ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಮೂಲದ ಭಾರತೀಯ ನಾವಿಕ ರಾಕೇಶ್ ಚೌಹಾಣ್ (33) ಎಂಬುವವರು ವೆನೆಜುವೆಲಾದಲ್ಲಿ ಕರ್ತವ್ಯದ ಮೇಲಿದ್ದಾಗ ಮೃತಪಟ್ಟಿದ್ದು, ಸುಮಾರು ಒಂದು ತಿಂಗಳ ಬಳಿಕ ಅವರ ಮೃತದೇಹ ಭಾರತಕ್ಕೆ ತಲುಪಿದೆ. ಆದರೆ, ಭಾರತದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಆಂತರಿಕ ಅಂಗಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಆಘಾತಕಾರಿ ಘಟನೆಯು ಭಾರೀ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ‘ಫೆಡರೇಶನ್ ಆಫ್ ಸೀಫೇರರ್ಸ್ ಯೂನಿಯನ್ಸ್ ಆಫ್ ಇಂಡಿಯಾ’ (FSUI) ಮತ್ತು ಕುಟುಂಬಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
ನವೆಂಬರ್ 2025ರಲ್ಲಿ ಮರ್ಚೆಂಟ್ ನೇವಿಗೆ ಸೇರ್ಪಡೆಗೊಂಡಿದ್ದ ರಾಕೇಶ್, ವೆನೆಜುವೆಲಾದ ಹಡಗೊಂದರಲ್ಲಿ ಮೆರೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಮೇ 7ರಂದು ರಾಕೇಶ್ ಅವರ ತಂದೆಗೆ ಕರೆ ಮಾಡಿದ್ದ ಕಂಪನಿಯು, ರಾಕೇಶ್ ಅವರಿಗೆ ತಲೆತಿರುಗಿ ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿದ್ದು, ಬದುಕುಳಿಯುವ ಸಾಧ್ಯತೆ ಕೇವಲ ಶೇ 5ರಷ್ಟು ಮಾತ್ರ ಇದೆ ಎಂದು ತಿಳಿಸಿತ್ತು. ಅದೇ ದಿನ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿತ್ತು. ಮೃತದೇಹ ಭಾರತಕ್ಕೆ ಬಂದ ಬಳಿಕ, ಡಿಯೋರಿಯಾ ಜಿಲ್ಲಾಧಿಕಾರಿ ಮಧುಸೂದನ್ ಹುಲ್ಗಿ ಅವರ ಸೂಚನೆಯ ಮೇರೆಗೆ ಮರು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಇದನ್ನು ಓದಿದ್ದೀರಾ? ದೇಶದ ರಿಯಲ್ ಎಸ್ಟೇಟ್ ಮೇಲೆ ಯುದ್ಧದ ಕಾರ್ಮೋಡ: 7 ನಗರಗಳಲ್ಲಿ ವಸತಿ ಮಾರಾಟ ಕುಸಿತ
ಈ ವರದಿಯ ಪ್ರಕಾರ, ಮೃತದೇಹದಲ್ಲಿ ಮೆದುಳು, ಹೃದಯ, ಶ್ವಾಸಕೋಶ, ಯಕೃತ್ತು (ಲಿವರ್), ಎರಡೂ ಮೂತ್ರಪಿಂಡಗಳು, ಗುಲ್ಮ (spleen), ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ ಹಾಗೂ ಕರುಳು ಸೇರಿದಂತೆ ಯಾವೊಂದು ಪ್ರಮುಖ ಅಂಗಗಳೂ ಇರಲಿಲ್ಲ. ಜೊತೆಗೆ, ಕುತ್ತಿಗೆಯಿಂದ ಕೆಳಭಾಗದವರೆಗೆ ಹಾಗೂ ಎರಡೂ ಕಿವಿಗಳ ನಡುವೆ ಸೇರಿ ಒಟ್ಟು 22 ಹೊಲಿಗೆಗಳನ್ನು ಹಾಕಲಾಗಿತ್ತು. ಆಂತರಿಕ ಅಂಗಗಳೇ ಇಲ್ಲದ ಕಾರಣ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಈ ಪ್ರಕರಣದಲ್ಲಿ ಹಲವು ಗಂಭೀರ ಲೋಪಗಳು ನಡೆದಿವೆ ಎಂದು ನಾವಿಕರ ಸಂಘಟನೆ (FSUI) ಆರೋಪಿಸಿದೆ. ಕುಟುಂಬದ ಅನುಮತಿಯಿಲ್ಲದೆ ಅಂಗಾಂಗಗಳನ್ನು ಏಕೆ ತೆಗೆಯಲಾಗಿದೆ ಮತ್ತು ಈ ಬಗ್ಗೆ ಕುಟುಂಬಕ್ಕೆ ಮೊದಲೇ ಏಕೆ ಮಾಹಿತಿ ನೀಡಿಲ್ಲ ಎಂದು ಸಂಘಟನೆ ಪ್ರಶ್ನಿಸಿದೆ. ಅಲ್ಲದೆ, ಮೃತದೇಹ ಹಸ್ತಾಂತರದ ರಸೀದಿಯಲ್ಲಿ ರಾಕೇಶ್ ಅವರ ಪತ್ನಿ ‘ರಂಜನಾ ಚೌರಾಸಿಯಾ’ ಅವರ ಬದಲಿಗೆ ‘ಅಂಜನಾ ಚೌರಾಸಿಯಾ’ ಎಂದು ನಕಲಿ ಸಹಿ ಮಾಡಲಾಗಿದೆ ಮತ್ತು ಉದ್ಯೋಗದ ಒಪ್ಪಂದದಲ್ಲಿರುವ ಹಡಗಿನ ಹೆಸರಿಗೂ ಅವರು ಕೆಲಸ ಮಾಡುತ್ತಿದ್ದ ಹಡಗಿನ ಹೆಸರಿಗೂ ವ್ಯತ್ಯಾಸವಿದೆ ಎಂಬ ಆಘಾತಕಾರಿ ಅಂಶಗಳನ್ನು ಸಂಘಟನೆ ಬಹಿರಂಗಪಡಿಸಿದೆ.
ಪತ್ನಿ ಮತ್ತು ಆರು ತಿಂಗಳ ಮಗುವನ್ನು ಅಗಲುವ ರಾಕೇಶ್ ಅವರ ಸಾವಿನ ಹಿಂದೆ ವ್ಯವಸ್ಥಿತ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಒತ್ತಾಯಿಸಲಾಗಿದೆ.




