ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಭೀಕರ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದೆ.
ಬಂಧಿತರನ್ನು ಸಹೋದರರಾದ ಸಾಗರ್ ಸೋಂಕರ್ ಮತ್ತು ಸಾಹೇಬ್ ಸೋಂಕರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಚಂದ್ರನಾಥ್ ರಥ್ ಅವರ ಕಾರ್ಯಪಡೆಯಲ್ಲೇ ಕೆಲಸ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಭಾರತೀಯ ವಾಯುಪಡೆಯ ಮಾಜಿ ಉದ್ಯೋಗಿಯಾಗಿದ್ದ 41 ವರ್ಷದ ಚಂದ್ರನಾಥ್ ರಥ್ ಅವರು ಸುವೇಂದು ಅಧಿಕಾರಿ ಅವರ ಕಚೇರಿ ನಿರ್ವಹಣೆ ಮತ್ತು ಚುನಾವಣಾ ತಂತ್ರಗಾರಿಕೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ಕಳೆದ ಮೇ 6 ರಂದು ರಾತ್ರಿ, ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ಜೆಸ್ಸೋರ್ ರಸ್ತೆಯಲ್ಲಿ ಚಂದ್ರನಾಥ್ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ತಡೆದು ಅತ್ಯಂತ ಸಮೀಪದಿಂದ ಗುಂಡಿನ ದಾಳಿ ನಡೆಸಿ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದರು.
ಈ ಹತ್ಯೆ ಪ್ರಕರಣದಲ್ಲಿ ಆರೋಪಿ ಸಹೋದರರನ್ನು ಸಿಬಿಐ ಬಂಧಿಸಿದರ. ಬಂಧಿತ ಸೋಂಕರ್ ಸಹೋದರರೇ ಈ ಕೊಲೆಯ ಮುಖ್ಯ ರೂವಾರಿಗಳಾಗಿದ್ದು, ಶೂಟರ್‌ಗಳನ್ನು ಗೊತ್ತುಪಡಿಸುವುದು, ಅವರಿಗೆ ವಾಹನ ವ್ಯವಸ್ಥೆ ಮಾಡುವುದು, ಹಣಕಾಸು ಒದಗಿಸುವುದು ಹಾಗೂ ಚಂದ್ರನಾಥ್ ಅವರ ದಿನನಿತ್ಯದ ಚಲನವಲನಗಳ ಮೇಲೆ ಕಣ್ಣಿಟ್ಟು ಕೊಲೆಗೆ ಸಂಪೂರ್ಣ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಈ ಹತ್ಯೆಗಾಗಿ ಕೋಟಿಗಟ್ಟಲೆ ರೂಪಾಯಿ ಸುಪಾರಿ ನೀಡಲಾಗಿತ್ತು. ಕಳೆದ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲೇ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿನ ಸುಪಾರಿ ಶೂಟರ್‌ಗಳನ್ನು ಸೇರಿದಂತೆ ಒಟ್ಟು 9ಕ್ಕೂ ಹೆಚ್ಚು ಆರೋಪಿಗಳನ್ನು ಸಿಬಿಐ ಬಂಧಿಸಿದೆ.



