ಮಧ್ಯಪ್ರದೇಶದ ಧಾರಾ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣದ ಪಕ್ಕದಲ್ಲೇ ಇರುವ ದರ್ಗಾ ಭೂಮಿಯಲ್ಲಿ ಶುಕ್ರವಾರದ ನಮಾಝ್ ಸಲ್ಲಿಸಲು ಸುಪ್ರೀಂ ಕೋರ್ಟ್ ಮುಸ್ಲಿಂ ಸಮುದಾಯಕ್ಕೆ ಅನುಮತಿ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಪೀಠವು ಈ ನಿರ್ದೇಶನ ನೀಡಿದೆ.
ವಿವಾದಿತ ಸಂಕೀರ್ಣಕ್ಕೆ ಹೊಂದಿಕೊಂಡಂತಿರುವ ಖಸ್ರಾ ನಂಬರ್ 596 (Khasra No 596) ರ ದರ್ಗಾ ಜಮೀನಿನಲ್ಲಿ ಪ್ರತಿ ಶುಕ್ರವಾರ ಮಧ್ಯಾಹ್ನ 1:00 ರಿಂದ 3:00 ಗಂಟೆಯ ನಡುವೆ ನಮಾಝ್ ಸಲ್ಲಿಸಲು ಅನುಮತಿ ನೀಡಲಾಗಿದೆ. ಈ ಜಾಗಕ್ಕೆ ಸ್ವತಂತ್ರ ಪ್ರವೇಶ ರಸ್ತೆ ಇರುವುದರಿಂದ ಹಾಗೂ ವಿವಾದಿತ ಕಟ್ಟಡದ ಒಳಗಡೆ ಪ್ರವೇಶಿಸುವ ಅಗತ್ಯವಿಲ್ಲದಿರುವುದರಿಂದ ಇದು ಸೂಕ್ತವಾಗಿದೆ ಎಂದು ಪೀಠ ಗಮನಿಸಿದೆ.
ಇದನ್ನೂ ಓದಿ: ಭೋಜಶಾಲೆಯನ್ನು ಹಿಂದೂಗಳಿಗೆ ಒಪ್ಪಿಸಿದ ತೀರ್ಪು ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಮುಸ್ಲಿಂ ಒಕ್ಕೂಟ
ಹಾಗೆಯೇ ಮಧ್ಯಪ್ರದೇಶ ಸರ್ಕಾರವು ನಮಾಝ್ ಸಲ್ಲಿಕೆಗೆ ಅಗತ್ಯವಾದ ಸೂಕ್ತ ಬಂದೋಬಸ್ತ್ ಮತ್ತು ವ್ಯವಸ್ಥೆಗಳನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಸ್ತುತ ನಿಗದಿಪಡಿಸಿದ ಸ್ಥಳ ಸೂಕ್ತವಲ್ಲವೆಂದು ಕಂಡುಬಂದಲ್ಲಿ, ಎರಡೂ ಕಡೆಯವರ ಪರಸ್ಪರ ಸಮ್ಮತಿಯೊಂದಿಗೆ ಹತ್ತಿರದ ಮತ್ತೊಂದು ಜಾಗವನ್ನು ಗುರುತಿಸಬಹುದು ಎಂದೂ ಪೀಠ ಹೇಳಿದೆ.
ಏನಿದು ಭೋಜಶಾಲಾ ವಿವಾದ?
ಭೋಜಶಾಲಾ ವಿವಾದವು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ 11ನೇ ಶತಮಾನದ ಐತಿಹಾಸಿಕ ಸ್ಮಾರಕದ ಮೇಲಿನ ಹಕ್ಕಿನ ಕುರಿತಾದ ಧಾರ್ಮಿಕ ಮತ್ತು ಕಾನೂನು ಸಂಘರ್ಷವಾಗಿದೆ. ಹಿಂದೂಗಳು ಇದನ್ನು ಸರಸ್ವತಿ ದೇವಾಲಯವೆಂದು ಪರಿಗಣಿಸಿದರೆ, ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
ಈ ಹಿಂದೆ ಸುಪ್ರೀಂ ಕೋರ್ಟ್ ವಿವಾದಿತ ಭೋಜಶಾಲಾ ಸಂಕೀರ್ಣದ ಸಮೀಪದಲ್ಲೇ ನಮಾಝ್‌ಗೆ ಪರ್ಯಾಯ ಜಾಗ ನೀಡುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿತ್ತು. ಆದರೆ, ಜಿಲ್ಲಾಡಳಿತವು ನಿಗದಿಪಡಿಸಿದ್ದ ಜಾಗವು ಸುಮಾರು 1.3 ಕಿಮೀ ದೂರದಲ್ಲಿದ್ದು, ಮಧ್ಯಂತರ ಆದೇಶದ ಆಶಯಕ್ಕೆ ವಿರುದ್ಧವಾಗಿದೆ ಎಂದು ಮುಸ್ಲಿಂ ಪರ ಹಿರಿಯ ವಕೀಲ ಹುಝೇಫಾ ಅಹ್ಮದಿ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದ್ದರು.
ವಿವಾದಿತ ಕಟ್ಟಡದ ಪಕ್ಕದಲ್ಲೇ ವಕ್ಫ್ ಆಸ್ತಿ ಹಾಗೂ ದರ್ಗಾ ಭೂಮಿ ಲಭ್ಯವಿದ್ದು, ಅಲ್ಲಿ ಸ್ವತಂತ್ರ ಪ್ರವೇಶ ಮಾರ್ಗವೂ ಇದೆ ಎಂದು ನಕ್ಷೆಯೊಂದಿಗೆ ಕೋರ್ಟ್‌ಗೆ ವಿವರಿಸಲಾಗಿತ್ತು. ಈ ವಾದವನ್ನು ಆಲಿಸಿದ ಪೀಠವು ದರ್ಗಾ ಜಾಗದಲ್ಲೇ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲು ಸೂಚಿಸಿತು.




