ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಯಶಸ್ಸಿನ ಬಳಿಕ ಯುವಜನರ ಭರವಸೆ ಮತ್ತು ಆಶಾವಾದಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಶೀಘ್ರದಲ್ಲೇ ‘ದೇಶವ್ಯಾಪಿ ಆಲಿಸುವ ಪ್ರವಾಸ’ವನ್ನು (Nationwide listening tour) ಆರಂಭಿಸಲಿದೆ. ಆಗಸ್ಟ್ 5 ಮತ್ತು 6ರಂದು (ಬುಧವಾರ ಮತ್ತು ಗುರುವಾರ) ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯತಂತ್ರ ಸಭೆಯಲ್ಲಿ ಈ ಪ್ರವಾಸದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಮುಖ್ಯ ವಕ್ತಾರ ಸೌರವ್ ದಾಸ್ ಮತ್ತು ವಕ್ತಾರ ಅಭಿಷೇಕ್ ರಾಂಕಾ ಸೇರಿದಂತೆ ಪಕ್ಷದ ಪ್ರಮುಖರು ಬುಧವಾರ ಮತ್ತು ಗುರುವಾರ ಮುಂದಿನ ಹೆಜ್ಜೆಗಳ ಕುರಿತು ಚರ್ಚೆ ಮತ್ತು ಪರಾಮರ್ಶೆ ನಡೆಸಲಿದ್ದಾರೆ. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 50 ಪ್ರಮುಖ ಸ್ವಯಂಸೇವಕರು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಈ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಜಂತರ್ ಮಂತರ್ ಪ್ರತಿಭಟನೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆ ಅಪಾರ ಭರವಸೆ ಮತ್ತು ಆಶಾವಾದವನ್ನು ಹೊಂದಿರುವ ಯುವ ಪೀಳಿಗೆಯ ಅಗತ್ಯಗಳು ಮತ್ತು ಆಶೋತ್ತರಗಳನ್ನು ಅರ್ಥಮಾಡಿಕೊಳ್ಳಲು, ಈ ಎರಡು ದಿನಗಳ ಕಾರ್ಯತಂತ್ರ ಸಭೆಯ ಬಳಿಕ ದೇಶಾದ್ಯಂತ ಇರುವ ತನ್ನ ಸ್ವಯಂಸೇವಕರನ್ನು ಒಗ್ಗೂಡಿಸಿ ಪಕ್ಷವು ‘ದೇಶವ್ಯಾಪಿ ಆಲಿಸುವ ಪ್ರವಾಸ’ವನ್ನು ಕೈಗೊಳ್ಳಲಿದೆ.
ಈ ಕುರಿತು ಮಾತನಾಡಿರುವ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, “ಯುವಜನರ ಕೈಯಲ್ಲಿ ಈ ಅಹಂಕಾರಿ ಸರ್ಕಾರದ ಸೋಲು, ಯುವಕರು ಒಗ್ಗೂಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ನಮ್ಮ ಯುವಜನರ ನಿರೀಕ್ಷೆಗಳನ್ನು ಅರ್ಥಪೂರ್ಣ ಕ್ರಿಯೆಯಾಗಿ ಪರಿವರ್ತಿಸಲು ಮತ್ತು ಅವರಿಗೆ ಉತ್ತಮ ಮಾರ್ಗವನ್ನು ರೂಪಿಸುವ ನಿಟ್ಟಿನಲ್ಲಿ ನಮ್ಮ ತಂಡವು ಶ್ರಮಿಸುತ್ತಿದೆ” ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರನ್ನು ಬಿಡುಗಡೆ ಮಾಡುವ ತನ್ನ ಆದೇಶದಲ್ಲಿನ ‘ಕ್ರಿಮಿನಲ್ ಹಿನ್ನೆಲೆ’ ಎಂಬ ಪದಗುಚ್ಛವು ಕೇವಲ ಗಂಭೀರ ಮತ್ತು ಘೋರ ಅಪರಾಧಗಳಲ್ಲಿ ಭಾಗಿಯಾದವರನ್ನು ಮಾತ್ರ ಉಲ್ಲೇಖಿಸುತ್ತದೆ ಮತ್ತು ಉಳಿದ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ರಾಜ್ಯಗಳು ಮುಕ್ತಾಯಗೊಳಿಸಬಹುದು ಅಥವಾ ಹಿಂಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮತ್ತು ಎಲ್ಲಾ ಬಿಜೆಪಿ ಹಾಗೂ ಎನ್‌ಡಿಎ ಆಡಳಿತವಿರುವ ರಾಜ್ಯಗಳು ಜುಲೈ 25 ರಂದು ನೀಡಿದ್ದ ಭರವಸೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಸೌರವ್ ದಾಸ್ ಆಗ್ರಹಿಸಿದ್ದಾರೆ.
“ಮೊದಲ ದಿನದಿಂದಲೂ, ಸಿಜೆಪಿ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪ್ರತಿಭಟನಾಕಾರರ ಪರವಾಗಿ ನಿಂತಿದೆ. ನಮ್ಮ ಮಿತಿಯೊಳಗೆ ಕಾನೂನು ನೆರವು, ವೈದ್ಯಕೀಯ ಬೆಂಬಲ ಮತ್ತು ಇತರ ಎಲ್ಲಾ ರೀತಿಯ ಸಹಾಯವನ್ನು ಒದಗಿಸುತ್ತಿದ್ದೇವೆ. ನಮ್ಮ ಆ ಬದ್ಧತೆ ಹಾಗೆಯೇ ಉಳಿದಿದೆ. ಪ್ರತಿಭಟನಾಕಾರರಿಗೆ ನೆರವಾಗುತ್ತಿರುವ ದೇಶಾದ್ಯಂತದ ಎಲ್ಲಾ ವಕೀಲರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
“ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ ಮತ್ತು ಕೇಂದ್ರ ಸರ್ಕಾರದ ಹಿರಿಯ ಪ್ರತಿನಿಧಿಗಳೊಂದಿಗೆ ನಿರಂತರ ಮಾತುಕತೆಯಲ್ಲಿದ್ದೇವೆ. ನೀಡಿರುವ ಭರವಸೆಗಳು ಅಕ್ಷರಶಃ ಜಾರಿಯಾಗಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಈ ದೇಶದ ಯುವಕರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈಗ ಸರ್ಕಾರವು ತನ್ನ ಮಾತನ್ನು ಉಳಿಸಿಕೊಳ್ಳುವ ಸಮಯ ಬಂದಿದೆ” ಎಂದು ದಾಸ್ ಸ್ಪಷ್ಟಪಡಿಸಿದ್ದಾರೆ.




