ಇರಾನ್‌ನಲ್ಲಿ 177ಕ್ಕೂ ಹೆಚ್ಚು ನಾಗರಿಕರನ್ನು ಬಲಿಪಡೆದ ಎರಡು ಪ್ರತ್ಯೇಕ ಕ್ಷಿಪಣಿ ದಾಳಿಗಳಲ್ಲಿ ಅಮೆರಿಕ ಯುದ್ಧಾಪರಾಧ ಎಸಗಿರುವ ಸಾಧ್ಯತೆಗಳಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಮಿನಾಬ್‌ನ ಪ್ರಾಥಮಿಕ ಶಾಲೆ ಹಾಗೂ ಲಾಮರ್ಡ್‌ನ ಕ್ರೀಡಾ ಸಂಕೀರ್ಣದ ಮೇಲೆ ಕಳೆದ ಫೆಬ್ರವರಿಯಲ್ಲಿ ನಡೆದ ದಾಳಿಯು ನಾಗರಿಕರ ಜೀವಹಾನಿಗೆ ಕಾರಣವಾಗಿದೆ ಎಂದು ‘ಸ್ವತಂತ್ರ ಅಂತರರಾಷ್ಟ್ರೀಯ ಸತ್ಯಶೋಧನಾ ನಿಯೋಗ’ ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಫೆಬ್ರವರಿ 28ರಂದು ಮಿನಾಬ್‌ನ ಶಾಲೆಯೊಂದರ ಮೇಲೆ ಅಮೆರಿಕದ ‘ಟೊಮಾಹಾಕ್’ ಕ್ಷಿಪಣಿಗಳು ಅಪ್ಪಳಿಸಿದ ಪರಿಣಾಮ 120 ಮಕ್ಕಳು ಸೇರಿದಂತೆ 156 ಮಂದಿ ಮೃತಪಟ್ಟಿದ್ದರು. ಶಾಲೆಯು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ನೌಕಾ ಸಂಕೀರ್ಣದ ಪಕ್ಕದಲ್ಲಿದ್ದರೂ, ಅದು ಸ್ಪಷ್ಟವಾಗಿ ಶಾಲೆಯೆಂದೇ ಗುರುತಿಸಲ್ಪಟ್ಟಿತ್ತು. ಇದು ಅಚಾತುರ್ಯದಿಂದ ಆದ ದಾಳಿಯಲ್ಲ, ಉದ್ದೇಶಪೂರ್ವಕವಾಗಿಯೇ ಎರಡು ಬಾರಿ ದಾಳಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಅಮೆರಿಕವು ವರದಿಯನ್ನು ತಳ್ಳಿಹಾಕಿದ್ದು, ನಾಗರಿಕರನ್ನು ಗುರಿಯಾಗಿಸಿಲ್ಲ ಎಂದಿದೆ.
ಅದೇ ದಿನ ಲಾಮರ್ಡ್‌ನ ಕ್ರೀಡಾ ಸಂಕೀರ್ಣ ಮತ್ತು ವಸತಿ ಪ್ರದೇಶದ ಮೇಲೆ ‘PrSM’ ಕ್ಷಿಪಣಿ ದಾಳಿ ನಡೆದಿದ್ದು, 7 ಮಕ್ಕಳು ಸೇರಿ 21 ನಾಗರಿಕರು ಬಲಿಯಾಗಿದ್ದರು. ಈ ಎರಡೂ ಕ್ಷಿಪಣಿಗಳು ಅಮೆರಿಕದ ಬಳಿ ಮಾತ್ರ ಇರುವುದರಿಂದ, ಈ ವಿವೇಚನಾರಹಿತ ದಾಳಿಯನ್ನು ಅಮೆರಿಕವೇ ಮಾಡಿದೆ ಎಂದು ನಂಬಲು ಬಲವಾದ ಕಾರಣಗಳಿವೆ ಎಂದು ತಜ್ಞರು ತೀರ್ಮಾನಿಸಿದ್ದಾರೆ. ಆದರೆ, ಅಮೆರಿಕವು ಲಾಮರ್ಡ್‌ನಲ್ಲಿ ತಾನು ದಾಳಿಯೇ ನಡೆಸಿಲ್ಲ ಎಂದು ವಾದಿಸಿದೆ.
ಇದೇ ವೇಳೆ, ಇರಾನ್ ಸರ್ಕಾರವೂ ತನ್ನದೇ ನಾಗರಿಕರ ಮೇಲೆ ‘ಮಾನವೀಯತೆಯ ವಿರುದ್ಧದ ಅಪರಾಧ’ ಎಸಗಿದೆ ಎಂದು ವರದಿ ಬೆಟ್ಟುಮಾಡಿದೆ. 2025ರ ಡಿಸೆಂಬರ್ ಮತ್ತು 2026ರ ಜನವರಿಯಲ್ಲಿ ಇರಾನ್‌ನಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ವೇಳೆ ಭದ್ರತಾ ಪಡೆಗಳು ಅಭೂತಪೂರ್ವ ಮಟ್ಟದಲ್ಲಿ ಮಾರಣಾಂತಿಕ ಬಲಪ್ರಯೋಗ ಮಾಡಿವೆ ಎಂದು ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮೇಲ್ಛಾವಣಿಗಳಿಂದ ಗುಂಡು ಹಾರಿಸಿರುವ ಪಡೆಗಳು, ಪ್ರತಿಭಟನಾಕಾರರ ಕಣ್ಣು, ಎದೆಗೆ ಛರ್ರಾಗಳನ್ನು (ಪೆಲೆಟ್) ಸಿಡಿಸಿವೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆರೋಗ್ಯ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿ, ಬಂಧಿಸಲಾಗಿದೆ. ಬಂಧಿತರ ಮೇಲೆ ತೀವ್ರ ಚಿತ್ರಹಿಂಸೆ ಪ್ರಯೋಗಿಸಲಾಗಿದ್ದು, ತ್ವರಿತ ವಿಚಾರಣೆ ನಡೆಸಿ ಕನಿಷ್ಠ 29 ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಲಾಗಿದೆ.
ಈ ದಮನಕಾರಿ ನೀತಿಯಿಂದ ಮೃತಪಟ್ಟವರ ನಿಖರ ಸಂಖ್ಯೆ ಸಿಕ್ಕಿಲ್ಲ. ಸರ್ಕಾರವು 3,000 ಸಾವು ಸಂಭವಿಸಿದೆ ಎಂದಿದ್ದರೆ, ಮಾನವ ಹಕ್ಕುಗಳ ಸಂಸ್ಥೆ ‘ಹ್ರಾನಾ’ 7,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಹತ್ಯೆಯಾಗಿದ್ದಾರೆ ಎಂದು ಹೇಳಿದೆ. ಇರಾನ್ ನಾಗರಿಕರು ಅಮೆರಿಕದ ದಾಳಿ ಹಾಗೂ ಸ್ವಂತ ಸರ್ಕಾರದ ದೌರ್ಜನ್ಯಗಳ ನಡುವೆ ಸಿಲುಕಿ ನಲುಗುತ್ತಿದ್ದಾರೆ ಎಂದು ವರದಿ ವಿಷಾದಿಸಿದೆ.




