ಬಾರಿಗೆ ಸರ್ಕಾರ ನಡೆಸಿದ್ದು ಎಂ. ಭಕ್ತವತ್ಸಲಂ ಅವರ ನೇತೃತ್ವದ ಸರ್ಕಾರವಿದ್ದಾಗ. ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂ ಅವರ ಅಧಿಕಾರವಧಿ 1967ರ ಮಾರ್ಚ್‌ನಲ್ಲಿ ಮುಗಿದಿದೆ. 1967ರ ವಿಧಾನಸಭಾ ಚುನಾವಣೆಯಲ್ಲಿ, ಸಿ.ಎನ್. ಅಣ್ಣಾದೊರೈ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಅಧಿಕಾರಕ್ಕೆ ಬಂದಿತು. ಅಂದಿನಿಂದ, ವಿಜಯ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗುವವರೆಗೂ ಕಾಂಗ್ರೆಸ್ ರಾಜ್ಯದಲ್ಲಿ ಯಾವುದೇ ಸರ್ಕಾರದ ಭಾಗವಾಗಿಲ್ಲ.




