2018ರಿಂದ 2022ರ ನಡುವೆ ಕೇಂದ್ರ ಸರ್ಕಾರ ಆಕ್ಸ್‌ಫಾಮ್ ಸೇರಿ 1,827 ಸರ್ಕಾರೇತರ ಸಂಸ್ಥೆಗಳ ಎಫ್‌ಸಿಆರ್‌ಎ ನವೀಕರಣವನ್ನು ನಿಯಮಗಳ ಉಲ್ಲಂಘನೆ ಕಾರಣ ನೀಡಿ ರದ್ದುಗೊಳಿಸಿದೆ.
ಜಾಗತಿಕ ಮಟ್ಟದ ಸರ್ಕಾರೇತರ ಸಂಸ್ಥೆಯಾಗಿರುವ ‘ಆಕ್ಸ್‌ಫಾಮ್ ಇಂಡಿಯಾ’ದ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ನೋಂದಣಿ (ಎಫ್‌ಸಿಆರ್‌ಎ) ನವೀಕರಣ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ ಎರಡು ವರ್ಷಗಳ ನಂತರ ಕಾನೂನು ಕ್ರಮ ಕೈಗೊಳ್ಳಲೂ ಮುಂದಾಗಿದೆ.
ಗುರುವಾರ (ಏಪ್ರಿಲ್ 6) ಕೇಂದ್ರ ಗೃಹಸಚಿವಾಲಯ ಆಕ್ಸ್‌ಫಾಮ್ ಸಂಸ್ಥೆಯ ಎಫ್‌ಸಿಆರ್‌ಎ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿದೆ.
ಕಳೆದ ಮಾರ್ಚ್‌ನಲ್ಲಿಯೂ ಗೃಹಸಚಿವಾಲಯ ಸರ್ಕಾರೇತರ ಸಂಸ್ಥೆಯೊಂದರ ವಿರುದ್ಧ ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ಮಾರ್ಚ್‌ನಲ್ಲಿ ಲೇಖಕ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ನೇತೃತ್ವದ ಸರ್ಕಾರೇತರ ಸಂಸ್ಥೆ ‘ಅಮನ್ ಬಿರಾದರಿ’ ವಿರುದ್ಧವೂ ಎಫ್‌ಸಿಆರ್‌ಎ ಉಲ್ಲಂಘನೆ ಆರೋಪದಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಗಿತ್ತು.
“2018ರಿಂದ 2022ರ ನಡುವೆ ಕೇಂದ್ರ ಸರ್ಕಾರ 1,827 ಸರ್ಕಾರೇತರ ಸಂಸ್ಥೆಗಳ ಎಫ್‌ಸಿಆರ್‌ಎ ನವೀಕರಣವನ್ನು ನಿಯಮಗಳ ಉಲ್ಲಂಘನೆ ಕಾರಣದಲ್ಲಿ ರದ್ದುಗೊಳಿದೆ” ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಕಳೆದ ತಿಂಗಳು ರಾಜ್ಯಸಭೆಗೆ ಉತ್ತರಿಸಿದ್ದರು.
ಈ ಬಾರಿ ಗೃಹ ಸಚಿವಾಲಯದ ಸಿಬ್ಬಂದಿ ಮಾಧ್ಯಮಗಳಿಗೆ ನೀಡಿದ ವಿವರಗಳ ಪ್ರಕಾರ, “ಎಫ್‌ಸಿಆರ್‌ಎ 2010ರ ಅಡಿಯಲ್ಲಿ ಆಕ್ಸ್‌ಫಾಮ್ ಇಂಡಿಯಾ ಸಾಮಾಜಿಕ ಚಟುವಟಿಕೆಗಳಿಗಾಗಿ ನೋಂದಣಿ ಮಾಡಿಕೊಂಡಿತ್ತು. 2021 ಡಿಸೆಂಬರ್ 31ರವರೆಗೆ ಅವರ ನೋಂದಣಿಗೆ ಮಾನ್ಯತೆಯಿತ್ತು. ಈ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದರಿಂದ ಕಾನೂನು ಕ್ರಮ ಕೈಗೊಳ್ಳಲು ಗೃಹ ಸಚಿವಾಲಯ ಸಿಬಿಐಗೆ ಸೂಚಿಸಿದೆ.”
“ಎಫ್‌ಸಿಆರ್‌ಎ, 2020 ಬಂದ ನಂತರವೂ ಆಕ್ಸ್‌ಫಾಮ್ ಇಂಡಿಯಾ ವಿವಿಧ ಸಂಸ್ಥೆಗಳಿಗೆ ವಿದೇಶಿ ದೇಣಿಗೆ ವರ್ಗಾವಣೆಗಳನ್ನು ಮುಂದುವರಿಸಿರುವುದು ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ. ಎಫ್‌ಸಿಆರ್‌ಎ 2020 ಅಂತಹ ವರ್ಗಾವಣೆಯನ್ನು ನಿಷೇಧಿಸಿದೆ. 2020 ಸೆಪ್ಟೆಂಬರ್ 29ರಂದು ತಿದ್ದುಪಡಿ ಜಾರಿಗೆ ಬಂದಿತ್ತು. ಆದರೆ, ಆಕ್ಸ್‌ಫಾಮ್ ಇಂಡಿಯಾ ಎಫ್‌ಸಿಆರ್‌ಎ 2010 ನಿಯಮಗಳನ್ನು ಉಲ್ಲಂಘಿಸಿ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ಹಣಕಾಸು ವರ್ಗಾವಣೆ ಮಾಡಿದೆ” ಎಂದು ಗೃಹ ಸಚಿವಾಲಯ ಹೇಳಿದೆ.
ಕಳೆದ ವರ್ಷ ಆದಾಯ ತೆರಿಗೆ ಇಲಾಖೆ ಆಕ್ಸ್‌ಫಾಮ್ ಇಂಡಿಯಾದ ಆವರಣಗಳಲ್ಲಿ ‘ಪರಿಶೀಲನೆ’ ನಡೆಸಿತ್ತು. “ಆದಾಯ ತೆರಿಗೆ ಇಲಾಖೆಯ ಪರಿಶೀಲನೆಯಲ್ಲಿ ಸಿಕ್ಕ ಇಮೇಲ್‌ಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಎಫ್‌ಸಿಆರ್‌ಎ, 2020 ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ವಿದೇಶಿ ಸಂಘಟನೆಗಳು ತಮ್ಮ ವಿದೇಶಿ ನೀತಿಯ ಸಾಧನವಾಗಿ ಆಕ್ಸ್‌ಫಾಮ್ ಇಂಡಿಯಾಗೆ ಹಣಕಾಸು ನೀಡುತ್ತಾ ಬಂದಿರುವುದು ಐಟಿ ಪರಿಶೀಲನೆಯಲ್ಲಿ ಪತ್ತೆಯಾಗಿದೆ” ಎಂದು ಗೃಹ ಸಚಿವಾಲಯ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿ ಓದಿದ್ದೀರಾ?:ಈ ದಿನ ಸಂಪಾದಕೀಯ | ಕಪ್ಪು ಅಧ್ಯಾಯಗಳ ತಿಪ್ಪೆಗಳಿವೆ… ಯಾವ ರಂಗೋಲಿ ಬಿಡಿಸಿ ಮುಚ್ಚುವಿರಿ?
ಇದೇ ಫೆಬ್ರವರಿ 13ರಂದು ದೆಹಲಿ ಹೈಕೋರ್ಟ್ ಆಕ್ಸ್‌ಫಾಮ್ ಇಂಡಿಯಾದ ಎಫ್‌ಸಿಆರ್‌ಎ ನವೀಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ನಿಲುವನ್ನು ಕೇಳಿತ್ತು. 2021 ಡಿಸೆಂಬರ್ 22ರಂದು ಕೇಂದ್ರ ಗೃಹ ಸಚಿವಾಲಯ ನವೀಕರಣ ಅರ್ಜಿಯನ್ನು ನಿರಾಕರಿಸಿದ ನಂತರ ಆಕ್ಸ್‌ಫಾಮ್ ಇಂಡಿಯಾ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು.
ನವೀಕರಣದ ಬಗ್ಗೆ ಸಕಾರಣ ಕೊಡುವಂತೆ ಹೈಕೋರ್ಟ್ ಕೇಂದ್ರಕ್ಕೆ ಸೂಚಿಸಿತ್ತು. ನಂತರ 2022 ಡಿಸೆಂಬರ್ 1ರಂದು ಕೇಂದ್ರ ಎಫ್‌ಸಿಆರ್‌ಎ ಉಲ್ಲಂಘನೆ ಕಾರಣ ನೀಡಿ ನವೀಕರಣ ಅರ್ಜಿ ತಿರಸ್ಕರಿಸಿತ್ತು.
ಆಕ್ಸ್‌ಫಾಮ್ ಇಂಡಿಯಾದ ವೆಬ್‌ತಾಣದ ಪ್ರಕಾರ 21 ಜಾಗತಿಕ ಆಕ್ಸ್‌ಫಾಮ್ ಸಂಘಟನೆಗಳ ಭಾಗವಾಗಿ ಭಾರತದಲ್ಲಿ ಕೆಲಸ ಮಾಡುತ್ತಿದೆ. 2008ರಲ್ಲಿ ಭಾರತದಲ್ಲಿ ಸ್ವತಂತ್ರ ಸರ್ಕಾರೇತರ ಸಂಸ್ಥೆಯಾಗಿ ಪರಿವರ್ತನೆಗೊಂಡಿತ್ತು.
ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಛತ್ತೀಸ್‌ಗಢ, ಅಸ್ಸಾಂ ಮತ್ತು ಒಡಿಶಾಗಳಂತಹ ಆರು ಅತೀ ಬಡ ರಾಜ್ಯಗಳಲ್ಲಿ ಆಕ್ಸ್‌ಫಾಮ್ ಇಂಡಿಯಾ ಮಾನವೀಯ ಚಟುವಟಿಕೆ ನಡೆಸುತ್ತಿದೆ.