ವಾಹನಗಳ ಮಾಲಿನ್ಯ ನಿಯಂತ್ರಣ (ಪಿಯುಸಿ) ಪ್ರಮಾಣಪತ್ರದ ಮಾನ್ಯತೆ ಅವಧಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಷ್ಕರಿಸಿದ್ದು, ವಾಹನದ ವಯಸ್ಸಿನ ಆಧಾರದ ಮೇಲೆ ಹೊಗೆ ತಪಾಸಣೆ ನಡೆಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನವೆಂಬರ್ 13ರಂದು ಹೊರಡಿಸಲಾದ ‘ಕೇಂದ್ರ ಮೋಟಾರು ವಾಹನಗಳ (16ನೇ ತಿದ್ದುಪಡಿ) ನಿಯಮಗಳು–2026’ರ ಮೂಲಕ 1989ರ ಕೇಂದ್ರ ಮೋಟಾರು ವಾಹನ ನಿಯಮಗಳ ನಿಯಮ 115(7)ಕ್ಕೆ ತಿದ್ದುಪಡಿ ತರಲಾಗಿದೆ.
ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದಲೇ ಈ ನಿಯಮ ಜಾರಿಗೆ ಬಂದಿದೆ. ಹೊಸ ನಿಯಮದಡಿ ಹೊಸ ಬಿಎಸ್–6 ವಾಹನಗಳಿಗೆ ದೀರ್ಘಾವಧಿಯ ಮಾನ್ಯತೆ ದೊರೆಯಲಿದ್ದು, ಹಳೆಯ ವಾಹನಗಳು ಕಡಿಮೆ ಅಂತರದಲ್ಲಿ ತಪಾಸಣೆಗೆ ಒಳಪಡಬೇಕಾಗುತ್ತದೆ. ಜೊತೆಗೆ, ಹಳೆಯ ಮಾಲಿನ್ಯ ವರ್ಗದ ವಾಹನಗಳಿಗೆ ದೇಶದಾದ್ಯಂತ ಏಕರೂಪದ ಮಾನ್ಯತೆ ಅವಧಿಯನ್ನು ನಿಗದಿಪಡಿಸಲಾಗಿದೆ.
ಈ ಹಿಂದೆ ವಾಹನದ ಭಾರತ್ ಸ್ಟೇಜ್ (ಬಿಎಸ್) ಮಾಲಿನ್ಯ ವರ್ಗವನ್ನು ಆಧರಿಸಿ ಮಾತ್ರ ಪಿಯುಸಿ ಮಾನ್ಯತೆ ನಿರ್ಧರಿಸಲಾಗುತ್ತಿತ್ತು. ಇದರಿಂದಾಗಿ ಹೊಸ ಖಾಸಗಿ ಕಾರು ಮತ್ತು ಹಳೆಯ ವಾಣಿಜ್ಯ ವಾಹನಗಳೆರಡೂ ಬಿಎಸ್–6 ವರ್ಗದಲ್ಲಿದ್ದರೆ ಒಂದೇ ರೀತಿ ಒಂದು ವರ್ಷದ ಪ್ರಮಾಣಪತ್ರ ಪಡೆಯುತ್ತಿದ್ದವು. ಆದರೆ ಪರಿಷ್ಕೃತ ವ್ಯವಸ್ಥೆಯಲ್ಲಿ ಬಿಎಸ್–6 ವಾಹನಗಳ ಪ್ರಮಾಣಪತ್ರದ ಮಾನ್ಯತೆಯು ಎರಡು ಅಂಶಗಳನ್ನು ಅವಲಂಬಿಸಿರುತ್ತದೆ. ಮೊದಲ ನೋಂದಣಿ ದಿನಾಂಕದಿಂದ ಲೆಕ್ಕಹಾಕಲಾಗುವ ವಾಹನದ ವಯಸ್ಸು ಹಾಗೂ ಅದು ಖಾಸಗಿ ಬಳಕೆಗೋ ಅಥವಾ ವಾಣಿಜ್ಯ ಬಳಕೆಗೋ ನೋಂದಣಿಯಾಗಿದೆ ಎಂಬುದನ್ನು ಪರಿಗಣಿಸಲಾಗುತ್ತದೆ.
ಬಿಎಸ್–6 ಖಾಸಗಿ ಮತ್ತು ವಾಣಿಜ್ಯ ವಾಹನಗಳು: ಈ ಹಿಂದೆ ಎಲ್ಲಾ ಖಾಸಗಿ ಬಿಎಸ್–6 ವಾಹನಗಳಿಗೆ ವಯಸ್ಸಿನ ಭೇದವಿಲ್ಲದೆ 12 ತಿಂಗಳ ಪಿಯುಸಿ ಮಾನ್ಯತೆ ಇತ್ತು. ಹೊಸ ನಿಯಮದಡಿ ಇದನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ. 6 ವರ್ಷದವರೆಗಿನ ಖಾಸಗಿ ಬಿಎಸ್–6 ವಾಹನಗಳಿಗೆ 3 ವರ್ಷಗಳ ಮಾನ್ಯತೆ ಸಿಗಲಿದೆ. 6 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗಿನ ವಾಹನಗಳಿಗೆ ಈ ಹಿಂದಿನಂತೆ 12 ತಿಂಗಳ ಮಾನ್ಯತೆ ಮುಂದುವರಿಯಲಿದ್ದು, 10 ವರ್ಷಕ್ಕಿಂತ ಹಳೆಯ ವಾಹನಗಳ ಮಾನ್ಯತೆಯನ್ನು 12 ತಿಂಗಳಿಂದ 6 ತಿಂಗಳಿಗೆ ಇಳಿಸಲಾಗಿದೆ. ಅದೇ ರೀತಿ, ಈ ಹಿಂದೆ 12 ತಿಂಗಳ ಮಾನ್ಯತೆ ಹೊಂದಿದ್ದ ವಾಣಿಜ್ಯ ಬಿಎಸ್–6 ವಾಹನಗಳಲ್ಲಿ 6 ವರ್ಷದವರೆಗಿನ ವಾಹನಗಳಿಗೆ ಮಾನ್ಯತೆ ಅವಧಿಯನ್ನು 2 ವರ್ಷಗಳಿಗೆ ಹೆಚ್ಚಿಸಲಾಗಿದೆ. 6 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗಿನ ವಾಣಿಜ್ಯ ವಾಹನಗಳಿಗೆ 12 ತಿಂಗಳು ಹಾಗೂ 10 ವರ್ಷ ಮೇಲ್ಪಟ್ಟ ವಾಹನಗಳಿಗೆ 6 ತಿಂಗಳ ಮಾನ್ಯತೆ ನಿಗದಿಪಡಿಸಲಾಗಿದೆ.
ಹಳೆಯ ವರ್ಗದ ವಾಹನಗಳಿಗೆ ಏಕರೂಪದ ಅವಧಿ:
ಹಳೆಯ ಮಾಲಿನ್ಯ ಮಾನದಂಡದ ವಾಹನಗಳಿಗೆ ವಿವಿಧ ರಾಜ್ಯಗಳಲ್ಲಿ ಇದ್ದ ಭಿನ್ನ ನಿಯಮಗಳನ್ನು ತೆಗೆದುಹಾಕಿ, ದೇಶದಾದ್ಯಂತ ಒಂದೇ ಅವಧಿ ನಿಗದಿಪಡಿಸಲಾಗಿದೆ. ಬಿಎಸ್–1, ಬಿಎಸ್–2 ಮತ್ತು ಬಿಎಸ್–3 ವಾಹನಗಳಿಗೆ ಈ ಹಿಂದೆ ಕೇಂದ್ರದ ನಿಯಮದಡಿ ಸಾಮಾನ್ಯವಾಗಿ 6 ತಿಂಗಳ ಮಾನ್ಯತೆ ಇತ್ತು. ಆದರೆ ದೆಹಲಿಯಂತಹ ಕೆಲವು ರಾಜ್ಯಗಳಲ್ಲಿ 3 ತಿಂಗಳಿಗೊಮ್ಮೆ ತಪಾಸಣೆ ಕಡ್ಡಾಯವಾಗಿತ್ತು. ಇನ್ನು ಮುಂದೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಯಸ್ಸು ಅಥವಾ ವರ್ಗದ ಭೇದವಿಲ್ಲದೆ ಎಲ್ಲಾ ಬಿಎಸ್–1, ಬಿಎಸ್–2 ಮತ್ತು ಬಿಎಸ್–3 ವಾಹನಗಳಿಗೆ 3 ತಿಂಗಳ ಮಾನ್ಯತೆ ಅನ್ವಯವಾಗಲಿದೆ. ಹಾಗೆಯೇ, ಈ ಹಿಂದೆ ಕೇಂದ್ರ ನಿಯಮದಡಿ 12 ತಿಂಗಳ ಮಾನ್ಯತೆ (ಕೆಲವು ರಾಜ್ಯಗಳು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ 6 ತಿಂಗಳು) ಹೊಂದಿದ್ದ ಎಲ್ಲಾ ಖಾಸಗಿ ಹಾಗೂ ವಾಣಿಜ್ಯ ಬಿಎಸ್–4 ವಾಹನಗಳ ಪಿಯುಸಿ ಮಾನ್ಯತೆಯನ್ನು ದೇಶದಾದ್ಯಂತ 6 ತಿಂಗಳಿಗೆ ಇಳಿಸಲಾಗಿದೆ.
ನವೀಕರಣದ ಅವಧಿ ಲೆಕ್ಕಾಚಾರ: ನವೀಕರಿಸಿದ ಪಿಯುಸಿ ಪ್ರಮಾಣಪತ್ರದ ಮಾನ್ಯತೆ ಯಾವ ದಿನದಿಂದ ಆರಂಭವಾಗುತ್ತದೆ ಎಂಬುದನ್ನೂ ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ಇರುವ ಪ್ರಮಾಣಪತ್ರದ ಅವಧಿ ಮುಗಿಯುವ 10 ದಿನಗಳ ಒಳಗಾಗಿ ವಾಹನ ಮಾಲೀಕರು ತಪಾಸಣೆ ಮಾಡಿಸಿದರೆ, ಹೊಸ ಪ್ರಮಾಣಪತ್ರದ ಮಾನ್ಯತೆಯು ಹಳೆಯ ಪ್ರಮಾಣಪತ್ರದ ಅವಧಿ ಮುಗಿಯುವ ದಿನಾಂಕದಿಂದಲೇ ಜಾರಿಗೆ ಬರುತ್ತದೆ. ಇದರಿಂದ ಮುಂಚಿತವಾಗಿ ನವೀಕರಣ ಮಾಡಿಸುವವರಿಗೆ ಉಳಿದ ದಿನಗಳ ನಷ್ಟವಾಗುವುದಿಲ್ಲ. ಒಂದು ವೇಳೆ ಅವಧಿ ಮುಗಿಯುವ ದಿನದಂದು ಅಥವಾ ಆ ನಂತರ ತಪಾಸಣೆ ನಡೆಸಿದರೆ, ತಪಾಸಣೆ ನಡೆಸಿದ ದಿನಾಂಕದಿಂದಲೇ ಹೊಸ ಮಾನ್ಯತೆ ಆರಂಭವಾಗುತ್ತದೆ.



