ಸೋಮವಾರ ಮಧ್ಯಾಹ್ನ 15 ಜೀವಗಳನ್ನು ಬಲಿ ಪಡೆದ ಲಕ್ನೋ ಭೀಕರ ಅಗ್ನಿ ದುರಂತದಲ್ಲಿ ಕರ್ತವ್ಯ ಲೋಪ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಸಂಬಂಧಿಸಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಾಲ್ವರ ಬಂಧನ ಮಾಡಲಾಗಿದೆ. ಆರೋಪಿಗಳು ಕಟ್ಟಡದ ಜಂಟಿ ಮಾಲೀಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ, ತಕ್ಷಣದಿಂದ ಜಾರಿಗೆ ಬರುವಂತೆ ವಿದ್ಯುತ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗೌರವ್ ಕುಮಾರ್, ಇಂದಿರಾ ನಗರ್ ಅಗ್ನಿಶಾಮಕ ಸುರಕ್ಷತಾ ಅಧಿಕಾರಿ ಕಮಲೇಂದ್ರ ಕುಮಾರ್ ಸಿಂಗ್, ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ಸಹಾಯಕ ಎಂಜಿನಿಯರ್ ಅನಿಲ್ ಕುಮಾರ್ ಮತ್ತು ಎಲ್‌ಡಿಎ ಕಿರಿಯ ಎಂಜಿನಿಯರ್ ಪ್ರಮೋದ್ ಕುಮಾರ್ ಅಮಾನತು ಮಾಡಲಾಗಿದೆ ಎಂದು ಯುಪಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಲಕ್ನೋದಲ್ಲಿ ಭೀಕರ ಅಗ್ನಿ ದುರಂತ: 14 ಮಂದಿ ಸಾವು
ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಉತ್ತರ ಪ್ರದೇಶ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರು ಮಂದಿ ಮತ್ತು ಇತರರ ವಿರುದ್ಧ ಅಲಿಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡವನ್ನು ವಸತಿ ಬಳಕೆಗೆ ಅನುಮೋದಿಸಲಾಗಿತ್ತು. ಆದರೆ ವಾಣಿಜ್ಯ ಚಟುವಟಿಕೆಗಳಿಗೆ ಅಕ್ರಮವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಲಿಗಂಜ್ ಎಸಿಪಿ ಶಶಿ ಪ್ರಕಾಶ್ ಮಿಶ್ರಾ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಮಧ್ಯಾಹ್ನ ಅಲಿಗಂಜ್‌ನಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಕಟ್ಟಡದಲ್ಲಿ ವಿದ್ಯಾರ್ಥಿಗಳು ಸೇರಿದ್ದ ಅನಿಮೇಷನ್ ಕೇಂದ್ರ ಹಾಗೂ ಕೆಳ ಮಹಡಿಯಲ್ಲಿ ಸಾಕುಪ್ರಾಣಿ ಅಂಗಡಿ ಮತ್ತು ಕ್ಲಿನಿಕ್ ಇತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ ಕಟ್ಟಡದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ವರದಿಯಾಗಿದೆ.




