ಭಾರತ ತಂಡವು 2027ರ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದೆ. ಈ ಸಂದರ್ಭದಲ್ಲಿ, ಅನುಭವೀ ವೇಗೀ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಆಫ್-ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ. ಆಯ್ಕೆಗಾರರನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ಭಾರತದ ವೇಗದ ಬೌಲಿಂಗ್ ವಿಭಾಗದಲ್ಲಿ ಐಸಿಸಿ ಯಂತಹ ಪ್ರಮುಖ ಟೂರ್ನಿಗೆ ಅಗತ್ಯವಿರುವಷ್ಟು ಅನುಭವದ ಕೊರತೆಯಿದೆ. ಆ ಕೋರತೆಯನ್ನು ನೀಗಿಸುವ ಸಾಮರ್ಥ್ಯ ಭುವನೇಶ್ವರ್ ಕುಮಾರ್‌ಗಿದೆ. ಇತ್ತೀಚಿಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಭುವನೇಶ್ವರ್ ತೋರಿದ ಅತ್ಯುತ್ತಮ ಪ್ರದರ್ಶನವು, ಅವರಲ್ಲಿ ಇನ್ನೂ ಸಾಕಷ್ಟು ಸಾಮರ್ಥ್ಯ ಉಳಿದಿದೆ ಎಂಬುದನ್ನು ತೋರಿಸಿದೆ ಎಂದು ಆಶ್ವಿನ್ ಪ್ರತಿಪಾದಿಸಿದ್ದಾರೆ.
ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ಒಟ್ಟು 45 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಂಡವು ಸತತವಾಗಿ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಭುವನೇಶ್ವರ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸ್ಥಿರ ಪ್ರದರ್ಶನವು ಫ್ರಾಂಚೈಸಿಯ ದೀರ್ಘಕಾಲದ ಕಾಯುವಿಕೆಯನ್ನು ಅಂತ್ಯಗೊಳಿಸಿ, ಯಶಸ್ವಿಯಾಗಿ ಪ್ರಶಸ್ತಿಯನ್ನು ಪಡೆಯಲು ನೆರವಾಗಿತ್ತು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, “ಭುವನೇಶ್ವರ್ ಅವರ ಫಿಟ್‌ನೆಸ್ ಮತ್ತು ಪಂದ್ಯದ ವಿವಿಧ ಹಂತಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಗಮನಿಸಿದರೆ, ಅವರು ವಿಶ್ವಕಪ್ ತಂಡದ ರೇಸ್‌ನಲ್ಲಿರಲು ಸಂಪೂರ್ಣ ಅರ್ಹರು” ಎಂದು ವಾದಿಸಿದ್ದಾರೆ.
“ಭಾರತೀಯ ತಂಡಕ್ಕೆ ಭುವನೇಶ್ವರ್ ಅವರನ್ನು ಏಕೆ ಪರಿಗಣಿಸಬಾರದು? ಅವರನ್ನು ತಕ್ಷಣವೇ ನೇರವಾಗಿ ತಂಡಕ್ಕೆ ಸೇರಿಸಿಕೊಳ್ಳಿ ಎಂದು ನಾನು ಹೇಳುತ್ತಿಲ್ಲ, ಆದರೆ ಕನಿಷ್ಠ ಪಕ್ಷ ಅವರಿಗೆ ಒಂದು ಅವಕಾಶ ನೀಡಿ ನಂತರ ನಿರ್ಧರಿಸಿ ಎನ್ನುತ್ತಿದ್ದೇನೆ. ಅವರು ಚೆಂಡನ್ನು ಸ್ವಿಂಗ್ ಮಾಡಬಲ್ಲರು, ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡಬಲ್ಲರು ಹಾಗೂ ಕೆಳಸಾಲಿನಲ್ಲಿ ಸ್ವಲ್ಪ ಬ್ಯಾಟಿಂಗ್ ಕೂಡ ಮಾಡಬಲ್ಲರು. ಅವರಲ್ಲಿ ಬ್ಯಾಟಿಂಗ್ ಮಾಡುವ ಉತ್ತಮ ಸಾಮರ್ಥ್ಯವಿದೆ” ಎಂದು ಅಶ್ವಿನ್ ಹೇಳಿದ್ದಾರೆ.
“ವಿಶ್ವಕಪ್‌ಗೆ ಕೇವಲ 12 ತಿಂಗಳುಗಳು ಮಾತ್ರ ಬಾಕಿಯಿರುವಾಗ, ಭಾರತ ತಂಡವು ಹೊಸ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಿ, ತಮ್ಮ ವೇಗದ ಬೌಲಿಂಗ್ ವಿಭಾಗವನ್ನು ಅಂತಿಮಗೊಳಿಸುವತ್ತ ಗಮನ ಹರಿಸಬೇಕು” ಎಂದು ಅಶ್ವಿನ್ ಒತ್ತಾಯಿಸಿದ್ದಾರೆ.
“ಆಯ್ಕೆಗಾರರು ಈಗಾಗಲೇ ಹಲವಾರು ವೇಗದ ಬೌಲರ್‌ಗಳಿಗೆ ಅವಕಾಶಗಳನ್ನು ನೀಡಿದ್ದು, ಈಗ ಮುಖ್ಯ ಗುಂಪನ್ನು ಸಣ್ಣದು ಮಾಡಬೇಕು. ಭುವನೇಶ್ವರ್ ಕುಮಾರ್ ಅವರ ಹೆಸರನ್ನು ಚರ್ಚೆಯಲ್ಲಿ ಕಡ್ಡಾಯವಾಗಿ ಇರಿಸಿಕೊಳ್ಳಬೇಕು” ಎಂದು ಅವರು ವಿವರಿಸಿದ್ದಾರೆ.




