ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಬಿಜೆಪಿ ತೊರೆದು, ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದ್ದ ಅವರ ಈ ನಡೆ ರಾಜ್ಯ ರಾಜಕೀಯದಲ್ಲಿ ಮತ್ತೆ ಕುತೂಹಲ ಮೂಡಿಸಿದೆ.
ಬಿಜೆಪಿ ಸೇರಿದ್ದ ನಿರ್ಧಾರವನ್ನು “ತಪ್ಪು” ಎಂದು ಬಣ್ಣಿಸಿ ಅವರು ಟಿಎಂಸಿ ಸೇರ್ಪಡೆಯಾಗಿದ್ದರು. ಇದೀಗ ಟಿಎಂಸಿ ನಾಯಕತ್ವಕ್ಕೆ ಪತ್ರ ಬರೆದಿರುವ ಅವರು, “ವೈಯಕ್ತಿಕ ಕಾರಣಗಳಿಂದಾಗಿ ನಾನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅವರ ರಾಜೀನಾಮೆ ಕುರಿತು ಟಿಎಂಸಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
2016ರಲ್ಲಿ ಬಿಜೆಪಿ ಸೇರಿದ್ದ ಚಂದ್ರ ಕುಮಾರ್ ಬೋಸ್ ಅವರು, ಅದೇ ವರ್ಷ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ನಡಿ ಸ್ಪರ್ಧಿಸಿದ್ದರು. 2016ರಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದ ಅವರನ್ನು, 2020ರ ಪಕ್ಷದ ಸಾಂಸ್ಥಿಕ ಪುನರ್ರಚನೆ ವೇಳೆ ಆ ಸ್ಥಾನದಿಂದ ಕೈಬಿಡಲಾಗಿತ್ತು. ಬಳಿಕ, “ನೇತಾಜಿ ಅವರ ಅಂತರ್ಗತ ರಾಷ್ಟ್ರೀಯತಾವಾದಿ ಸಿದ್ಧಾಂತವನ್ನು ಉತ್ತೇಜಿಸುವ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ” ಎಂದು ಆರೋಪಿಸಿ 2023ರಲ್ಲಿ ಅವರು ಕಮಲ ಪಾಳಯದಿಂದ ಹೊರಬಂದಿದ್ದರು. 2026ರ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಹೆಚ್ಚು ಅಂತರ್ಗತ ರಾಜಕೀಯ ವಿಧಾನದ ಅಗತ್ಯವಿದೆ ಎಂದು ಪ್ರತಿಪಾದಿಸಿ ಟಿಎಂಸಿ ಸೇರಿದ್ದರು.
ಚಂದ್ರ ಕುಮಾರ್ ಬೋಸ್ ಅವರು ಭಾರತದ ಅತ್ಯಂತ ಪ್ರಮುಖ ರಾಜಕೀಯ ಕುಟುಂಬವೊಂದರ ಹಿನ್ನೆಲೆಯಿಂದ ಬಂದವರು. ಇವರು ಮಾಜಿ ಸಂಸದ ಹಾಗೂ ಪ್ರಸಿದ್ಧ ವಕೀಲ ಅಮಿಯಾ ನಾಥ್ ಬೋಸ್ ಅವರ ಪುತ್ರ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಣ್ಣ, ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಶರತ್ ಚಂದ್ರ ಬೋಸ್ ಅವರ ಮೊಮ್ಮಗ.
ರಾಜಕೀಯ ಪ್ರವೇಶಕ್ಕೂ ಮುನ್ನ ಕಾರ್ಪೊರೇಟ್ ಮ್ಯಾನೇಜ್‌ಮೆಂಟ್ ಹಾಗೂ ಉದ್ಯಮಶೀಲತೆಯಲ್ಲಿ ಅವರು ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದರು. ಲಂಡನ್‌ನ ಹೆಂಡನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಪಡೆದಿರುವ ಇವರು, ಐಐಎಂ (IIM) ಕಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಟಾಟಾ ಸ್ಟೀಲ್‌ನಲ್ಲಿ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2004ರಲ್ಲಿ ‘ಬೋಸ್ ಇನ್ಫಾರ್ಮೇಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಎಂಬ ಮಾನವ ಸಂಪನ್ಮೂಲ (HR) ಮತ್ತು ಕೌಶಲ್ಯಾಭಿವೃದ್ಧಿ ಕಂಪನಿಯನ್ನು ಸಹ ಸ್ಥಾಪಿಸಿದ್ದಾರೆ.
ನೇತಾಜಿ ಅವರ ಪರಂಪರೆಯನ್ನು ಉಳಿಸುವಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಓಪನ್ ಪ್ಲಾಟ್‌ಫಾರ್ಮ್ ಫಾರ್ ನೇತಾಜಿ’ ವೇದಿಕೆಯ ವಕ್ತಾರರಾಗಿ, ನೇತಾಜಿಯವರ ನಾಪತ್ತೆಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಪಡಿಸುವಂತೆ ಹಾಗೂ ಆ ಐತಿಹಾಸಿಕ ದಾಖಲೆಗಳು ಸಾರ್ವಜನಿಕರಿಗೆ ಮುಕ್ತವಾಗಿ ಸಿಗುವಂತೆ ಆಗ್ರಹಿಸಿ ದೊಡ್ಡಮಟ್ಟದ ಅಭಿಯಾನಗಳನ್ನು ಮುನ್ನಡೆಸಿದ್ದರು.




