ಉತ್ತರ ಪ್ರದೇಶದ ಬಿಜೆಪಿ ಸಂಸದ ಸತೀಶ್ ಗೌತಮ್ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಶಾಸಕಿಯೋರ್ವರ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಉತ್ತರ ಪ್ರದೇಶದ ಅಲಿಘಢ್‌ನ ಕೋಲ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಗೌತಮ್ ಅವರು ವೇದಿಕೆಯಲ್ಲಿದ್ದಾಗ ಶಾಸಕಿ ಮುಕ್ತಾ ರಾಜಾ ಅವರ ಭುಜದ ಮೇಲೆ ಕೈ ಹಾಕಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಬಿಜೆಪಿ ಸಂಸದನ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಸಂಸದನ ಈ ನಡೆಯ ಬಳಿಕ ಶಾಸಕಿಗೆ ಇರುಸುಮುರುಸು ಉಂಟಾದ ಬಳಿಕ ತನ್ನ ಸ್ಥಾನವನ್ನು ಬದಲಾಯಿಸಿದರು ಎಂದು ವರದಿಯಾಗಿದೆ. ಸೆಪ್ಟೆಂಬರ್ 25 ರಂದು ನಡೆದ ಈ ಬೆಳವಣಿಗೆಯು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ.
ವೇದಿಕೆಯಲ್ಲಿ ಉತ್ತರ ಪ್ರದೇಶದ ಸಾರಿಗೆ ಸಚಿವ ದಯಾಶಂಕರ್ ಸಿಂಗ್, ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, ಮಾಜಿ ಮೇಯರ್ ಶಕುಂತಲಾ ಭಾರತಿ, ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಪೂನಂ ಬಜಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಜಯ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದ ವೇದಿಕೆಯಲ್ಲೇ ಈ ಬೆಳವಣಿಗೆ ನಡೆದಿದೆ.
ಈ ಬೆಳವಣಿಗೆಯ ಸಂದರ್ಭದಲ್ಲಿ ಬಿಜೆಪಿ ಶಾಸಕ ಬರೌಲಿ ಠಾಕೂರ್ ಜೈವೀರ್ ಸಿಂಗ್ ಅವರು, ಶಾಸಕಿಯೊಂದಿಗೆ ಬಿಜೆಪಿ ಸಂಸದರ ನಡೆಯನ್ನು ಗಮನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವಿಡಿಯೋ ವೈರಲ್ ಆದ ಬಳಿಕ ಇದನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತಾರ ಸುರೇಂದ್ರ ರಜಪೂತ್, “ಇದು ಸುಸಂಸ್ಕೃತ ಬಿಜೆಪಿಯ ವಾಸ್ತವ ಸಂಸ್ಕೃತಿ” ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಕಾಂಗ್ರೆಸ್, “ಕಾರ್ಯಕ್ರಮದ ಮಧ್ಯೆ ಶಾಸಕಿ ಮುಕ್ತಾ ರಾಜಾ ಅವರಿಗೆ ಬಹಿರಂಗವಾಗಿ ಕಿರುಕುಳ ನೀಡುತ್ತಿರುವ ಅಲಿಘರ್ ಸಂಸದ ಸತೀಶ್ ಗೌತಮ್ ಅವರಿಂದಲೇ ಈ ರೀತಿ ದೌರ್ಜನ್ಯ ಆಗುವುದಾದರೆ ಸಾಮಾನ್ಯ ಮಹಿಳೆಯರು ಮತ್ತು ಹುಡುಗಿಯರು ಸುರಕ್ಷಿತರಾಗುತ್ತಾರೆಯೇ?” ಎಂದು ಪ್ರಶ್ನಿಸಿದೆ.