ಲೋಕಾಯುಕ್ತ ಪೊಲೀಸರು, ಬೆಂಗಳೂರಿನ ಕೋರಮಂಗಲದಲ್ಲಿ ಕೇಂದ್ರ ಜಿಎಸ್‌ಟಿ ಇಲಾಖೆಯ ಸೂಪರಿಂಟೆಂಡೆಂಟ್ ಮತ್ತು ಮಧ್ಯವರ್ತಿಯನ್ನು ಲಂಚಗುಳಿತನ ಆರೋಪದಡಿ ಬಂಧಿಸಿದ್ದಾರೆ. ಕೊರಮಂಗಲದಲ್ಲಿರುವ ಕೇಂದ್ರೀಯ ಸದನದಲ್ಲಿ ₹8 ಲಕ್ಷ ನಗದು ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಅಧಿಕಾರಿ ಮೋಹಿತ್ ಪ್ರತಾಪ್ ಸಿಂಗ್ (ದಕ್ಷಿಣ ವಿಭಾಗ-4, ಎ-ರೇಂಜ್, ಸೌತ್ ಕಮೀಷನರೇಟ್‌ನ ಸಿಜಿಎಸ್‌ಟಿ ಸೂಪರಿಂಟೆಂಡೆಂಟ್ ಮತ್ತು ಮಧ್ಯವರ್ತಿ ಸಲ್ಮಾನ್ ಶೇಖ್ ಬಂಧಿತ ಆರೋಪಿಗಳು.
ಕಬ್ಬಿಣ ವ್ಯಾಪಾರಿ ಸಯ್ಯದ್ ಜಮೀರ್ ವಿರುದ್ಧ ತೆರಿಗೆ ವಂಚನೆಯ ಸುಳ್ಳು ದೂರು ದಾಖಲಾಗಿತ್ತು. ಈ ಪ್ರಕರಣ ಮುಚ್ಚಿಹಾಕಲು ಅಧಿಕಾರಿಯು ಮೊದಲು ₹20 ಲಕ್ಷ ಬೇಡಿಕೆ ಇಟ್ಟಿದ್ದರು. ನಂತರ ₹8 ಲಕ್ಷಕ್ಕೆ ಒಪ್ಪಂದವಾಗಿ, ಮಧ್ಯವರ್ತಿ ಮೂಲಕ ಹಣ ಸ್ವೀಕರಿಸಲು ಏರ್ಪಾಡು ಮಾಡಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಜಮೀರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೊರಮಂಗಲದ ಕೇಂದ್ರೀಯ ಸದನದಲ್ಲಿರುವ ಸೂಪರಿಂಟೆಂಡೆಂಟ್ ಅವರ ಕಚೇರಿ ಚೇಂಬರ್‌ನಲ್ಲಿ ಮಧ್ಯವರ್ತಿ ಹಣವನ್ನು ಹಸ್ತಾಂತರಿಸುತ್ತಿದ್ದ ವೇಳೆ ಲೋಕಾಯುಕ್ತ ತಂಡದ ಬಲೆಗೆ ಬಿದ್ದಿದ್ದಾರೆ.
ಇಬ್ಬರನ್ನೂ ಭ್ರಷ್ಟಾಚಾರ ನಿವಾರಣಾ ಕಾಯಿದೆ (ಪ್ರಿವೆನ್ಷನ್ ಆಫ್ ಕರಪ್ಷನ್ ಆಕ್ಟ್) ಸೆಕ್ಷನ್ 7ಎ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಸದ್ಯ ಬೆಂಗಳೂರು ಸೆಂಟ್ರಲ್ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣ ಜಿಎಸ್‌ಟಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.




