ವಿರೋಧ ಪಕ್ಷವು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರ “ಉಪನ್ಯಾಸ” ಕೇಳುವ ಆಸಕ್ತಿ ಹೊಂದಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ಯುವಜನರು ಉತ್ತರ ಬಯಸುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.
ಬುಧವಾರ ತಮ್ಮ ಆಗ್ರಹಗಳನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, “ನಾವು ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲು ಯಾರು ಆದೇಶಿಸಿದ್ದಾರೆಂದುರ ತಿಳಿಯಲು ಬಯಸುತ್ತೇವೆ” ಎಂದರು.
ಇದನ್ನೂ ಓದಿ: ಒಡೆದ ಬಲೂನಿನಲ್ಲಿ ಗಾಳಿ ತುಂಬಲ್ಲ, ಅಮಿತ್ ಶಾಗೆ ಸಂಸತ್ತಿಗೆ ಬರುವ ದಮ್ಮಿಲ್ಲ: ರಾಹುಲ್ ಗಾಂಧಿ
“ಗುಂಡು ಹಾರಿಸಲು ಅಮಿತ್ ಶಾ ಅವರು ಆದೇಶ ನೀಡಿರುವುದೇ? ಅವರು ತಪ್ಪಿತಸ್ಥರೇ? ಅಮಿತ್ ಶಾ ಅವರು ಹಾಗೆ ಆದೇಶ ನೀಡಿಲ್ಲ ಎಂದಾದರೆ, ಆದೇಶ ನೀಡಿದವರು ಯಾರು? ಅವರ ಆದೇಶ ಇಲ್ಲದೆ ಪೊಲೀಸರೇ ದೌರ್ಜನ್ಯ ಎಸಗಿದರೇ? ಹಾಗಿದ್ದಲ್ಲಿ ಅಮಿತ್ ಶಾ ಅವರು ಅಸಮರ್ಥರು. ಎರಡರಲ್ಲಿ ಯಾವುದೇ ಒಂದಾಗಿದ್ದರೂ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಸೇರಿದಂತೆ ಸಂಸತ್ತಿನಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅಮಿತ್ ಶಾ ಅವರು ಹೇಳಿಕೆ ನೀಡಿದ ಬಳಿಕ ರಾಹುಲ್ ಗಾಂಧಿ ತಮ್ಮ ಆಗ್ರಹಗಳನ್ನು ಪುನರುಚ್ಚರಿಸಿದ್ದಾರೆ.
ವಿರೋಧ ಪಕ್ಷವು ತನ್ನ ಬೇಡಿಕೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಧ್ಯಾಹ್ನ 2 ಗಂಟೆಯ ಮೊದಲು ಲಿಖಿತವಾಗಿ ಸಲ್ಲಿಸಿದರೆ, ಬುಧವಾರ ಮಧ್ಯಾಹ್ನ 3 ಗಂಟೆಗೆ ಚರ್ಚೆ ಪ್ರಾರಂಭವಾಗಿ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ಮುಂದುವರಿಯಬಹುದು ಎಂದು ಅಮಿತ್ ಶಾ ಹೇಳಿದ್ದಾರೆ.




