ಐಫೋನ್ ಕಂತು (ಇಎಂಐ) ಕಟ್ಟುವ ವಿಚಾರವಾಗಿ ನಡೆದ ಜಗಳವೊಂದು ಒಂದೇ ಕುಟುಂಬದ ಮೂವರ ದಾರುಣ ಸಾವಿನಲ್ಲಿ ಅಂತ್ಯವಾದ ಬೆಚ್ಚಿಬೀಳಿಸುವ ಘಟನೆಯೊಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. 18 ವರ್ಷದ ಯುವಕ ಹಾಗೂ ಆತನ ಪೋಷಕರು ಬೆಟ್ಟದ ಮೇಲಿಂದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವಕನನ್ನು ಕುನಾಲ್ ಎಂದು ಗುರುತಿಸಲಾಗಿದೆ. ಆತ ಇತ್ತೀಚೆಗೆ ಐಫೋನ್ ಖರೀದಿಸಿದ್ದು, ಅದರ ಮಾಸಿಕ ಕಂತುಗಳನ್ನು (ಇಎಂಐ) ಪಾವತಿಸಲು ಸಾಧ್ಯವಾಗಿರಲಿಲ್ಲ. ಇತ್ತೀಚಿನ ಇಎಂಐ ಪಾವತಿಸುವ ವಿಚಾರವಾಗಿ ಕುನಾಲ್ ಹಾಗೂ ಆತನ ತಂದೆ ಮುರಳೀಧರ್ ಚಾಂದಗುಡೆ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದರಿಂದ ನೊಂದ ಕುನಾಲ್, ವಾಲುಜ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿಸ್‌ಗಾಂವ್ (Tisgaon) ಪ್ರದೇಶದಲ್ಲಿರುವ ಬೆಟ್ಟವೊಂದಕ್ಕೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದ. ಆತನ ಹಿಂದೆಯೇ ಪೋಷಕರು ಹಾಗೂ ಸ್ಥಳೀಯರು ಆತನನ್ನು ಹುಡುಕಿಕೊಂಡು ಹೋಗಿದ್ದರು.
ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಕುನಾಲ್‌ನ ಮನವೊಲಿಸಲು ಸ್ಥಳೀಯರು ಸತತ ಮೂರು ಗಂಟೆಗಳ ಕಾಲ ಹರಸಾಹಸ ಪಟ್ಟಿದ್ದಾರೆ. ‘ನಿನ್ನ ತಾಯಿಗಾಗಿಯಾದರೂ ಬದುಕು’ ಎಂದು ಸ್ಥಳೀಯರೊಬ್ಬರು ಕೇಳಿಕೊಂಡಾಗ, ‘ಇಲ್ಲ, ನಾನು ಸಾಯಲೇಬೇಕು. ನನಗೆ ಬೇರೆ ದಾರಿಯಿಲ್ಲ’ ಎಂದು ಕುನಾಲ್ ಉತ್ತರಿಸುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
”ಆತ ವಿದ್ಯಾವಂತ, ಆತನಿಗೆ ಉಜ್ವಲ ಭವಿಷ್ಯವಿದೆ, ತಾಯಿಯ ಮುಖ ನೋಡಾದರೂ ಕೆಳಗೆ ಇಳಿದು ಬಾ ಎಂದು ನಾವು ಸಾಕಷ್ಟು ಬೇಡಿಕೊಂಡೆವು. ಆತನಿಗೆ ‘ಐಫೋನ್ 15 ಪ್ರೊ’ ಕೊಡಿಸುವುದಾಗಿಯೂ ಭರವಸೆ ನೀಡಿದೆವು. ಆದರೆ ಆತ ಯಾವುದಕ್ಕೂ ಒಪ್ಪಲಿಲ್ಲ” ಎಂದು ಟಿಸ್‌ಗಾಂವ್ ಗ್ರಾಮದ ಮಾಜಿ ಸರಪಂಚ್ ಸಂಜಯ್ ಜಾಧವ್ ವಿವರಿಸಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ, ಮಗನನ್ನು ಹೇಗಾದರೂ ಮಾಡಿ ರಕ್ಷಿಸುವ ಉದ್ದೇಶದಿಂದ ತಂದೆ ಮುರಳೀಧರ್ ಅವರು ಕುನಾಲ್ ಬಳಿ ತೆರಳಿ ಆತನನ್ನು ಹಿಂದಕ್ಕೆ ಎಳೆಯಲು ಯತ್ನಿಸಿದ್ದಾರೆ. ಈ ಜಗ್ಗಾಟದ ವೇಳೆ ಇಬ್ಬರೂ ಆಯತಪ್ಪಿ ಕಮರಿಗೆ ಬಿದ್ದಿದ್ದಾರೆ. ಕಣ್ಣೆದುರೇ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದಿದ್ದನ್ನು ಕಂಡು ಆಘಾತಕ್ಕೊಳಗಾದ ತಾಯಿ ಸಂಗೀತಾ ಕೂಡ ಆಯತಪ್ಪಿ ಬೆಟ್ಟದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲೇ ಮೂವರೂ ಮೃತಪಟ್ಟಿದ್ದು, ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳನ್ನು ಅಲ್ಲಿದ್ದ ಪ್ರವಾಸಿಗರು ಮತ್ತು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಯುವಕ ಖಿನ್ನತೆಯಿಂದ ಬಳಲುತ್ತಿದ್ದ ಎಂಬ ವರದಿಗಳನ್ನು ಪೊಲೀಸರು ಈ ಹಂತದಲ್ಲಿ ಖಚಿತಪಡಿಸಿಲ್ಲ.




