ಮಹಾರಾಷ್ಟ್ರದಲ್ಲಿ ಐಫೋನ್ ಖರೀದಿ ವಿಚಾರವಾಗಿ ಉಂಟಾದ ದುರಂತ ಘಟನೆ ಮಾಸುವ ಮುನ್ನವೇ, ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ಐಫೋನ್ ಕಂತು (EMI) ಪಾವತಿಸಲು ಸಾಧ್ಯವಾಗದೆ ನೃತ್ಯ ಶಿಕ್ಷಕನೊಬ್ಬ (ಡ್ಯಾನ್ಸ್ ಟೀಚರ್) ಯಮುನಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಆದರೆ, ದೆಹಲಿ ಪೊಲೀಸ್ ಹಾಗೂ ಪ್ರವಾಹ ನಿಯಂತ್ರಣ ಇಲಾಖೆಯ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆಯಿಂದಾಗಿ ಯುವಕನ ಜೀವ ಉಳಿದಿದೆ.
ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಪ್ರದೇಶದ ಭೋಲಾ ಘಾಟ್ ಬಳಿ ಶುಕ್ರವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ದೆಹಲಿಯ ಓಖ್ಲಾದ ಸಂಜಯ್ ಕಾಲೋನಿ ನಿವಾಸಿಯಾದ ದೀಪಕ್ ಕುಮಾರ್ (30) ಎಂಬ ನೃತ್ಯ ಶಿಕ್ಷಕ ನದಿಗೆ ಹಾರಿದ ವ್ಯಕ್ತಿ. ದೀಪಕ್ ನೃತ್ಯ ತರಬೇತಿ ನೀಡುವ ಜೊತೆಗೆ ಗಾರ್ಡನಿಂಗ್ (ತೋಟಗಾರಿಕೆ) ಕೆಲಸವನ್ನೂ ಮಾಡುತ್ತಿದ್ದು, ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು.
ಇದನ್ನೂ ಓದಿ: ಐಫೋನ್ ಇಎಂಐ ಪಾವತಿಸುವ ವಿಚಾರಕ್ಕೆ ಶುರುವಾದ ಕೌಟುಂಬಿಕ ಕಲಹ ಮೂವರ ಸಾವಿನಲ್ಲಿ ಅಂತ್ಯ
ಪೊಲೀಸರ ವಿಚಾರಣೆ ವೇಳೆ ದೀಪಕ್, ಕಳೆದ ಕೆಲವು ತಿಂಗಳುಗಳಿಂದ ತಮ್ಮ ಆದಾಯದಲ್ಲಿ ತೀವ್ರ ಕುಸಿತ ಕಂಡಿತ್ತು ಎಂದು ತಿಳಿಸಿದ್ದಾರೆ. ಇದರಿಂದಾಗಿ ತಾವು ಕಂತಿನ ಆಧಾರದಲ್ಲಿ ಖರೀದಿಸಿದ್ದ ಐಫೋನ್‌ನ ಮಾಸಿಕ ಕಂತುಗಳನ್ನು (EMI) ಪಾವತಿಸಲು ಸಾಧ್ಯವಾಗದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೇ ಕಷ್ಟದಿಂದ ಬೇಸತ್ತು ಅವರು ನದಿಗೆ ಹಾರುವ ತೀವ್ರ ನಿರ್ಧಾರ ಕೈಗೊಂಡಿದ್ದರು.
ಸಾಮಾನ್ಯ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ವ್ಯಕ್ತಿಯೊಬ್ಬ ನದಿಗೆ ಹಾರಿರುವ ಮಾಹಿತಿ ಸಿಕ್ಕ ತಕ್ಷಣ, ಪ್ರವಾಹ ನಿಯಂತ್ರಣ ಇಲಾಖೆಯ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿ ದೋಣಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ನೀರಿನಲ್ಲಿ ಮುಳುಗುತ್ತಿದ್ದ ದೀಪಕ್ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ.
ಬಳಿಕ ದೀಪಕ್ ಅವರಿಗೆ ಸೂಕ್ತ ಮಾನಸಿಕ ಕೌನ್ಸೆಲಿಂಗ್ ನಡೆಸಿದ ಪೊಲೀಸರು, ಅವರ ಪತ್ನಿ ಹಾಗೂ ಭಾವಮೈದುನನನ್ನು ಠಾಣೆಗೆ ಕರೆಸಿ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಮಹಾರಾಷ್ಟ್ರದ ಐಫೋನ್ ದುರಂತವೇನು?
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಜಿಲ್ಲೆಯ ತಿಸ್‌ಗಾಂವ್ ಪ್ರದೇಶದ ‘ಖಾವ್ಡಾ ಬೆಟ್ಟ’ದ ಬಳಿ 19 ವರ್ಷದ ಕುನಾಲ್ ಚಂದ್ಗುಡೆ ಎಂಬ ಯುವಕ ಇಎಂಐ ಆಧಾರದ ಮೇಲೆ ಐಫೋನ್ ಖರೀದಿಸಿದ್ದ. ಆದರೆ, ಅದರ ಮಾಸಿಕ ಕಂತು ಪಾವತಿಸಲು ಆತನ ಬಳಿ ಹಣವಿರಲಿಲ್ಲ. ಹೀಗಾಗಿ, ಕಂತು ಕಟ್ಟಲು ಹಣ ನೀಡುವಂತೆ ಆತ ತನ್ನ ತಂದೆಯ ಬಳಿ ಪಟ್ಟು ಹಿಡಿದಿದ್ದ.
ಇದನ್ನೂ ಓದಿ: ಬೆಳಗಾವಿ | ದುಬಾರಿ ಐಫೋನ್ ಖರೀದಿಗೆ ತಂದೆಯ ಪ್ರಶ್ನೆ – ಮನನೊಂದು ಯುವಕನ ಆತ್ಮಹತ್ಯೆ
ಹಣ ನೀಡಲು ತಂದೆ ನಿರಾಕರಿಸಿದಾಗ ಮನೆಯಲ್ಲಿ ತೀವ್ರ ಜಗಳ ನಡೆದಿದೆ. ಇದರಿಂದ ಕೋಪಗೊಂಡ ಕುನಾಲ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಬೆಟ್ಟದ ತುದಿಗೆ ತೆರಳಿದ್ದ. ಈ ಬಗ್ಗೆ ತಿಳಿದ ತಕ್ಷಣ ಆತನ ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ, ಗ್ರಾಮಸ್ಥರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು.
ಸುಮಾರು 3 ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಯುವಂತೆ ತಾಯಿ, ತಂದೆ ಮತ್ತು ಪೊಲೀಸರು ನಿರಂತರವಾಗಿ ಮನವೊಲಿಸಲು ಪ್ರಯತ್ನಿಸಿದರು. ಗ್ರಾಮಸ್ಥರು ಆತನಿಗೆ ಹೊಸ ಐಫೋನ್ ಕೊಡಿಸುವುದಾಗಿಯೂ ಆಫರ್ ನೀಡಿದ್ದರು. ಆದರೆ ಯುವಕ ಕೆಳಗಿಳಿಯಲು ಒಪ್ಪಲಿಲ್ಲ.
ಅಂತಿಮವಾಗಿ ತಂದೆ ಮುರಳೀಧರ್ ಅವರು ಮಗನನ್ನು ರಕ್ಷಿಸಲು ಆತನತ್ತ ಧಾವಿಸಿ ಹಿಡಿಯಲು ಯತ್ನಿಸಿದಾಗ, ಯುವಕ ಬೆಟ್ಟದಿಂದ ಕೆಳಗೆ ಜಿಗಿದಿದ್ದಾನೆ. ಮಗನನ್ನು ಹಿಡಿಯಲು ಹೋದ ತಂದೆಯೂ ಸಮತೋಲನ ತಪ್ಪಿ ಆತನ ಜೊತೆಯಲ್ಲೇ ಕಂದಕಕ್ಕೆ ಬಿದ್ದಿದ್ದಾರೆ. ಕಣ್ಣೆದುರೇ ಗಂಡ ಮತ್ತು ಮಗ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದನ್ನು ಕಂಡ ತಾಯಿ ಸಂಗೀತಾ ಅವರು ತೀವ್ರ ಆಘಾತದಿಂದ ಕ್ಷಣಮಾತ್ರದಲ್ಲಿ ಅವರ ಹಿಂದೆಯೇ ಬೆಟ್ಟದಿಂದ ಬಿದ್ದು ಅಸುನೀಗಿದ್ದಾರೆ. ಹೀಗೆ ಐಫೋನ್ ಕಂತಿನ ವಿಚಾರವಾಗಿ ನಡೆದ ಜಗಳ, ಇಡೀ ಕುಟುಂಬವೇ ದುರಂತವಾಗಿ ಕೊನೆಗೊಳ್ಳಲು ಕಾರಣವಾಯಿತು.




