ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತೆಯು ಮೈನರ್ ಹೌದೋ ಅಲ್ಲವೋ ಎಂಬುದನ್ನು ಸಾಬೀತುಪಡಿಸಲು ಬ್ಯಾಪ್ಟಿಸಮ್ (ಚರ್ಚ್‌ನಲ್ಲಿ ನೀಡುವ ದೀಕ್ಷಾ ಸ್ನಾನ) ಪ್ರಮಾಣಪತ್ರ ಒಂದನ್ನೇ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ. ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ರ (JJ Act) ಸೆಕ್ಷನ್ 94 ರಲ್ಲಿ ನಿಗದಿಪಡಿಸಲಾದ ದಾಖಲೆಗಳ ಪಟ್ಟಿಯಲ್ಲಿ ಬ್ಯಾಪ್ಟಿಸಮ್ ಪ್ರಮಾಣಪತ್ರ ಬರುವುದಿಲ್ಲವಾದ್ದರಿಂದ, ಅದನ್ನು ಕೇವಲ ಮಗುವಿನ ವಯಸ್ಸನ್ನು ನಿರ್ಧರಿಸುವ ಶಾಸನಬದ್ಧ ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕುಸ್ತಿ ಪಟುಗಳ ಪ್ರತಿಭಟನೆ: ದೆಹಲಿ ಪೊಲೀಸರಿಗೆ ಸುಪ್ರೀಂ ನೋಟಿಸ್
ಮೇಘಾಲಯದ ಈಸ್ಟ್ ಜೈಂಟಿಯಾ ಹಿಲ್ಸ್ ಜಿಲ್ಲೆಯ ಸುಟ್ಂಗಾ ಗ್ರಾಮದಲ್ಲಿ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು.
ಪ್ರಕರಣದ ತನಿಖೆ ವೇಳೆ ಪ್ರಾಸಿಕ್ಯೂಷನ್ ಸಂತ್ರಸ್ತೆಯ ವಯಸ್ಸನ್ನು ಸಾಬೀತುಪಡಿಸಲು ಖಾಸಿ ಜೈಂಟಿಯಾ ಪ್ರೆಸ್ಬಿಟೇರಿಯನ್ ಅಸೆಂಬ್ಲಿ ನೀಡಿದ ಬ್ಯಾಪ್ಟಿಸಮ್ ಪ್ರಮಾಣಪತ್ರವನ್ನು ಮಾತ್ರ ಪ್ರಮುಖವಾಗಿ ನೆಚ್ಚಿಕೊಂಡಿತ್ತು. ಆದರೆ, ಶಾಲಾ ದಾಖಲಾತಿ, ಪಾಲಿಕೆ/ಪಂಚಾಯತ್ ನೀಡಿದ ಜನನ ಪ್ರಮಾಣಪತ್ರ ಅಥವಾ ಎಲುಬಿನ ಸಾಂದ್ರತೆ ಪರೀಕ್ಷೆ (Ossification Test) ಸೇರಿದಂತೆ ಕಾನೂನುಬದ್ಧ ಸಾಕ್ಷ್ಯಗಳನ್ನು ಸಲ್ಲಿಸಿರಲಿಲ್ಲ.
ವಯಸ್ಸಿನ ಅಧಿಕೃತ ಪುರಾವೆ ಕೊರತೆಯಿಂದಾಗಿ ಆರೋಪಿಯ ಮೇಲಿದ್ದ ಪೋಕ್ಸೋ ಕಾಯ್ದೆಯಡಿಯ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಆದರೆ, ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವು ವೈದ್ಯಕೀಯ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳಿಂದ ನಿಸ್ಸಂದಿಗ್ಧವಾಗಿ ಸಾಬೀತಾಗಿರುವುದರಿಂದ ಆರೋಪಿಯನ್ನು ಸಂಪೂರ್ಣ ಖುಲಾಸೆಗೊಳಿಸಲು ನ್ಯಾಯಾಲಯ ನಿರಾಕರಿಸಿದೆ. ಬದಲಿಗೆ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 (ರೇಪ್) ಅಡಿಯಲ್ಲಿ ಆತನನ್ನು ತಪ್ಪಿತಸ್ಥನೆಂದು ನಿರ್ಧರಿಸಿ, ಶಿಕ್ಷೆಯನ್ನು 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ತಗ್ಗಿಸಿತು.
ಪೋಕ್ಸೋ ಅಥವಾ ಬಾಲ ನ್ಯಾಯ ಕಾಯ್ದೆಯಡಿ ವಯಸ್ಸನ್ನು ನಿರ್ಧರಿಸಲು ಕಾನೂನಿನಲ್ಲಿ ಶಾಲಾ ದಾಖಲೆಯಲ್ಲಿರುವ ಜನ್ಮ ದಿನಾಂಕ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಅದು ಲಭ್ಯವಿಲ್ಲದಿದ್ದರೆ, ನಗರಸಭೆ, ಪುರಸಭೆ ಅಥವಾ ಪಂಚಾಯತ್ ನೀಡಿರುವ ಜನನ ಪ್ರಮಾಣಪತ್ರ, ಮೇಲಿನ ಎರಡೂ ಲಭ್ಯವಿಲ್ಲದಿದ್ದರೆ ಮಾತ್ರ ವೈದ್ಯಕೀಯ ‘ಆಸಿಫಿಕೇಶನ್ ಟೆಸ್ಟ್’ (ಎಲುಬಿನ ಪರೀಕ್ಷೆ) ನಡೆಸಬೇಕಾಗುತ್ತದೆ. ಖಾಸಗಿ ಸಂಸ್ಥೆಗಳು ಅಥವಾ ಚರ್ಚ್‌ಗಳು ನೀಡುವ ಬ್ಯಾಪ್ಟಿಸಮ್ ಪ್ರಮಾಣಪತ್ರಗಳು ಈ ಶಾಸನಬದ್ಧ ಕ್ರಮದಲ್ಲ ಒಳಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.





