2027ರ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಭಾರೀ ತಂತ್ರ ರೂಪಿಸುತ್ತಿದೆ. ಪಂಜಾಬ್‌ನಲ್ಲಿನ ಆಡಳಿತಾರೂಢ ಎಎಪಿ ಮತ್ತು ಪ್ರಮುಖ ವಿಪಕ್ಷ ಕಂಗ್ರೆಸ್ – ಎರಡೂ ಪಕ್ಷಗಳ ವಿರುದ್ಧ ಒಂದೇ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಈ ಚುನಾವಣೆಯಲ್ಲಿ ಮೂರು ‘ಸಿ’ – ಅಪರಾಧ (Crime), ಭ್ರಷ್ಟಾಚಾರ (Corruption) ಹಾಗೂ ಮಾದಕ ವಸ್ತು (Chitta) –ಅನ್ನು ಪ್ರಮುಖ ಅಸ್ತ್ರಗಳಾಗಿ ಬಳಸಲು ಬಿಜೆಪಿ ಮುಂದಾಗಿದೆ.
ದೆಹಲಿ ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಮಧ್ಯಮ ವರ್ಗದ ಹಿತಾಸಕ್ತಿ ಹೆಸರಿನಲ್ಲಿ ನಾನಾ ತಂತ್ರಗಳೊಂದಿಗೆ ಗೆಲುವಿನ ಯಶಸ್ಸು ಕಂಡಿರುವ ಬಿಜೆಪಿ, ಅದೇ ಮಾದರಿಯನ್ನು ಪಂಜಾಬ್‌ನಲ್ಲೂ ಪ್ರಯೋಗಿಸಲು ಚಿಂತನೆ ನಡೆಸಿದೆ. ಆದರೆ, ಪಂಜಾಬ್‌ನಲ್ಲಿ 30%ಕ್ಕಿಂತಲೂ ಹೆಚ್ಚಿರುವ ದಲಿತ (ಎಸ್‌ಸಿ) ಸಮುದಾಯದ ಮತಗಳನ್ನು ಸೆಳೆಯಲು ‘ಜಾತಿ’ ಲೆಕ್ಕಾಚಾರವನ್ನೂ ಈ ‘ಮೂರು ಸಿ’ ಸೂತ್ರದೊಂದಿಗೆ ಜೋಡಿಸುತ್ತಿದೆ.
ಪಂಜಾಬ್ ಯುವಜನತೆಯನ್ನು ಹಾಳುಮಾಡುತ್ತಿರುವ ಮಾದಕ ದ್ರವ್ಯ/ವಸ್ತು, ಉದ್ಯೋಗ ಸೃಷ್ಟಿಯ ಕೊರತೆ ಹಾಗೂ ಹಫ್ತಾ ವಸೂಲಿ ದಂಧೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಬಿಜೆಪಿ ನಿರ್ಧರಿಸಿದೆ. ಇದರ ಜೊತೆಗೆ, ದಲಿತ ಸಂತ ರವಿದಾಸ್ ಅವರ ಪರಂಪರೆಯನ್ನು ಮುನ್ನೆಲೆಗೆ ತಂದು ದಲಿತ ಸಮುದಾಯವನ್ನು ತನ್ನತ್ತ ಸೆಳೆಯುವ ತಂತ್ರವನ್ನೂ ಬಿಜೆಪಿ ಯೋಜಿಸಿದೆ.
ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು 1984ರ ಸಿಖ್ ವಿರೋಧಿ ದಂಗೆಯ ಕಹಿಯನ್ನು ಮತ್ತೆ ನೆನಪಿಸಲು ಬಿಜೆಪಿ ನಿರ್ಧರಿಸಿದೆ. ದಂಗೆಯ ಪ್ರಮುಖ ಆರೋಪಿ ಮತ್ತು ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ಗೆ ಕಾಂಗ್ರೆಸ್ ನೀಡಿದ್ದ ಬೆಂಬಲವನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್‌ಅನ್ನು ಸಿಖ್ ವಿರೋಧಿ ಎಂದು ಬಿಂಬಿಸಿವುದು ಬಿಜೆಪಿ ತಂತ್ರವಾಗಿದೆ. ಇತ್ತ ಆಡಳಿತಾರೂಢ ಎಎಪಿ ವಿರುದ್ಧ ಖಲಿಸ್ತಾನ್ ಪರ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪವನ್ನು ಬಲವಾಗಿ ಪ್ರತಿಪಾದಿಸಲು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸಂಪೂರ್ಣ ಕುಸಿದಿದೆ ಎಂಬ ನಿರೂಪಣೆಯಲ್ಲಿ ಕಟ್ಟಲು ಬಿಜೆಪಿ ಹವಣಿಸುತ್ತಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಬ್ರಿಕ್ಸ್ ಅಂಗಳದಲ್ಲಿ ಭಾರತದ ಪಾತ್ರ: ಸುಮ್ಮನೆ ನೋಡುವುದೋ ಅಥವಾ ಸೂತ್ರಧಾರಿಯೋ?
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ‘ನಶಾ ಮುಕ್ತ ಭಾರತ’ ಅಭಿಯಾನದಡಿ ಸೆಪ್ಟೆಂಬರ್ 18ರಿಂದ 30ರವರೆಗೆ ಪಂಜಾಬ್‌ನಾದ್ಯಂತ ಬೃಹತ್ ಜಾಗೃತಿ ಕಾರ್ಯಕ್ರಮಗಳು ನಡೆಯಲಿದ್ದು, ದೀಪಾವಳಿ ವೇಳೆಗೆ ಬಿಜೆಪಿ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದೆ.
ಆದರೆ, 117 ಕ್ಷೇತ್ರಗಳ ಪಂಜಾಬ್‌ನಲ್ಲಿ ಬಿಜೆಪಿಗಿನ್ನೂ ಭದ್ರ ನೆಲೆಯಿಲ್ಲ. 2022ರ ಚುನಾವಣೆಯಲ್ಲಿ ಎಎಪಿ 92 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಗೆದ್ದಿದ್ದು ಕೇವಲ 2 ಸ್ಥಾನಗಳನ್ನು ಮಾತ್ರ. ಕೃಷಿ ಕಾಯ್ದೆಗಳ ವಿವಾದದಿಂದಾಗಿ ಎನ್‌ಡಿಎಯಿಂದ ಹೊರಬಂದಿದ್ದ ಶಿರೋಮಣಿ ಅಕಾಲಿದಳ (ಎಸ್‍ಎಡಿ) ಜೊತೆ ಈಗ ಮತ್ತೆ ಮೈತ್ರಿ ಮಾಡಿಕೊಳ್ಳುವ ಚರ್ಚೆಗಳು ತೀವ್ರಗೊಂಡಿವೆ. ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಈ ಮೈತ್ರಿ ಕುರಿತು ಅಂತಿಮ ಚಿತ್ರಣ ಸಿಗುವ ಸಾಧ್ಯತೆಯಿದೆ.




