ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ನೇತೃತ್ವದ ಭಾರತೀಯ ಚುನಾವಣಾ ಆಯೋಗ ಸೇರಿಕೊಂಡು ಅರ್ಹ ಮತದಾರರ ಮತದ ಹಕ್ಕನ್ನು ಕಸಿದುಕೊಂಡಿವೆ/ಕದ್ದಿವೆ. ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿಗೆ ತಳ್ಳಿವೆ.
ಜನಸಾಮಾನ್ಯರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು ತಮಗೆ ವೋಟ್ ಹಾಕುವುದಿಲ್ಲ ಎಂಬ ಕಾರಣಕ್ಕೆ, ಅಂತಹ ಮತದಾರರ ಹೆಸರುಗಳನ್ನೇ ಮತಪಟ್ಟಿಯಿಂದ ಡಿಲೀಟ್ ಮಾಡುವ ಮಹಾ ಸಂಚನ್ನು ಮೋದಿ-ಶಾ ಜೋಡಿ ನಡೆಸಿದೆ. ಈ ಅಕ್ರಮಕ್ಕಾಗಿ ಚುನಾವಣಾ ಆಯೋಗದ ‘ಫಾರ್ಮ್-7’ಎಂಬ ಅಸ್ತ್ರವನ್ನು ಬಳಸಿಕೊಂಡಿದೆ.
ಏನಿದು ‘ಫಾರ್ಮ್-7’ ಹುನ್ನಾರ? ನಿಯಮಗಳೇನು ಹೇಳುತ್ತವೆ?
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ಯಾರಾದರೂ ಮೃತಪಟ್ಟಿದ್ದರೆ, ಬೇರೆಡೆಗೆ ಶಾಶ್ವತವಾಗಿ ವಾಸಸ್ಥಳ ಬದಲಾಯಿಸಿದ್ದರೆ ಅಥವಾ ನಕಲಿ ಹೆಸರಿದ್ದರೆ, ಅಂತಹ ಹೆಸರುಗಳನ್ನು ಮತಪಟ್ಟಿಯಿಂದ ತೆರವುಗೊಳಿಸಲು ‘ಫಾರ್ಮ್-7’ ಮೂಲಕ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗುತ್ತದೆ.
ಆದರೆ, ಈ ಫಾರ್ಮ್-7 ಅನ್ನು ಯಾರು ಬೇಕಾದರೂ, ಎಷ್ಟೆಂದರೆ ಅಷ್ಟು ಸಲ್ಲಿಸಲು ಅವಕಾಶವಿಲ್ಲ. ಅದಕ್ಕೂ ಹಲವು ನಿಯಮಗಳಿವೆ. ಚುನಾವಣಾ ಆಯೋಗದ ಸ್ಪಷ್ಟ ನಿಯಮಗಳ ಪ್ರಕಾರ:
- ಸಾಮಾನ್ಯ ವ್ಯಕ್ತಿ: ತನ್ನ ಅಥವಾ ತನ್ನ ಕುಟುಂಬದ ಸದಸ್ಯರ ಹೆಸರು ತೆಗೆಯಲು ಮಾತ್ರ ಅರ್ಜಿ ಹಾಕಬಹುದು.
- ಬಿಎಲ್‌ಎ (ಬೂತ್ ಮಟ್ಟದ ಏಜೆಂಟ್): ರಾಜಕೀಯ ಪಕ್ಷಗಳು ನೇಮಕ ಮಾಡಿರುವ ಬಿಎಲ್‌ಎ ದಿನಕ್ಕೆ ಗರಿಷ್ಠ 10 ಅರ್ಜಿಗಳನ್ನು ಹಾಗೂ ಇಡೀ ಪರಿಷ್ಕರಣೆಯ ಪ್ರಕ್ರಿಯೆಯಲ್ಲಿ ಒಟ್ಟಾರೆಯಾಗಿ ಗರಿಷ್ಠ 30 ಆಕ್ಷೇಪಣೆಗಳನ್ನು ಮಾತ್ರ ಸಲ್ಲಿಸಬಹುದು.
ಇದಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸುವುದು ಮತ್ತು ಸ್ವೀಕರಿಸುವುದು ಸಂಪೂರ್ಣ ಕಾನೂನುಬಾಹಿರ.
ಕಣ್ಣೆದುರೇ ನಡೆಯುತ್ತಿರುವ ಸೈಬರ್ ದರೋಡೆ
ಪ್ರಸ್ತುತ, ಚುನಾವಣಾ ಆಯೋಗದ ಸ್ಪಷ್ಟ ನಿಯಮಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಒಬ್ಬನೇ ವ್ಯಕ್ತಿ ಒಂದೇ ದಿನದಲ್ಲಿ 100, 200, 400 ಹಾಗೂ 500ರಷ್ಟು ಫಾರ್ಮ್-7 ಅರ್ಜಿಗಳನ್ನು ರಾಶಿಯಾಗಿ ಸಲ್ಲಿಸುತ್ತಿದ್ದಾರೆ. ನಕಲಿ ಸಹಿಗಳನ್ನು ಹಾಕಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಿರೋಧ ಪಕ್ಷಗಳ ಬಲವಿರುವ ಕ್ಷೇತ್ರಗಳ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಸೈಬರ್ ದರೋಡೆಕೋರರಂತೆ ದಾಳಿ ಮಾಡಲಾಗುತ್ತಿದೆ.
ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಚುನಾವಣಾ ಆಯೋಗವು ಈ ಎಲ್ಲ ಅಕ್ರಮ ಅರ್ಜಿಗಳನ್ನು ಸ್ವೀಕರಿಸಿ, ನೈಜ ಮತದಾರರಿಗೆ ನೋಟಿಸ್ ಕೊಟ್ಟು ಅಲೆದಾಡಿಸುತ್ತಿದೆ. ಅವರ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ.
ಕಾನೂನು ಏನು ಹೇಳುತ್ತದೆ? ಆಯೋಗ ಮಾಡುತ್ತಿರುವುದೇನು?
ಜನಪ್ರತಿನಿಧಿ ಕಾಯ್ದೆ (Representation of the People Act) ಮತ್ತು ಚುನಾವಣಾ ನಿಯಮಗಳ ಪ್ರಕಾರ, ಯಾರಾದರೂ ಸುಳ್ಳು ಮಾಹಿತಿ ನೀಡಿ, ನಕಲಿ ದಾಖಲೆ ಸೃಷ್ಟಿಸಿ, ದುರುದ್ದೇಶಪೂರ್ವಕವಾಗಿ ಮತದಾರರ ಹೆಸರು ಅಳಿಸಲು ಫಾರ್ಮ್-7 ಸಲ್ಲಿಸಿದರೆ, ಅವರ ವಿರುದ್ಧ ತಕ್ಷಣವೇ ‘ಕ್ರಿಮಿನಲ್ ಕೇಸ್’ ದಾಖಲಿಸಬೇಕು. ಮಾತ್ರವಲ್ಲ, ಅವರನ್ನು ಬಂಧಿಸಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಆದರೆ, ದೇಶಾದ್ಯಂತ ಲಕ್ಷಾಂತರ ನಕಲಿ ಫಾರ್ಮ್-7 ಸಲ್ಲಿಕೆಯಾಗಿದ್ದರೂ ಚುನಾವಣಾ ಆಯೋಗವು ಒಂದೇ ಒಂದು ಕ್ರಿಮಿನಲ್ ಕೇಸ್ ದಾಖಲಿಸಿಲ್ಲ. ಒಬ್ಬ ವ್ಯಕ್ತಿ ಬಂದು 400 ಅರ್ಜಿಗಳನ್ನು ಸಲ್ಲಿಸಿದಾಗ, ‘ನಾವು ಇಷ್ಟೊಂದು ಅರ್ಜಿಗಳನ್ನು ಸ್ವೀಕರಿಸಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಜಾರಿಕೊಳ್ಳುವ ಅಧಿಕಾರಿಗಳು, ಅಷ್ಟೊಂದು ನಕಲಿ ಅರ್ಜಿ ಸಲ್ಲಿಸಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ಯಾಕೆ ದಾಖಲಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುತ್ತಿಲ್ಲ.
ಮಾತ್ರವಲ್ಲ, ಯಾವ ಕ್ಷೇತ್ರದಲ್ಲಿ ಎಷ್ಟು ಫಾರ್ಮ್-7 ಸಲ್ಲಿಕೆಯಾಗಿವೆ ಎಂದು ತಿಳಿಯಲು ಪ್ರತಿದಿನದ ‘ಫಾರ್ಮ್-10’ ಡೌನ್‌ಲೋಡ್ ಮಾಡಿಕೊಳ್ಳಲೇಬೇಕಾದ ದುಸ್ಥಿತಿಯನ್ನು ಆಯೋಗ ನಿರ್ಮಿಸಿದೆ. ಒಂದೇ ಕ್ಲಿಕ್‌ನಲ್ಲಿ ಇಡೀ ಕ್ಷೇತ್ರದ ರಿಪೋರ್ಟ್ ನೀಡುವ ಪಾರದರ್ಶಕ ವ್ಯವಸ್ಥೆಯನ್ನು ಆಯೋಗ ಮುಚ್ಚಿಟ್ಟಿದೆ.
ಆಯೋಗದ ಈ ಮೌನ ಮತ್ತು ಅಸಹಕಾರದಿಂದಾಗಿ, ನಕಲಿ ಅರ್ಜಿ ಸಲ್ಲಿಸುವ ದುಷ್ಕರ್ಮಿಗಳಿಗೆ ಯಾವುದೇ ಭಯವಿಲ್ಲದಂತಾಗಿದೆ. ಚುನಾವಣಾ ಆಯೋಗ ನಕಲಿ ಅರ್ಜಿ ಹಾಕುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ಅವರು ತಮ್ಮೊಂಗಿದ್ದಾರೆ ಅನ್ನೋದು ಬಿಜೆಪಿಗರಿಗೆ ಖಾತರಿ ಆದಂತೆ, ಅವರ ಧೈರ್ಯವೂ ಹೆಚ್ಚಾಗಿದೆ. “ನಾವು ಎಷ್ಟು ಬೇಕಾದರೂ ನಕಲಿ ಫಾರ್ಮ್-7 ಹಾಕಬಹುದು, ನಮ್ಮನ್ನು ಆಯೋಗ ರಕ್ಷಿಸುತ್ತದೆ, ನಮಗೆ ಯಾವ ತೊಂದರೆಯೂ ಆಗುವುದಿಲ್ಲ!” ಎಂಬ ಅಹಂಕಾರ ಬಿಜೆಪಿಗರಲ್ಲಿದೆ. ಇದೇ ಧೈರ್ಯದಲ್ಲೇ ಅವರು ದೇಶಾದ್ಯಂತ ಹೆಗ್ಗಿಲ್ಲದೆ, ಭಯವಿಲ್ಲದೆ ಹೆಜ್ಜೆ ಹೆಜ್ಜೆಗೂ ವೋಟ್ ಕಳ್ಳತನ ಮಾಡುತ್ತಿದ್ದಾರೆ! ಕುಳಿತಲ್ಲಿಯೇ ಲಕ್ಷಾಂತರ ವೋಟ್‌ಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ.
ಜನರು ತಾಲೂಕು ಕಚೇರಿ ಹಾಗೂ ಚುನಾವಣಾ ಅಧಿಕಾರಿಗಳ ಕಚೇರಿಗಳ ಮುಂದೆ ಆಧಾರ್, ರೇಷನ್ ಕಾರ್ಡ್ ಸೇರಿದಂತೆ ಹಲವಾರು ದಾಖಲೆಗಳನ್ನು ಹಿಡಿದು ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ.
ದೇಶಾದ್ಯಂತ ಡಿಲೀಟ್ ಆದ ಮತಗಳ ಭೀಕರ ಅಂಕಿ-ಅಂಶಗಳು
‘ಫಾರ್ಮ್-7’ ದುರುಪಯೋಗಪಡಿಸಿಕೊಂಡು ದೇಶದ ವಿವಿಧ ರಾಜ್ಯಗಳಲ್ಲಿ ಕೋಟ್ಯಂತರ ಮತಗಳನ್ನು ಅಳಿಸಿಹಾಕಲಾಗಿದೆ:
ಪಶ್ಚಿಮ ಬಂಗಾಳ: 6 ಲಕ್ಷ ಮತಗಳು
ಉತ್ತರ ಪ್ರದೇಶ: 2.6 ಲಕ್ಷ ಮತಗಳು
ಬಿಹಾರ: 3 ಲಕ್ಷಕ್ಕೂ ಹೆಚ್ಚು ಮತಗಳು
ಗುಜರಾತ್: 1.833 ಲಕ್ಷ ಮತಗಳು
ಉತ್ತರಾಖಂಡ: 95,000 ಮತಗಳು
ಕೇವಲ ಸಣ್ಣ ಮಾರ್ಜಿನ್ ಗೆಲುವಿನ ಹಿಂದಿನ ರಹಸ್ಯ!
ಪಶ್ಚಿಮ ಬಂಗಾಳ ಮತ್ತು ದೇಶದ ಇತರೆಡೆ ಬಿಜೆಪಿ ತೀರಾ ಕಡಿಮೆ ಅಂತರದಿಂದ ಗೆದ್ದ ಹಲವು ಕ್ಷೇತ್ರಗಳಲ್ಲಿ, ಬಿಜೆಪಿ ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಫಾರ್ಮ್-7 ಬಳಸಿ ವಿರೋಧ ಪಕ್ಷಗಳ ಮತಗಳನ್ನು ಡಿಲೀಟ್ ಮಾಡಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರಗಳ ಪೈಕಿ ಸುಮಾರು 48 ಕ್ಷೇತ್ರಗಳಲ್ಲಿ ಅತ್ಯಂತ ಸಣ್ಣ ಅಂತರದ ಗೆಲುವು ದಾಖಲಾಗಿದೆ. ಆ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರಕ್ಕಿಂತ, ಫಾರ್ಮ್-7 ಮೂಲಕ ಡಿಲೀಟ್ ಆದ ಮತಗಳ ಸಂಖ್ಯೆಯೇ ಹೆಚ್ಚಾಗಿದೆ!
ಕರ್ನಾಟಕದಲ್ಲೂ ‘ವೋಟ್ ಚೋರಿ’
ಇದೇ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಸಂಚು ರೂಪಿಸಲಾಗಿದ್ದು, ರಾಜ್ಯದಲ್ಲಿ ಈಗಾಗಲೇ ಸುಮಾರು 67,000ಕ್ಕೂ ಹೆಚ್ಚು ಮತದಾರರ ವಿರುದ್ಧ ಫಾರ್ಮ್-7 ಅಡಿಯಲ್ಲಿ ಆಕ್ಷೇಪಣೆ ಸಲ್ಲಿಸಿ ನೋಟಿಸ್ ನೀಡಲಾಗಿದೆ.
- ಬಬಲೇಶ್ವರ ಕ್ಷೇತ್ರ (ವಿಜಯಪುರ ಜಿಲ್ಲೆ): ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಕೇವಲ 7 ಜನರು ಸೇರಿ ಅಕ್ರಮವಾಗಿ ಬರೋಬ್ಬರಿ 1,564 ಅರ್ಜಿಗಳನ್ನು ಸಲ್ಲಿಸಿದ್ದಾರೆ! ಇದರಲ್ಲಿ 1,500ಕ್ಕೂ ಹೆಚ್ಚು ಅರ್ಜಿಗಳು ಕೇವಲ ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಸಲ್ಲಿಕೆಯಾಗಿವೆ.
ಅದೂ ಈ ಎಲ್ಲ ಅರ್ಜಿಗಳು ಸಲ್ಲಿಕೆಯಾಗಿರುವುದು ಚುನಾವಣಾ ಆಯೋಗದ ಹಿಯರಿಂಗ್ ಮುಗಿಯುವ ಕಡೆಯ ಎರಡು ದಿನಗಳಲ್ಲಿ; ಅಂದರೆ, ಸೆಪ್ಟೆಂಬರ್ 24ರಂದು ಹಿಯರಿಂಗ್ ಮುಗಿದರೆ, ಈ ಆಕ್ಷೇಪಣಾ ಅರ್ಜಿಗಳನ್ನು ಸೆಪ್ಟೆಂಬರ್ 22 ಮತ್ತು 23ರಂದು ಸಲ್ಲಿಸಲಾಗಿದೆ. ಪರಿಣಾಮ, ಚುನಾವಣಾ ಅಧಿಕಾರಿಗಳಿಗೆ ನೋಟಿಸ್ ನೀಡಲು ಆಗುವುದಿಲ್ಲ, ಮತದಾರರು ತಮ್ಮ ದಾಖಲೆಗಳನ್ನು ಒದಗಿಸಲು ಆಗುವುದಿಲ್ಲ. ನೇರವಾಗಿ ಡಿಲೀಟ್ ಆಗಬಹುದು ಎಂಬುದು ಅವರ ಹುನ್ನಾರ.
ಸೆಪ್ಟೆಂಬರ್ 22ರಂದು ಗೋವಿಂದರಾಜ ಮುಡನೂರ್ (416 ಅರ್ಜಿ), ಹುಚ್ಚಪ್ಪ ಗಾಣಿಗಾರ್ (388 ಅರ್ಜಿ), ಭೀಮಪ್ಪ ಗೋಲಸಂಗಿ (208 ಅರ್ಜಿ), ಮಹೇಶ್ ಮುಖರ್ಥಿಹಾಲ್ (174 ಅರ್ಜಿ), ವಿನಾಯಕ್ ಮಮದಾಪುರ (127 ಅರ್ಜಿ) ಒಂದೇ ದಿನ ಸಲ್ಲಿಸಿದ್ದಾರೆ. ಇನ್ನು, ಸೆಪ್ಟೆಂಬರ್ 23ರಂದು ಮತ್ತೆ ಇಬ್ಬರು ಸೇರಿ 250ಕ್ಕೂ ಹೆಚ್ಚು ಅರ್ಜಿ ಹಾಕಿದ್ದಾರೆ.
ದಿನಕ್ಕೆ 10-30 ಅರ್ಜಿ ಹಾಕಬೇಕಾದ ಜಾಗದಲ್ಲಿ ನೂರಾರು ಅರ್ಜಿಗಳನ್ನು ಕಾನೂನುಬಾಹಿರವಾಗಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕೇಸ್ ಹಾಕಿಲ್ಲ.
- ಮೂಡಿಗೆರೆ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಒಂದು 53 ಮತದಾರರ ವಿರುದ್ಧ ಅರ್ಜಿ ಹಾಕಲಾಗಿತ್ತು (45 ಮುಸ್ಲಿಂ, 8 ಕ್ರಿಶ್ಚಿಯನ್ ಮತದಾರರು). ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬೂತ್‌ನಲ್ಲಿ 12 ಅರ್ಜಿ ಹಾಕಲಾಗಿತ್ತು (10 ಮುಸ್ಲಿಂ, 2 ಕ್ರಿಶ್ಚಿಯನ್ ಮತದಾರರು). ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬೂತ್‌ನಲ್ಲಿ ಫಾರ್ಮ್-7 ಅರ್ಜಿ ಸಲ್ಲಿಸಿದ ವ್ಯಕ್ತಿ ಯಾರೆಂದು ನೋಡಿದಾಗ, ಅದರಲ್ಲಿ ಕಿಷನ್ ಕುಮಾರ್ (ಮೂಡಿಗೆರೆ ಹ್ಯಾಂಡ್‌ಪೋಸ್ಟ್ ಬೂತ್‌ನ ಬಿಜೆಪಿ ಅಧ್ಯಕ್ಷ) ಎಂದಿತ್ತು. ಆತನನ್ನು ವಿಚಾರಿಸಿದಾಗ; ‘ಹೆಸರು, ಫೋನ್ ನಂಬರ್ ನನ್ನದೇ, ಆದರೆ ಸಹಿ ನನ್ನದಲ್ಲ! ನಾನು ಅರ್ಜಿ ಹಾಕೇ ಇಲ್’ ಎಂದು ಅವರು ಪಾನ್ ಕಾರ್ಡ್ ತೋರಿಸಿ ಹೇಳಿದ್ದಾರೆ. ಅಂದರೆ, ಟಾರ್ಗೆಟ್ ಮಾಡಲಾದ ಹೆಸರುಗಳನ್ನು ಅಳಿಸಲುಯಾರೊದ್ದೋ ಹೆಸರಿನಲ್ಲಿ ಇನ್ಯಾರೋ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸ್ಪಷ್ಟ.
ಅಂದರೆ, ಕಾಂಗ್ರೆಸ್ ಪಕ್ಷಕ್ಕೆ 2023ರ ಎಲೆಕ್ಷನ್‌ನಲ್ಲಿ ಲೀಡ್ ಬಂದಿದ್ದ ಬೂತ್‌ಗಳನ್ನು ಟಾರ್ಗೆಟ್ ಮಾಡಿ, ನಕಲಿ ಸಹಿ, ನಕಲಿ ದಾಖಲೆ ಸೃಷ್ಟಿಸಿ, ಕೊನೆ ಗಳಿಗೆಯಲ್ಲಿ, ಆಕ್ಷೇಪಣೆ ಸಲ್ಲಿಸಿದ್ದಾರೆ. ಅದೂ ಪ್ರಿಂಟ್ ಹಾಕಿರೋ ಪ್ರತಿಗಳು. ಅಂದರೆ, ಯಾರನ್ನ ಡಿಲೀಟ್ ಮಾಡಿಸಬೇಕು, ಯಾವಾಗ ಆಕ್ಷೇಪಣೆ ಸಲ್ಲಿಸಬೇಕು ಅಂತ ಒಂದೆಡೆ ನಿರ್ಧಾರ ಮಾಡಿ, ಪ್ರಿಂಟ್ ಮಾಡಿದ್ದಾರೆ ಎಂದು ಮೂಡಿಗೆರೆಯ ಸಾಮಾಜಿಕ ಕಾರ್ಯಕರ್ತ ಹನಿಯಂ ಮೊಹಮ್ಮದ್ ಆರೋಪಿಸಿದ್ದಾರೆ.
ಆಳಂದ ಕ್ಷೇತ್ರದ ಮತಗಳವು ಮತ್ತು ಸಿಐಡಿ ತನಿಖೆಗೆ ಚುನಾವಣಾ ಆಯೋಗದಿಂದಲೇ ಅಡ್ಡಿ
ಕರ್ನಾಟಕದಲ್ಲಿ ವೋಟ್ ಚೋರಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಬಳಿಕ ಮಾತ್ರವೇ ನಡೆದಿಲ್ಲ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 3 ತಿಂಗಳು ಬಾಕಿ ಇರುವಾಗಲೇ ಈ ಮತಗಳತನ ನಡೆದಿತ್ತು. ಆ ಸಮಯದಲ್ಲಿ, ಕಲಬುರಗಿಯ ‘ಆಳಂದ’ ಕ್ಷೇತ್ರದಲ್ಲಿ ನಡೆದ ಮಹಾ ಅಕ್ರಮ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಈ ಲೇಖನ ಓದಿದ್ದೀರಾ?: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಹಾಲಿ ಶಾಸಕ ಬಿ.ಆರ್. ಪಾಟೀಲ್ ಅವರ ನಿಕಟವರ್ತಿ, ಬಿಎಲ್‌ಒ ಅವರೊಬ್ಬರ ಸಹೋದರನ ಹೆಸರನ್ನೇ ಮತಪಟ್ಟಿಯಿಂದ ಅಳಿಸಲು ನಕಲಿ ಅರ್ಜಿ ಬಂದಾಗ ಈ ಜಾಲ ಬೆಳಕಿಗೆ ಬಂದಿತ್ತು. ಪರಿಶೀಲನೆ ನಡೆಸಿದಾಗ ಬರೋಬ್ಬರಿ 5,994 ಮತಗಳನ್ನು ಅಳಿಸಿಹಾಕಲು ನಕಲಿ ಲಾಗಿನ್ ಮತ್ತು ಹೊರರಾಜ್ಯದ ಮೊಬೈಲ್ ಸಂಖ್ಯೆಗಳನ್ನು ಬಳಸಿ ಬೇನಾಮಿ ಅರ್ಜಿ ಸಲ್ಲಿಸಲಾಗಿದೆ ಎಂಬುದು ಬಹಿರಂಗವಾಗಿತ್ತು. ಅಂತಿಮವಾಗಿ ಆ 5,994 ಮತದಾರರನ್ನು (ಹೆಚ್ಚಾಗಿ ದಲಿತರು, ಬಡವರು ಮತ್ತು ಅಲ್ಪಸಂಖ್ಯಾತರು) ಮರಳಿ ಸೇರಿಸಲಾಯಿತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತು. ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ‘ಯಾವ ಐಪಿ ಅಡ್ರೆಸ್‌ನಿಂದ ಫಾರ್ಮ್-7 ಅರ್ಜಿ ಹಾಕಲಾಗಿದೆ’ ಎಂಬ ಮಾಹಿತಿ ಕೋರಿ 18 ತಿಂಗಳಲ್ಲಿ 18 ಬಾರಿ ಪತ್ರ ಬರೆದರೂ, ಚುನಾವಣಾ ಆಯೋಗ ಉತ್ತರ ಕೊಡಲಿಲ್ಲ. ಆದ್ದರಿಂದ, ಅಪರಾಧಿಗಳನ್ನು ರಕ್ಷಿಸಲು ಆಯೋಗ ಸಾಕ್ಷ್ಯಗಳನ್ನು ಮುಚ್ಚಿಡುತ್ತಿದೆ ಎಂಬ ಗಂಭೀರಗಳು ಕೇಳಿಬಂದವು. ಆದರೂ, ಆಯೋಗ ಮಾತ್ರ ದಾಖಲೆ ಕೊಡಲೇ ಇಲ್ಲ.
ರಾಹುಲ್ ಗಾಂಧಿ ಆರೋಪ ಮತ್ತು ಆಯೋಗದ ಹಸಿ ಸುಳ್ಳುಗಳು
ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಪತ್ರಿಕಾಗೋಷ್ಠಿ ನಡೆಸಿ, *”ಮತಪಟ್ಟಿಯಿಂದ ನಕಲಿ ಅರ್ಜಿ ಸಲ್ಲಿಸಿ ಮತದಾರರ ಹೆಸರು ಅಳಿಸಿದ ಮತ ಕೊಲೆಗಡುಕರು ಯಾರು ಎಂಬುದು ಚುನಾವಣಾ ಆಯುಕ್ತರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಆಯುಕ್ತರು ಆ ಕೊಲೆಗಡುಕರನ್ನು ರಕ್ಷಿಸುತ್ತಿದ್ದಾರೆ!” ಎಂದು ನೇರ ಆರೋಪ ಮಾಡಿದರು. ಬೆಂಗಳೂರಿನ ಮಹದೇವಪುರದಲ್ಲಿಯೂ 15% ನಕಲಿ ಮತದಾರರಿದ್ದಾರೆ. ಮತ ಕಳ್ಳತನ ನಡೆದಿದೆ ಎಂದು ದಾಖಲೆಗಳನ್ನ ಮುಂದಿಟ್ಟರೂ ಚುನಾವಣಾ ಆಯೋಗ ಮಾತ್ರ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಬದಲಾಗಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು, “ಆನ್‌ಲೈನ್‌ನಲ್ಲಿ ಯಾರೂ ಮತ ಅಳಿಸಲು ಸಾಧ್ಯವಿಲ್ಲ, ನಾವೇ ಎಫ್‌ಐಆರ್ ಹಾಕಿದ್ದೇವೆ” ಎಂದು ಹೇಳಿಕೆ ಮಾತ್ರವೇ ನೀಡಿದರು. ಆದರೆ ನಿಜ ಏನೆಂದರೆ, ಆಯೋಗ ಸ್ವಯಂಪ್ರೇರಿತವಾಗಿ ಎಫ್‌ಐಆರ್ ಕೂಡ ಹಾಕಿರಲಿಲ್ಲ. ಬಿ.ಆರ್ ಪಾಟೀಲ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ದೂರು ನೀಡಿದ ಮೇಲಷ್ಟೇ ಎಫ್‌ಐಆರ್ ದಾಖಲಾಗಿತ್ತು.
ಮತಕಳ್ಳತನ ಮತ್ತು ಮತದ ಹಕ್ಕು ಕಸಿದುಕೊಳ್ಳುವ ವಿಚಾರ ಕೇವಲ ಒಂದು ರಾಜಕೀಯ ಪಕ್ಷದ ವಿಷಯವಲ್ಲ; ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಹಕ್ಕಿನ ಪ್ರಶ್ನೆ. ಚುನಾವಣೆಯಲ್ಲಿ ಜನಾದೇಶ ಪಡೆಯಲು ಸಾಧ್ಯವಾಗ ಬಿಜೆಪಿ, ‘ಫಾರ್ಮ್-7’ ನಂತಹ ಅಸ್ತ್ರಗಳನ್ನು ದುರುಪಯೋಗಪಡಿಸಿಕೊಂಡು ಮತ ಕಳವು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಮ್ಮ ಇಬ್ಬರು ಸಹೋದ್ಯೋಗಿ ಆಯುಕ್ತರನ್ನೇ ಬದಿಗಿಟ್ಟು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶದ 96 ಕೋಟಿ ಮತದಾರರಿಗೆ ತೊಂದರೆ ಕೊಟ್ಟಿದ್ದಾರೆ. 13 ಕೋಟಿ ಮತದಾರರ ಮತದ ಹಕ್ಕನ್ನು ಕಸಿದುಕೊಂಡಿದ್ದಾರೆ. ಮೋದಿ-ಶಾ ಮತ್ತು ಗ್ಯಾನೇಶ್ ಕುಮಾರ್ ಎಸಗಿರುವ ಮತದ್ರೋಹದ ವಿರುದ್ಧ ದೇಶವಾಸಿಗಳು ಎಚ್ಚೆತ್ತುಕೊಡಿದ್ದಾರೆ. ‘ವೋಟ್ ಚೋರಿ’ ಷಡ್ಯಂತ್ರಕ್ಕೆ ಕಡಿವಾಣ ಹಾಕಲಿದ್ದಾರೆ.



