ಪಾಕ್ ಕೊಲ್ಲಿಯಲ್ಲಿ ತಮಿಳುನಾಡಿನ ರಾಮೇಶ್ವರಂನ 7 ಜನ ಮೀನುಗಾರರನ್ನು ಶ್ರೀಲಂಕಾ ನೌಕಾಸೇನೆ ಬಂಧಿಸಿದೆ. ಬಂಧಿತರು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಶ್ರೀಲಂಕಾ ಆರೋಪಿಸಿದೆ. ಗುರುವಾರ ಮುಂಜಾನೆ ಮೀನುಗಾರರನ್ನು ಬಂಧಿಸಿ 2 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮೀನುಗಾರರ ಪ್ರಾಧೀಕಾರದ ಅಧಿಕೃತ ಮಾಹಿತಿಯಂತೆ 365 ಮೀನುಗಾರಿಕೆಯ ಟೋಕನ್‌ಗಳನ್ನು ಮಾರ್ಚ್ 25 ರಂದು ರಾಮೇಶ್ವರಂ ಫಿಶ್ ಲ್ಯಾಂಡಿಂಗ್ ಕೇಂದ್ರವು ವಿತರಿಸಿದೆ. ಬಂಧಿತ ಮೀನುಗಾರರು ಟೋಕನ್ ಪಡೆದ ಎರಡು ಬೋಟ್‌ಗಳನ್ನು ಬಳಸಿ ನೆಡುಂತೀವು ದ್ವೀಪದಲ್ಲಿ ಮೀನುಬೇಟೆಗೆ ಇಳಿದಿದ್ದ ಸಂದರ್ಭದಲ್ಲಿ ಶ್ರೀಲಂಕಾ ನೌಕಾ ಪಡೆಯಿಂದ ಬಂಧನಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಸಿಮ್ಸನ್ ಹಾಗೂ ಸಸಿಕುಮಾರ್ ಎಮಬುವವರ ದೋಣಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೀನುಗಾರರನ್ನು ಹೆಚ್ಚಿನ ವಿಚಾರಣೆಗಾಗಿ ಶ್ರೀಲಂಕಾ ನೌಕಾ ಬಂದರಿಗೆ ಕರೆದೊಯ್ಯಲಾಗಿದೆ.
ಮೀನುಗಾರರ ಬಂಧನವನ್ನು ವಿರೋಧಿಸಿ ತಂಗಚಿಮದಮ್‌ನ ಕಾರ್ಲ್ ಮಾರ್ಕ್ಸ್ ಪ್ರತಿಮೆಯ ಬಳಿ ಸೇರಿದ ಪ್ರತಿಭಟನಾ ನಿರತರು ಪ್ರತಿಮೆಯನ್ನು ದ್ವಂಸಗೊಳಿಸಿದ್ದಾರೆ. ಮೀನುಗಾರರ ಸಂಘವು ನಿರಂತರವಾಗಿ ನಡೆಯುತ್ತಿರುವ ಭಾರತೀಯ ಮೀನುಗಾರರ ಅಕ್ರಮ ಬಂಧನದ ಕುರಿತು ಪ್ರಶ್ನಿಸಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಹಾಗೂ ವಶ ಪಡಿಸಿದ ಮೀನು ದೋಣಿಗಳನ್ನು ಬಿಡಿಸಿ ಕೊಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಒತ್ತಾಯಿಸಿದೆ. ಮೀನುಗಾರರ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆಯು ಈ ಪ್ರದೇಶದ ಮೀನುಗಾರರ ಬದುಕನ್ನು ಅಸಹನೀಯಗೊಳಿಸಿದೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಮೀನುಗಾರರ ಅಭಿವೃದ್ಧಿ ನಿಗಮವು ಸಂಜೆ ನಾಲ್ಕು ಗಂಟೆಗೆ ತುರ್ತು ಸಭೆ ಕರೆಯಲಾಗಿದೆ. ಬೆಸ್ತ ಸಮುದಾಯವು ಕಳೇದ ನಾಲ್ಕು ದಶಕಗಳಿಂದ ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಮೀನುಗಾರಿಕೆಯೆ ಇವರ ಏಕೈಕ ಆದಾಯದ ಮೂಲವಾಗಿದೆ, 90% ಕುಟುಂಬಗಳು ಮೀನುಬೇಟೆ ನೆಚ್ಚಿ ಬದುಕು ಸಾಗಿಸುತ್ತಿರುವಾಗ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಇಂತಹ ಘಟನೆಗಳು ಅವರ ಬದುಕನ್ನು ದುರ್ಗಮವಾಗಿಸುತ್ತದೆ ಎಂದು ಮೀನುಗಾರರ ಮುಖ್ಯಸ್ಥ ಜೇಸು ರಾಜ ಆತಂಕ ತೋಡಿಕೊಂಡರು.
ಮತ್ತೊಬ್ಬ ಮೀನುಗಾರ ಆಂಟೋನಿ ಮಾತನಾಡಿ, “ಸರ್ಕಾರ ಶ್ರೀಲಂಕಾ ನಮ್ಮ ಸ್ನೇಹಿತ ರಾಷ್ಟ್ರ ಎಂದು ಹೇಳುವಾಗ ಇಂತಹ ಘಟನೆಗಳು ಯಾಕೆ ಮತ್ತೆ ಮತ್ತೆ ಸಂಭವಿಸುತ್ತಿದೆ ಎಂದು ಪ್ರಶ್ನಿಸಿದರು. ಶ್ರೀಲಂಕಾದ ಬಂಧನಗಳಿಂದ ಮತ್ತು ದಂಡಗಳಿಂದ ಮುಕ್ತಗೊಳ್ಳಲು ಮೀನುಗಾರ ಕುಟುಂಬಗಳು ಸಾಲದ ಕೂಪದಲ್ಲಿ ಬಿದ್ದಿವೆ. ಅಲ್ಲದೇ ಉದ್ಯೋಗವಿಲ್ಲದೆ ಬೀದಿ ಪಾಲಾಗಿದೆ. 2018ರಿಂದ ಇಲ್ಲಿಯವರೆಗೂ ಸುಮಾರು 40 ಲಕ್ಷ ಮೌಲ್ಯದ ಅತ್ಯಾಧುನಿಕ ಬೋಟ್‌ಗಳು ಹಾಗೂ 180 ದೋಣಿಗಳು ಪರದೇಶದ ವಶವಾಗಿದೆ” ಎಂದು ಹೇಳಿದ್ದಾರೆ.




