ಭಾರತ ಸರ್ಕಾರದ ವಾರ್ತಾ ಶಾಖೆ, ಬೆಂಗಳೂರು (ಪಿಐಬಿ) ವತಿಯಿಂದ ಕೇಂದ್ರ ಸರ್ಕಾರದ 12 ವರ್ಷಗಳ ಕಾರ್ಯಸಾಧನೆಗಳು ಹಾಗೂ ನಶಾಮುಕ್ತ ಭಾರತ ಅಭಿಯಾನ ಕುರಿತ ‘ವಾರ್ತಾಲಾಪ’ ಕಾರ್ಯಾಗಾರವು ಚಾಮರಾಜನಗರದಲ್ಲಿ ನಡೆಯಿತು.
ಕಾರ್ಯಾಗಾರವನ್ನು ಮೈಸೂರು ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ. ಮರಿಸ್ವಾಮಿ ಉದ್ಘಾಟಿಸಿ ಮಾತನಾಡಿ, ಮಾಧ್ಯಮದ ಪಾತ್ರವು ಸಮಾಜ ಮತ್ತು ಆಡಳಿತದಲ್ಲಿನ ಲೋಪದೋಷಗಳನ್ನು ಬೆಳಕಿಗೆ ತರುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವುದೂ ಆಗಿದೆ ಎಂದು ಹೇಳಿದರು. ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಸ್ತುನಿಷ್ಠ ವರದಿಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಭಾರತ ಸರ್ಕಾರದ ವಾರ್ತಾ ಶಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ. ರವೀಂದ್ರ ಮಾತನಾಡಿ, ವಾರ್ತಾಲಾಪ ಕಾರ್ಯಾಗಾರದ ಉದ್ದೇಶ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಪ್ರಗತಿಯನ್ನು ಜನರಿಗೆ ತಲುಪಿಸುವುದಾಗಿದೆ ಎಂದು ತಿಳಿಸಿದರು. 2047ರ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಕೃಷಿಕರು, ಮಹಿಳೆಯರು, ಹಿಂದುಳಿದ ವರ್ಗಗಳು ಹಾಗೂ ಯುವಜನರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು. ದೇಶಾದ್ಯಂತ ನಡೆಯುತ್ತಿರುವ ನಶಾಮುಕ್ತ ಭಾರತ ಅಭಿಯಾನದ ಕುರಿತು ಇನ್ನಷ್ಟು ಜನಜಾಗೃತಿ ಅಗತ್ಯವಿದೆ ಎಂದು ಹೇಳಿದರು.
ಚಾಮರಾಜನಗರ–ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಇಲಾಖೆಗಳ ಕುರಿತು ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿ ವರದಿ ಮಾಡಿದಾಗ ಜನರಿಗೆ ನಿಖರ ಮಾಹಿತಿ ತಲುಪುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು ಮಾತನಾಡಿ, ಸಮಾಜ ಹಾಗೂ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಮಹತ್ವದ ಹೊಣೆಗಾರಿಕೆ ಮಾಧ್ಯಮದ ಮೇಲಿದೆ ಎಂದು ಹೇಳಿದರು. ಜನರ ಧ್ವನಿಯಾಗಿ ವಸ್ತುನಿಷ್ಠ ವರದಿಗಳನ್ನು ಪ್ರಕಟಿಸುವಂತೆ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಮಾಹಿತಿ ವೇಗವಾಗಿ ಹರಡುತ್ತಿರುವ ಇಂದಿನ ಸಂದರ್ಭದಲ್ಲಿ ಮಾಧ್ಯಮಗಳು ಸತ್ಯವನ್ನು ಪರಿಶೀಲಿಸಿ ಜನರಿಗೆ ತಲುಪಿಸುವ ಜವಾಬ್ದಾರಿ ಹೊಂದಿವೆ ಎಂದರು. ಜಿಲ್ಲೆಯ ಸುಶಾಸನಕ್ಕೆ ಮಾಧ್ಯಮಗಳ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಮಾತನಾಡಿ, ಸರ್ಕಾರದ ಯೋಜನೆಗಳ ಕುರಿತು ಸಮಗ್ರ ಮಾಹಿತಿ ಪಡೆಯಲು ವಾರ್ತಾಲಾಪ ಕಾರ್ಯಾಗಾರವು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ನಡುವಿನ ಸಂವಾದವು ಸಕಾರಾತ್ಮಕ ವರದಿಗಳಿಗೆ ಪೂರಕವಾಗುತ್ತದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ತಾಂತ್ರಿಕ ಅಧಿವೇಶನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ನಶಾಮುಕ್ತ ಭಾರತ ಅಭಿಯಾನದ ಕುರಿತು ಮಾಹಿತಿ ನೀಡಿದರು. ಮಾದಕ ವಸ್ತುಗಳ ಬಳಕೆ ತಡೆಗಟ್ಟಲು ‘ರೈಸ್’ (RISE) ಯೋಜನೆ ಜಾರಿಯಲ್ಲಿದ್ದು, Refuse, Inform, Support, Empowerment ಎಂಬ ತತ್ವದಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತುಗಳ ಕುರಿತು ಮಾಹಿತಿ ನೀಡಲು 1908 ಉಚಿತ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, 18 ರಿಂದ 35 ವರ್ಷ ವಯಸ್ಸಿನ ಯುವಜನರನ್ನು ವ್ಯಸನಗಳಿಂದ ದೂರವಿಡಲು ಹಾಗೂ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸಲು ‘ಸನ್ಮಿತ್ರ’ ಆಪ್ತಸಮಾಲೋಚನಾ ಕಾರ್ಯಕ್ರಮವೂ ಜಾರಿಯಲ್ಲಿದೆ ಎಂದು ಹೇಳಿದರು. ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಗೆ ಸಂಬಂಧಿಸಿದ ಕಾನೂನು ಕ್ರಮಗಳು ಮತ್ತು ಶಿಕ್ಷೆಗಳ ಕುರಿತು ಸಹ ವಿವರಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂಧ್ಯಾ ಹೆಚ್.ಎಸ್. ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕಾಗಿ ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಮಹಿಳೆ ಮತ್ತು ಮಕ್ಕಳ ಸಬಲೀಕರಣ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಂಜುಳಾ ಬಿ., ಸಮೃದ್ಧ ರಾಷ್ಟ್ರಕ್ಕಾಗಿ ರೈತರ ಕಾರ್ಯಕ್ರಮಗಳ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಾನುಪ್ರಕಾಶ್ ಯು.ಹೆಚ್., ಆರ್ಥಿಕ ಸೇರ್ಪಡೆ ಕುರಿತು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ ಎಂ. ಮಾಹಿತಿ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?SIR: ಕೊಡಗಿನ ಲೈನ್ ಮನೆ ಆದಿವಾಸಿಗಳ ಬದುಕಿನ ಮುಂದೆ ಚುನಾವಣಾ ಆಯೋಗದ ಅಂಕಿಅಂಶಗಳೇ ಪ್ರಶ್ನಾರ್ಥಕ!
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎ. ರಮೇಶ್ ಉಪಸ್ಥಿತರಿದ್ದರು. ಪಿಐಬಿಯ ಸಹಾಯಕ ನಿರ್ದೇಶಕ ಎಂ. ಮಧು ಸ್ವಾಗತಿಸಿದರು. ಪುರುಷೋತ್ತಮ್ ಮತ್ತು ನಿತೀಶ ಕಾರ್ಯಕ್ರಮ ನಿರೂಪಿಸಿದರು.




