ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಬಿಜೆಪಿ ಸರ್ಕಾರಗಳು ತುರುಕುತ್ತಿರುವ ಅಜೆಂಡಾಗಳನ್ನು ತಡೆಯಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವೈಚಾರಿಕ ತತ್ವಗಳನ್ನು ಉಳಿಸಲು ಈಗ ಕಾಂಗ್ರೆಸ್ ಮುಂದಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ವಿಶೇಷ ‘ಕಾರ್ಯಯೋಜನೆ’ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು. ಮುಖ್ಯವಾಗಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದು ಹಾಗೂ ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ನೀತಿಗಳನ್ನು ಜಾರಿಗೆ ತರುವುದು ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ: ಕೆಪಿಎಸ್ ಶಾಲೆ ತೆರೆದು ಆರ್‌ಎಸ್‌ಎಸ್‌ಗೆ ಬಲ ಕೊಡಲು ಕಾಂಗ್ರೆಸ್ ಹೊರಟಿದೆ : ನಿರಂಜನಾರಾಧ್ಯ ಆಕ್ರೋಶ
ಸಭೆಯ ತೀರ್ಮಾನದಂತೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಶಿಕ್ಷಣ ತಜ್ಞರು ಹಾಗೂ ಭಾಗಿದಾರರನ್ನು ಒಳಗೊಂಡ ರಾಜ್ಯ ಮಟ್ಟದ ಶಿಕ್ಷಣ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಆರ್‌ಎಸ್‌ಎಸ್ ಅಜೆಂಡಾ ಶಿಕ್ಷಣ ವ್ಯವಸ್ಥೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಆರ್‌ಎಸ್‌ಎಸ್ ಹಿನ್ನೆಲೆಯ ಕುಲಪತಿಗಳನ್ನು ನೇಮಕ ಮಾಡುತ್ತಿರುವ ಕುರಿತು ಮುಖ್ಯಮಂತ್ರಿಗಳು ಹಾಗೂ ಸಚಿವರು ಜಾಗೃತಿ ಮೂಡಿಸಲಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣದಲ್ಲಿ RSS ಅಜೆಂಡಾ ಸೇರಿಸುವ ಹುನ್ನಾರ
ಬಿಜೆಪಿ ಆಡಳಿತಾವಧಿಯಲ್ಲಿ ಶಿಕ್ಷಣವನ್ನು ‘ಕೇಸರೀಕರಣ’ (Saffronisation) ಮಾಡಲು ಹಾಗೂ ಪಠ್ಯಪುಸ್ತಕಗಳ ಮೂಲಕ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ತುರುಕಲು ಸಾಕಷ್ಟು ಪ್ರಯತ್ನಿಸಲಾಗಿದೆ. ನಮ್ಮ ರಾಜ್ಯದಲ್ಲೇ ಇಂತಹ ಕುತಂತ್ರ ನಡೆದಿದೆ. ಪ್ರತಾಪ್ ಸಿಂಹ ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನಾರಾಯಣ ಗುರು, ಮತ್ತು ಟಿಪ್ಪು ಸುಲ್ತಾನ್ ಅವರ ಪಠ್ಯಗಳಿಗೆ ಕತ್ತರಿ ಹಾಕಿತ್ತು. ಅದರ ಬದಲಾಗಿ RSS ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಭಾಷಣ ಹಾಗೂ ಆರ್‌ಎಸ್‌ಎಸ್ ಚಿಂತಕರ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಕೇಂದ್ರ NCERT ಪಠ್ಯಪುಸ್ತಕಗಳಿಂದ ಚಾರ್ಲ್ಸ್ ಡಾರ್ವಿನ್ ಅವರ ‘ಜೀವವಿಕಾಸ ಸಿದ್ಧಾಂತ’ (Theory of Evolution), ಪೀರಿಯಾಡಿಕ್ ಟೇಬಲ್ (ಆವರ್ತಕೋಷ್ಟಕ) ಮತ್ತು ಮೊಘಲರ ಇತಿಹಾಸದ ಅಧ್ಯಾಯಗಳನ್ನು ತೆಗೆದುಹಾಕಲಾಯಿತು. ಇದು ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರಿಂದ ತೀವ್ರ ವಿರೋಧಕ್ಕೆ ಗುರಿಯಾಗಿತ್ತು.
ಇದನ್ನೂ ಓದಿ: ʼಕೃಷ್ಣʼ ಹೆಸರೇಕೆ? ಪಠ್ಯಪುಸ್ತಕಗಳ ಕೇಸರೀಕರಣ ಆರೋಪಕ್ಕೆ NCERT ಉತ್ತರ
ಇನ್ನು ಪ್ರಗತಿಪರ ಚಿಂತನೆಗೆ, ಹೋರಾಟಕ್ಕೆ ಹೆಸರುವಾಸಿಯಾದ ದೇಶದ ಪ್ರಮುಖ ವಿಶ್ವವಿದ್ಯಾಲಯಗಳಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು), ದೆಹಲಿ ವಿಶ್ವವಿದ್ಯಾಲಯ (ಡಿಯು) ಹಾಗೂ ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ಐಸಿಎಚ್‌ಆರ್) ಯಂತಹ ಸಂಸ್ಥೆಗಳ ಉನ್ನತ ಹುದ್ದೆಗಳಿಗೆ ಹಾಗೂ ಕುಲಪತಿ ಸ್ಥಾನಗಳಿಗೆ ಆರ್‌ಎಸ್‌ಎಸ್ ಸಿದ್ಧಾಂತವನ್ನು ಬೆಂಬಲಿಸುವ ವ್ಯಕ್ತಿಗಳನ್ನು ನೇಮಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಲು, ವಿವಿಗಳಲ್ಲಿ ಆರ್‌ಎಸ್‌ಎಸ್ ವಿಚಾರಧಾರೆ ಹರಿದಾಡುವಂತೆ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಇಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರ ಜಾರಿಗೆ ತಂದ NEP 2020 ಮೂಲಕ ಶಿಕ್ಷಣವನ್ನು ಕೇಂದ್ರೀಕೃತಗೊಳಿಸಿ, ನಾಗರಿಕ ಮೌಲ್ಯಗಳ ಬದಲು ಧಾರ್ಮಿಕ ಮತ್ತು ಪ್ರಾಚೀನ ವೈದಿಕ ಚಿಂತನೆಗಳನ್ನು ಬಲವಂತವಾಗಿ ಹೇರಲಾಗುತ್ತಿದೆ. ಇದರಿಂದಾಗಿ ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳು NEPಯನ್ನು ರದ್ದುಗೊಳಿಸಿ, ಸ್ವಂತ ‘ರಾಜ್ಯ ಶಿಕ್ಷಣ ನೀತಿ’ (ಎಸ್‌ಇಪಿ)ಯನ್ನು ಜಾರಿಗೆ ತರಲು ಮುಂದಾಗಿವೆ.




