ಉರ್ದು ಸೇರಿದಂತೆ ಭಾಷಾ ಶಿಕ್ಷಕರ ನೇಮಕಾತಿಯಲ್ಲಿ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಕಲ್ಪಿಸುವುದಾಗಿ ಸರ್ಕಾರ ನೀಡಿದ್ದ ಭರವಸೆಯನ್ನು ಶೀಘ್ರವಾಗಿ ಈಡೇರಿಸಬೇಕು. ಸರ್ಕಾರವು ಕೊಟ್ಟ ಮಾತಿಗೆ ತಪ್ಪಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಎಚ್ಚರಿಸಿದೆ.
“15 ಸಾವಿರ ಮಂದಿ ಶಿಕ್ಷಕರ ನೇಮಕಾತಿ ಅಧಿಸೂಚನೆಯ ವೇಳೆ ಉರ್ದು ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಮಾಧ್ಯಮದ ಅಭ್ಯರ್ಥಿಗಳನ್ನು ಪರಿಗಣಿಸದೇ ಇದ್ದ ಕಾರಣ ನಿರೀಕ್ಷೆ ಹೊಂದಿದ್ದ ಸಾವಿರಾರು ಅಭ್ಯರ್ಥಿಗಳಿಗೆ ನಿರಾಸೆ ಉಂಟಾಗಿತ್ತು. ಆ ಬಳಿಕ ಅಭ್ಯರ್ಥಿಗಳು ಸೇರಿದಂತೆ ಎಲ್ಲರಿಂದಲೂ ಒತ್ತಾಯ ಬಂದಾಗ ಸರ್ಕಾರವು 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತರ ಶಿಕ್ಷಕರ ನೇಮಕಾತಿಯನ್ನು ಕೈಗೊಳ್ಳುವುದಾಗಿ ಮೌಖಿಕ ಭರವಸೆ ನೀಡಿತ್ತು. ಇದರಿಂದಾಗಿ ಅಭ್ಯರ್ಥಿಗಳು ಕೂಡ ಹೋರಾಟ ನಡೆಸುವುದರಿಂದ ಹಿಂದೆ ಸರಿದು, ಹೊಸ ಅಧಿಸೂಚನೆಗೆ ಕಾಯುತ್ತಿದ್ದಾರೆ. ಆದರೆ, ಇದೀಗ ಸರ್ಕಾರವು ಅತೀ ಕಡಿಮೆ ನೇಮಕಾತಿಯನ್ನು ನಡೆಸಲು ಮುಂದಾಗುತ್ತಿದೆ ಎಂದು ಕೇಳಿಬರುತ್ತಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕಳವಳ ವ್ಯಕ್ತಪಡಿಸಿದೆ.
“ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಮಸ್ಯೆ ಕುರಿತು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಸೇರಿದಂತೆ ಹಲವು ಜನಪರ ಸಂಘಟನೆಗಳು ನಿರಂತರವಾಗಿ ಸರ್ಕಾರದ ಗಮನ ಸೆಳೆದಿತ್ತು. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಉರ್ದು, ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಈ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರದಿಂದ 800 ಉರ್ದು ಹಾಗೂ 200 ಮರಾಠಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಧನಾತ್ಮಕ ಸ್ಪಂದನೆ ಮತ್ತು ಭರವಸೆ ವ್ಯಕ್ತವಾಗಿತ್ತು. ಇದರಿಂದ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿತ್ತು. ಆದರೆ ಇದೀಗ ಅತೀ ಕಡಿಮೆ ಹುದ್ದೆಗೆ ಅಧಿಸೂಚನೆ ಹೊರಡಿಸಲು ಮುಂದಾಗುತ್ತಿದೆ ಎಂಬ ಅಂಶವು ಅಭ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತಿಳಿಸಿದೆ.
“ಈ ಹಿಂದೆ ನೀಡಿದ ಭರವಸೆಯನ್ನು ಈ ರೀತಿಯಾಗಿ ಸೀಮಿತಗೊಳಿಸುವುದು ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ
ನಸೀಂ ಅಹ್ಮದ್ ತಿಳಿಸಿದ್ದಾರೆ.
This video cannot be played in your browser. Open the video directly
“ಸರ್ಕಾರವು ಘೋಷಿಸಿದ ಹುದ್ದೆಗಳ ಸಂಖ್ಯೆಯನ್ನು ಕಡಿತಗೊಳಿಸುವ ಮೂಲಕ ಸಾವಿರಾರು ಅರ್ಹ ಅಭ್ಯರ್ಥಿಗಳ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಬಾರದು. ಒಂದು ಬಾರಿ ಸರ್ಕಾರ ಅಧಿಕೃತವಾಗಿ ಭರವಸೆ ನೀಡಿದ ನಂತರ, ಅದನ್ನು ಜಾರಿಗೊಳಿಸುವ ಜವಾಬ್ದಾರಿಯೂ ಸರ್ಕಾರದ್ದಾಗಿದೆ. 800 ಉರ್ದು ಮತ್ತು 200 ಮರಾಠಿ ಸೇರಿದಂತೆ ಘೋಷಿಸಲಾದ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡುವ ನಿಟ್ಟಿನಲ್ಲಿ ತಕ್ಷಣ ಸ್ಪಷ್ಟ ಆದೇಶ ಹೊರಡಿಸಬೇಕು” ಎಂದರು.
“ಅತಿಕಡಿಮೆ ಹುದ್ದೆಗಳಿಗೆ ನೇಮಕಾತಿಯನ್ನು ಸೀಮಿತಗೊಳಿಸುವ ಪ್ರಸ್ತಾವನೆ ಇದ್ದಲ್ಲಿ, ಅದನ್ನು ಸರ್ಕಾರ ಕೂಡಲೇ ಮರುಪರಿಶೀಲಿಸಬೇಕು. ಅರ್ಹತೆ ಹೊಂದಿರುವ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಅವರ ಹಕ್ಕಿನ ಅವಕಾಶವನ್ನು ನಿರಾಕರಿಸುವ ಯಾವುದೇ ಕ್ರಮವನ್ನು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಒಪ್ಪಿಕೊಳ್ಳುವುದಿಲ್ಲ. ಸರ್ಕಾರದ ಪ್ರತಿನಿಧಿಗಳಾದ ಸಚಿವರು ಕೂಡ ಸಚಿವ ಸಂಪುಟ ಸಭೆಯಲ್ಲಿ 800ರಷ್ಟು ಉರ್ದು ಹಾಗೂ 200ರಷ್ಟು ನೇಮಕಾತಿಯು ನಡೆಸುವ ಬಗ್ಗೆ ಬಹಿರಂಗ ಹೇಳಿಕೆ ಅಲ್ಲದೇ, ಮಾಧ್ಯಮಗಳ ಮುಂದೆಯೂ ಒಪ್ಪಿಕೊಂಡಿದ್ದರು. ಇದೀಗ ಮಾತು ತಪ್ಪಿದರೆ ಅಭ್ಯರ್ಥಿಗಳು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಉಂಟು ಮಾಡುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
“ಉರ್ದು, ಮರಾಠಿ ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಅಭ್ಯರ್ಥಿಗಳ ಉದ್ಯೋಗಾವಕಾಶವು ಕೇವಲ ಒಂದು ನೇಮಕಾತಿ ಪ್ರಕ್ರಿಯೆಯ ವಿಷಯವಲ್ಲ; ಇದು ಸಮಾನ ಅವಕಾಶ, ಭಾಷಾ ಹಕ್ಕು ಹಾಗೂ ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದೆ. ಸರ್ಕಾರ ತನ್ನ ಹಿಂದಿನ ಭರವಸೆಯಿಂದ ಹಿಂದೆ ಸರಿಯದೆ, ಘೋಷಿಸಲಾದ ಎಲ್ಲಾ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಗೆ ಒಳಪಡಿಸಬೇಕು. ಈ ಕುರಿತು ಸರ್ಕಾರ ತಕ್ಷಣವೇ ಸ್ಪಷ್ಟನೆ ನೀಡಬೇಕು. ಅಭ್ಯರ್ಥಿಗಳಲ್ಲಿರುವ ಗೊಂದಲವನ್ನು ನಿವಾರಿಸಬೇಕು. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡು 800 ಉರ್ದು, 200 ಮರಾಠಿ ಸೇರಿದಂತೆ ಘೋಷಿಸಲಾದ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡದಿದ್ದರೆ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಅಭ್ಯರ್ಥಿಗಳೊಂದಿಗೆ ಸೇರಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ. ಅಗತ್ಯವಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ, ಮನವಿ, ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಸರ್ಕಾರದ ಗಮನ ಸೆಳೆಯುವ ಹಂತ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಎಚ್ಚರಿಸಿದೆ.
ಈ ಸುದ್ದಿ ಓದಿದ್ದೀರಾ? ಸಭಾಧ್ಯಕ್ಷರ ತವರಲ್ಲೇ ಬಡವರು ಅತಂತ್ರ: ʼಹಕ್ಕುಪತ್ರʼವಿದ್ದರೂ ಸ್ವಂತ ಸೂರಿಲ್ಲ, 13 ವರ್ಷಗಳಿಂದ ಬೀದಿಯಲ್ಲೇ ಬದುಕು!
“ಸರ್ಕಾರವು ಈ ವಿಷಯವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ನೋಡದೆ, ಸಾವಿರಾರು ಯುವ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾಗಿ ಪರಿಗಣಿಸಿ ಕೊಟ್ಟ ಮಾತಿನಂತೆ ಸಂಪೂರ್ಣ ನೇಮಕಾತಿಯನ್ನು ಜಾರಿಗೊಳಿಸಬೇಕು” ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ನಸೀಂ ಅಹ್ಮದ್ ತಿಳಿಸಿದ್ದಾರೆ.





