ಅಸ್ಸಾಂ | ಗೋಮಾಂಸದ ನೆಪದಲ್ಲಿ ‘ಶಿಕ್ಷಣದ ಹಕ್ಕು’ ಕಸಿಯಲು ಸಾಧ್ಯವೇ? ಸಂವಿಧಾನ ಹೇಳುವುದೇನು?

Date:

ಆಹಾರದ ವಿಚಾರವನ್ನು, ರಾಷ್ಟ್ರೀಯ ವಿವಾದವನ್ನಾಗಿ ಮಾಡಿರುವಲ್ಲಿ ಆಹಾರ ರಾಜಕೀಯ ಕೆಲಸ ಮಾಡಿದೆ. ಈ ಪ್ರಕರಣ ವೈಯಕ್ತಿಕ, ಧಾರ್ಮಿಕ, ಶಿಕ್ಷಣ ಹಕ್ಕುಗಳ ಸಂಕೀರ್ಣ ಸಂಬಂಧಗಳತ್ತ ಬೆರಳು ತೋರಿಸುತ್ತದೆ. ಈ ಘಟನೆ ಇಟ್ಟುಕೊಂಡು ಮಕ್ಕಳನ್ನು ಶಾಲೆಯಿಂದ ಹೊರಹಾಕುವ ಮತ್ತು ಮುಸ್ಲಿಂ ಸಮುದಾಯವನ್ನು ಅಪರಾಧೀಕರಿಸುವ ಯತ್ನಗಳು ಸಂಶಯಗಳನ್ನು ಹುಟ್ಟು ಹಾಕುತ್ತವೆ.

ಟಿಫನ್ ಬಾಕ್ಸ್‌ನಲ್ಲಿ ದನದ ಮಾಂಸ (ಬೀಫ್) ತಂದ ಆರೋಪದ ಮೇಲೆ ವಿವಾದ ಭುಗಿಲೆದ್ದ ಬೆನ್ನಲ್ಲೇ, ಅಸ್ಸಾಂನ ಗೋಲ್ಪಾರಾದ ಸರ್ಕಾರಿ ಪ್ರೌಢಶಾಲೆಯ ಐದು ಮಂದಿ ಮುಸ್ಲಿಂ ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

- Advertisement -

ಶಿಕ್ಷಣ ಹಕ್ಕಿಗೆ ವಿರುದ್ಧವಾಗಿ, ಮಕ್ಕಳ ಮೇಲೆ ಗದಾಪ್ರಹಾರ ನಡೆಸಲು ಮುಂದಾಗಿರುವ ಸರ್ಕಾರಿ ಶಾಲೆಯ ಈ ನಡೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಾಲಾ ಹಂತದಲ್ಲೇ ಬಗೆಹರಿಯಬೇಕಿದ್ದ ಸಂಗತಿ ಕೆಲವು ಸಂಘಟನೆಗಳ ಮಧ್ಯಪ್ರವೇಶದಿಂದ ದೊಡ್ಡ ಮಟ್ಟದ ವಿವಾದವಾಗಿ ಪರಿವರ್ತನೆಯಾಗಿದೆ ಮತ್ತು ಪ್ರಕರಣ ಮಾನವೀಯ ಆಯಾಮವನ್ನು ದಾಟಿ, ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವಂತೆ ಬೆಳೆದಿದೆ. ಧಾರ್ಮಿಕ ಸೂಕ್ಷ್ಮ ಸಂಗತಿಯಾಗಿ ಬದಲಾಗಿರುವ ಈ ಪ್ರಕರಣ, ಹಲವು ಸಾಂವಿಧಾನಿಕ ಪ್ರಶ್ನೆಗಳನ್ನು ಮುಂದಕ್ಕೆ ತಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಗ್ರಾಮೀಣ ಮೀಸಲಾತಿಯಲ್ಲಿ ಸಾಮಾಜಿಕ ಅನ್ಯಾಯ; ಬರಿದಾಗುತ್ತಿರುವ ಬಡ ಮಕ್ಕಳ...

ಸರಕಾರಿ ಶಾಲೆ ಸೇರುವವರು ಕೇವಲ ಬಡತನ-ಕೆಳಮಟ್ಟದ ಕುಟುಂಬದವರು ಎಂಬಂತಾಗಿದೆ. ಈ ಋಣಾತ್ಮಕ ಭಾವನೆ ಹೋಗಲಾಡಿಸಲು ಕನ್ನಡದಲ್ಲಿ ಕಲಿತರೆ ಉನ್ನತ ಶಿಕ್ಷಣ, ಉದ್ಯೋಗ ಸ್ಪರ್ಧೆಯಲ್ಲಿ ಜಯಿಸಬಹುದೆಂಬ ವಿಶ್ವಾಸ ಮೂಡಿಸಬೇಕಾಗಿದೆ. ಈಗಿನ ಎಡಬಿಡಂಗಿ ಗ್ರಾಮೀಣ ಮೀಸಲಾತಿ...

ಮುಸ್ಲಿಂ ಬಹುಸಂಖ್ಯಾತ ಗೋಲ್ಪಾರಾ ಜಿಲ್ಲೆಯ ಮಿಶ್ರ ಜನಸಂಖ್ಯೆ ಇರುವ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಸ್ತುತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. “ಇನ್ನು ಮುಂದೆ ವಿದ್ಯಾರ್ಥಿಗಳು ಟಿಫನ್ ಬಾಕ್ಸ್‌ನಲ್ಲಿ ಕೇವಲ ಸಸ್ಯಾಹಾರಿ ಆಹಾರವನ್ನು ಮಾತ್ರ ತರಬೇಕು” ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿದೆ.

ಏನಿದು ಘಟನೆ? ಆರೋಪಗಳೇನು?

ಶಾಲಾ ಅಧಿಕಾರಿಗಳ ಪ್ರಕಾರ, ಕಳೆದ ಶುಕ್ರವಾರ 9ನೇ ತರಗತಿಯ ಐದು ವಿದ್ಯಾರ್ಥಿಗಳು ಟಿಫನ್ ಬಾಕ್ಸ್‌ನಲ್ಲಿ ತಂದಿದ್ದ ದನದ ಮಾಂಸವನ್ನು ಹಂಚಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಹಿಂದೂ ಸಹಪಾಠಿಗಳು ಈ ವಿಷಯವನ್ನು ಶಿಕ್ಷಕರಿಗೆ ಮತ್ತು ನಂತರ ತಮ್ಮ ಕುಟುಂಬದವರಿಗೆ ತಿಳಿಸಿದ ಬಳಿಕ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಇಬ್ಬರು ಹಿಂದೂ ಸಹಪಾಠಿಗಳ ಪೋಷಕರು ನೀಡಿದ ದೂರಿನ ಮೇರೆಗೆ, ವಿದ್ಯಾರ್ಥಿಗಳಲ್ಲಿ ಒಬ್ಬನಾದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ತಾಯಿಯನ್ನು ಬಂಧಿಸಿದ್ದಾರೆ. ಸ್ಥಳೀಯ ಸ್ವಸಹಾಯ ಸಂಘವೊಂದರ ಒಡನಾಡಿಯಾಗಿರುವ ಆ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡಿದ್ದು, ‘ಸಿಂಗಲ್ ಪೇರೆಂಟ್’, ಅಂದರೆ ಒಂಟಿ ಪೋಷಕರಾಗಿದ್ದಾರೆ.

ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಉದ್ದೇಶಪೂರ್ವಕ ಕೃತ್ಯಗಳ ಆರೋಪದಡಿಯಲ್ಲಿ ತಾಯಿ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಆನಂದ ರೇಭಾ ತಿಳಿಸಿದ್ದಾರೆ. ಬಾಲಕನು ಅಪ್ರಾಪ್ತನಾಗಿರುವುದರಿಂದ ಆತನನ್ನು ಬಾಲನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ನಾಲ್ಕು ವಿದ್ಯಾರ್ಥಿಗಳನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ.

ಐದು ವಿದ್ಯಾರ್ಥಿಗಳನ್ನು ಶಾಲೆಯಿಂದ ಉಚ್ಛಾಟಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಮಂಗಳವಾರ ಶಾಲಾ ನಿರ್ವಹಣಾ ಅಭಿವೃದ್ಧಿ ಸಮಿತಿ (SMDC) ಸಭೆ ನಡೆಸಲಿದೆ ಎಂದು ಸಮಿತಿಯ ಅಧ್ಯಕ್ಷ ಸುಬ್ರತಾ ದಾಸ್ ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಇದೊಂದು ಸೂಕ್ಷ್ಮ ವಿಷಯವಾಗಿದ್ದರಿಂದ ಆರಂಭದಲ್ಲಿ ಶಾಲೆಯ ಒಳಗಡೆಯೇ ಬಗೆಹರಿಸಲು ಪ್ರಯತ್ನಿಸಲಾಗಿತ್ತು, ಆದರೆ ಸ್ಥಳೀಯ ಸಂಘಟನೆಗಳು ಇದರಲ್ಲಿ ಭಾಗಿಯಾದ ನಂತರ ಪರಿಸ್ಥಿತಿ ಕೈಮೀರಿ ಹೋಯಿತು ಎಂದು ದಾಸ್ ಹೇಳಿದ್ದಾರೆ.

ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರ

ಘಟನೆಯ ಸುದ್ದಿ ಹರಡುತ್ತಿದ್ದಂತೆ ಹಲವಾರು ಸಂಘಟನೆಗಳು ಶಾಲೆಯ ಬಳಿ ಜಮಾಯಿಸಿದ್ದವು. ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

“ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದಿರುವ ಜಿಲ್ಲಾಧಿಕಾರಿ ಪ್ರದೀಪ್ ತಿಮುಂಗ್, ಶಾಲೆಗಳಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳನ್ನು ನಿರ್ಬಂಧಿಸುವಂತೆ ಸಲಹೆ ನೀಡಿದ್ದಾರೆ. ಜಿಲ್ಲಾಡಳಿತವು ಈ ವಿಷಯದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಯನ್ನೂ ಪ್ರಾರಂಭಿಸಿದೆ.

ವಿದ್ಯಾರ್ಥಿಗಳನ್ನು ಹೊರಹಾಕುವ ಸಂಬಂಧ ಎಸ್‌ಡಿಎಂಸಿ ಚರ್ಚಿಸುತ್ತಿರುವುದನ್ನು ‘ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್’ ನಾಯಕ ಮಣಿದುಲ್ ಇಸ್ಲಾಂ ಟೀಕಿಸಿದ್ದಾರೆ. “ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು” ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. “ನೆರೆಹೊರೆಯವರಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಮರಳಿ ತರುವುದರತ್ತ ನಾವು ಗಮನ ಹರಿಸಬೇಕಾಗಿದೆ” ಎಂದು ಕೋರಿದ್ದಾರೆ.

ಆರೋಪದಲ್ಲಿ ಸಿಲುಕಿರುವ ಹುಡುಗರು ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿರುವ ಮಣಿದುಲ್ ಇಸ್ಲಾಂ, “ಟಿಫನ್ ಹಂಚಿಕೊಳ್ಳುತ್ತಿದ್ದಾಗ, ಇಬ್ಬರು ಸಹಪಾಠಿಗಳು ಬಂದು ಏನು ತಿನ್ನುತ್ತಿದ್ದೀರಿ ಎಂದು ಕೇಳಿದ್ದಾರೆ. ಅಲ್ಲಿಂದಲೇ ಈ ಸಮಸ್ಯೆ ಬೆಳೆಯಿತು ಎಂದು ಹುಡುಗರು ಹೇಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಆಹಾರದ ವಿಚಾರವನ್ನು, ರಾಷ್ಟ್ರೀಯ ವಿವಾದವನ್ನಾಗಿ ಮಾಡಿರುವಲ್ಲಿ ಆಹಾರ ರಾಜಕೀಯ ಕೆಲಸ ಮಾಡಿದೆ. ಈ ಪ್ರಕರಣ ವೈಯಕ್ತಿಕ, ಧಾರ್ಮಿಕ, ಶಿಕ್ಷಣ ಹಕ್ಕುಗಳ ಸಂಕೀರ್ಣ ಸಂಬಂಧಗಳತ್ತ ಬೆರಳು ತೋರಿಸುತ್ತದೆ. ಈ ಘಟನೆ ಇಟ್ಟುಕೊಂಡು ಮಕ್ಕಳನ್ನು ಶಾಲೆಯಿಂದ ಹೊರಹಾಕುವ ಮತ್ತು ಮುಸ್ಲಿಂ ಸಮುದಾಯವನ್ನು ಅಪರಾಧೀಕರಿಸುವ ಯತ್ನಗಳು ಸಂಶಯಗಳನ್ನು ಹುಟ್ಟು ಹಾಕುತ್ತವೆ.

ಘಟನೆಯ ಕುರಿತು ಶಿಕ್ಷಣತಜ್ಞ ಬಿ.ಶ್ರೀಪಾದ ಭಟ್ ಅವರು ಪ್ರತಿಕ್ರಿಯಿಸಿ, “ಶಾಲೆಯಲ್ಲಿ ಒಂದು ಮಗು ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ನಿಯಮ ತರುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಸಸ್ಯಾಹಾರ ಮತ್ತು ಮಾಂಸಾಹಾರವೆಂದು ತಾರತಮ್ಯ ಮಾಡುವಂತಿಲ್ಲ. ಮಕ್ಕಳನ್ನು ಶಿಕ್ಷಣದಿಂದ ಹೊರಹಾಕುವಂತಿಲ್ಲ. 9ನೇ ತರಗತಿಯವರೆಗೂ ಶಿಕ್ಷಣ ಹಕ್ಕು ಕಾಯ್ದೆಯನ್ನು ತಾಂತ್ರಿಕವಾಗಿ ವಿಸ್ತರಿಸಿ ನೋಡಬೇಕಾಗುತ್ತದೆ. ಮಕ್ಕಳನ್ನು ಶಾಲೆಯಿಂದ ಹೊರಗೆ ಹಾಕುವುದು, ಶಿಕ್ಷಣ ವಂಚಿತರನ್ನಾಗಿ ಮಾಡುವುದು ಅಪರಾಧ. ಸಂವಿಧಾನದ ವಿಧಿ 21(ಎ) ಬದುಕುವ ಹಕ್ಕನ್ನು ಪ್ರತಿಪಾದಿಸುತ್ತದೆ. ಆಹಾರದ ಹಕ್ಕನ್ನು ಕಸಿಯುವುದೆಂದರೆ ಬದುಕುವ ಹಕ್ಕನ್ನು ಕಸಿದಂತೆ. ಆಹಾರದ ನೆಪದಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲೇಬಾರದು. ಅದು ಕ್ರಿಮಿನಲ್ ಅಫೆನ್ಸ್. ಉನ್ನಿಕೃಷ್ಣನ್ ವರ್ಸಸ್ ಸ್ಟೇಟ್ ಆಫ್ ಆಂಧ್ರಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಗಮನಿಸಬೇಕಾಗುತ್ತದೆ. ಶಿಕ್ಷಣವನ್ನು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಕೋರ್ಟ್ ವ್ಯಾಖ್ಯಾನಿಸಿದೆ. ಬದುಕುವ ಹಕ್ಕು ಶಿಕ್ಷಣದ ಹಕ್ಕನ್ನು ಪ್ರತಿಪಾದಿಸುತ್ತದೆ. ಶಿಕ್ಷಣದ ಹಕ್ಕನ್ನು ಕಸಿಯುವುದೆಂದರೆ, ಬದುಕುವ ಹಕ್ಕನ್ನೇ ಕಸಿದಂತೆ. ಒಬ್ಬ ವ್ಯಕ್ತಿ ಘನತೆಯಿಂದ ಜೀವಿಸಬೇಕಾದರೆ ಆತನಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣವಿಲ್ಲದೆ ಜೀವಿಸುವ ಹಕ್ಕು ಅರ್ಥಹೀನವಾಗುತ್ತದೆ. ಆದ್ದರಿಂದ ಶಿಕ್ಷಣದ ಹಕ್ಕು ವಿಧಿ 21ರ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಾವುದೇ ಶಾಲೆ ಉಲ್ಲಂಘಿಸುವಂತಿಲ್ಲ” ಎಂದರು.

ಶಿಕ್ಷಣ ಹಕ್ಕು ಕಾಯ್ದೆ ಏನು ಹೇಳುತ್ತದೆ?

ಭಾರತದ ಸಂವಿಧಾನದ ವಿಧಿ 21A ಮತ್ತು ಶಿಕ್ಷಣ ಹಕ್ಕು ಕಾಯ್ದೆ (RTE), 2009 ರ ಪ್ರಕಾರ 6 ರಿಂದ 14 ವರ್ಷದೊಳಗಿನ ಪ್ರತಿ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿದೆ. ಇಲ್ಲಿ ಆರೋಪಿಗಳಾಗಿರುವ ವಿದ್ಯಾರ್ಥಿಗಳು 9ನೇ ತರಗತಿಯವರಾಗಿದ್ದು (ಸಾಮಾನ್ಯವಾಗಿ 14 ವರ್ಷ ಆಸುಪಾಸು ಅಥವಾ ಒಳಗಿನವರು), ಅವರನ್ನು ಶಾಲೆಯಿಂದ ಹೊರಹಾಕುವ ನಿರ್ಧಾರವು ಅವರ ಶಿಕ್ಷಣದ ಹಕ್ಕನ್ನು ನೇರವಾಗಿ ಬಾಧಿಸುತ್ತದೆ. ಕಾಯ್ದೆಯ ಪ್ರಕಾರ, ಯಾವುದೇ ಮಗುವನ್ನು ಶಾಲೆಯಿಂದ ಹೊರಹಾಕುವ ಮುನ್ನ ಬದಲಿ ವ್ಯವಸ್ಥೆ ಅಥವಾ ಬಲವಾದ ಕಾನೂನಾತ್ಮಕ ಕಾರಣಗಳಿರಬೇಕು. ಕೇವಲ ಶಾಲಾ ಸಮಿತಿಯ (SMDC) ತೀರ್ಮಾನದ ಮೇಲೆ ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸುವುದು ಶಿಕ್ಷಣದ ಹಕ್ಕಿನ ಉಲ್ಲಂಘನೆ ಎಂದು ನೋಡಬೇಕಾಗುತ್ತದೆ.

ಭಾರತ ಸಂವಿಧಾನದ ವಿಧಿ 21ರ ಅಡಿಯಲ್ಲಿ ‘ಜೀವಿಸುವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ’ದ ವಿಸ್ತೃತ ರೂಪವೇ ಆಹಾರದ ಹಕ್ಕಾಗಿದೆ. ತಾನು ಏನನ್ನು ತಿನ್ನಬೇಕು ಎಂಬುದು ಒಬ್ಬ ವ್ಯಕ್ತಿಯ ಖಾಸಗಿ ಹಕ್ಕು ಮತ್ತು ಆಹಾರದ ಹಕ್ಕಿನ ಭಾಗವಾಗಿದೆ. ಸುಪ್ರೀಂ ಕೋರ್ಟ್ ಕೂಡ ಹಲವು ತೀರ್ಪುಗಳಲ್ಲಿ ಆಹಾರದ ಅಭ್ಯಾಸಗಳು ವ್ಯಕ್ತಿ ಸ್ವಾತಂತ್ರ್ಯದಡಿ ಬರುತ್ತವೆ ಎಂದು ಹೇಳಿದೆ. ಇಲ್ಲಿ ಶಾಲೆಯು ಕೇವಲ ಸಸ್ಯಾಹಾರಕ್ಕೆ ಮಾತ್ರ ಅನುಮತಿ ನೀಡುವ ನಿಯಮ ತಂದಿರುವುದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಂಸ್ಥಿಕ ಶಿಸ್ತಿನ ನಡುವಿನ ಸಂಘರ್ಷವನ್ನು ತೋರಿಸುತ್ತದೆ.

ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್

ಸಂವಿಧಾನದ ವಿಧಿ 25ರ ಪ್ರಕಾರ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪಾಲಿಸುವ ಮತ್ತು ಪ್ರಸಾರ ಮಾಡುವ ಸ್ವಾತಂತ್ರ್ಯವಿದೆ. ಈ ಪ್ರಕರಣದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಎರಡು ರೀತಿಯಲ್ಲಿ ನೋಡಬೇಕಾಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಆಹಾರ ಪದ್ಧತಿಯನ್ನು ಅನುಸರಿಸುವುದು ಅವರ ಧಾರ್ಮಿಕ/ಸಂಸ್ಕೃತಿಯ ಭಾಗವಾಗಿರಬಹುದು. ಆದರೆ ಗೋಮಾಂಸ ತಿನ್ನದ ಧರ್ಮದವರಿಗೆ ಬಲವಂತವಾಗಿ ತಿನ್ನಿಸಲು ಪ್ರಯತ್ನಿಸಲಾಯಿತು ಎಂಬ ಆರೋಪ ಗಂಭೀರ ಸ್ವರೂಪದ್ದಾಗುತ್ತದೆ. ಆಗ  ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ. ಆದರೆ ಇಲ್ಲಿ ಬಲವಂತವಾಗಿ ತಿನ್ನಿಸಲು ಯತ್ನಿಸಲಾಗಿದೆ ಎಂಬುದನ್ನು ಆರೋಪಿ ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ. ತಮ್ಮಷ್ಟಕ್ಕೆ ತಾವು ತಿನ್ನುವುದನ್ನು ಪ್ರಶ್ನಿಸುವುದು ಕೂಡ ಇನ್ನೊಬ್ಬರ ವೈಯಕ್ತಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಮಗುವಿನ ಟಿಫಿನ್ ಬಾಕ್ಸ್ನಲ್ಲಿ ಆಹಾರ ಪ್ಯಾಕ್ ಮಾಡಿಕೊಟ್ಟಿದ್ದಕ್ಕಾಗಿ ತಾಯಿಯ ಮೇಲೆ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ’ ಆರೋಪ ಹೊರಿಸಲಾಗಿದೆ. ಆದರೆ, ಆಕೆ ಉದ್ದೇಶಪೂರ್ವಕವಾಗಿ ಹಿಂದೂ ವಿದ್ಯಾರ್ಥಿಗಳಿಗೆ ಅದನ್ನು ತಿನ್ನಿಸಲು ಮಗನಿಗೆ ಪ್ರಚೋದನೆ ನೀಡಿದ್ದಳೇ ಎಂಬುದನ್ನು ಸಾಬೀತುಪಡಿಸುವುದು ಕಾನೂನಾತ್ಮಕವಾಗಿ ಕಷ್ಟದ ಕೆಲಸ. ಆಕೆ ಒಂಟಿ ಪೋಷಕಳಾಗಿದ್ದು (Single Parent), ಆಕೆಯ ಬಂಧನವು ಮಗುವಿನ ರಕ್ಷಣೆಯ ದೃಷ್ಟಿಯಿಂದಲೂ ಕಳವಳಕಾರಿ ಸಂಗತಿ.

ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ‘ಕೇವಲ ಸಸ್ಯಾಹಾರವನ್ನಷ್ಟೇ ಟಿಫಿನ್ ಬಾಕ್ಸ್ನಲ್ಲಿ ತರಬೇಕು’ ಎಂದು ಶಾಲಾ ಮಂಡಳಿ (SMDC) ಅಥವಾ ಜಿಲ್ಲಾಡಳಿತ ಆದೇಶ ಹೊರಡಿಸುವುದು ಕಾನೂನು ಮತ್ತು ಸಾಂವಿಧಾನಿಕ ದೃಷ್ಟಿಕೋನದಿಂದ ಸಂಪೂರ್ಣವಾಗಿ ಊರ್ಜಿತವಾಗುವುದಿಲ್ಲ. ಮನೆಯಿಂದ ತರುವ ವೈಯಕ್ತಿಕ ಟಿಫಿನ್ ಬಾಕ್ಸ್ನೊಳಗಿನ ಆಹಾರದ ಮೇಲೆ ನಿರ್ಬಂಧ ಹೇರುವುದು ವ್ಯಕ್ತಿಯ ಖಾಸಗಿತನ ಮತ್ತು ಆಹಾರದ ಹಕ್ಕಿನ ನೇರ ಉಲ್ಲಂಘನೆಯಾಗುತ್ತದೆ ಎಂದು ಕಾನೂನು ತಜ್ಞರು ವಾದಿಸುತ್ತಾರೆ.

ಸ್ಥಳೀಯ ವಿದ್ಯಾರ್ಥಿ ಸಂಘಟನೆಯ ನಾಯಕ ಹೇಳಿರುವಂತೆ, ಮಕ್ಕಳ ತಪ್ಪುಗಳನ್ನು ತಿದ್ದಿ ಶಾಲೆ ಮತ್ತು ಗ್ರಾಮದಲ್ಲಿ ‘ಕೋಮು ಸೌಹಾರ್ದತೆ’ಯನ್ನು ಮರುಸ್ಥಾಪಿಸುವುದು ಮುಖ್ಯವೇ ಹೊರತು, ಮಕ್ಕಳನ್ನು ಶಾಲೆಯಿಂದ ಹೊರಹಾಕಿ ಅವರ ಭವಿಷ್ಯವನ್ನು ಹಾಳು ಮಾಡುವುದು ಅಥವಾ ವಿಷಯವನ್ನು ರಾಜಕೀಯಗೊಳಿಸುವುದು ಈ ಸಮಸ್ಯೆಗೆ ಕಾನೂನಾತ್ಮಕ ಹಾಗೂ ಮಾನವೀಯ ಪರಿಹಾರವಲ್ಲ. ಆದರೆ ಇಲ್ಲಿ ಆರೋಪಿ ವಿದ್ಯಾರ್ಥಿಗಳು ಮುಸ್ಲಿಮರಾಗಿರುವ ಕಾರಣ, ಕೋಮು ರಾಜಕಾರಣ ಮಾಡುವ ಪ್ರಭುತ್ವಕ್ಕೆ ಅಸ್ತ್ರ ಸಿಕ್ಕಂತಾಗಿದೆ!

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು ‘ರನ್‌ಆಫ್’ ವ್ಯವಸ್ಥೆ, ಭಾರತಕ್ಕೂ ಇದು ಅಗತ್ಯವೇ?

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ, ಪೊಲೀಸರು, ಕಟ್ಟಡ ಕಾರ್ಮಿಕರಿಗೂ ಆಘಾತ!

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್,...

ವಿಜಯಪುರ | ಅಂತಿಮ ಮತದಾರರ ಪಟ್ಟಿ ಪ್ರಕಟ: ನಾಗಠಾಣದಲ್ಲಿ ಅತಿ ಹೆಚ್ಚು ಮತದಾರರು

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು...