ಸರ್ಕಾರಿ ಶಾಲೆಗೆ ಅನುಮತಿ ಇಲ್ಲದೆ ಪ್ರವೇಶಿಸಿ, ತರಗತಿಗಳಿಗೆ ಅಡ್ಡಿಪಡಿಸಿ ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಂಸ್ಥಾಪಕ ಮತ್ತು ಸಂಚಾಲಕ ಅಭಿಜೀತ್ ದೀಪ್ಕೆ ಹಾಗೂ ಅವರ ಸಹಚರರ ವಿರುದ್ಧ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಅಭಿಜೀತ್ ದೀಪ್ಕೆ ತಮ್ಮ ‘ಶಾಲೆ ಸರಿ ಮಾಡಿ’ (School Thik Karo) ಅಭಿಯಾನದ ಭಾಗವಾಗಿ ಲಾತೂರ್ ಜಿಲ್ಲೆಯ ಔಸಾ ತಾಲೂಕಿನ ಜವಳಿ ಗ್ರಾಮದಲ್ಲಿರುವ ಜಿಲ್ಲಾ ಪರಿಷತ್ ಉರ್ದು ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಮತ್ತು ಅವರ ತಂಡವು ಶಾಲಾ ಆಡಳಿತ ಮಂಡಳಿಯಿಂದ ಪೂರ್ವಾನುಮತಿ ಪಡೆಯದೆ ತರಗತಿಗಳಿಗೆ ಪ್ರವೇಶಿಸಿದ್ದರು. ವಿದ್ಯಾರ್ಥಿಗಳ ನಡುವೆ ಕುಳಿತು ಪ್ರಶ್ನೆಗಳನ್ನು ಕೇಳುವ ಮೂಲಕ ಶೈಕ್ಷಣಿಕ ಕಾರ್ಯಕ್ಕೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ | ಕಳಪೆ ಊಟ, ಶಿಕ್ಷಕರ ಅಭಾವ: ಹೆದ್ದಾರಿ ತಡೆದ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು
ಅಲ್ಲದೆ, ದೀಪ್ಕೆ ಅವರು ಶಾಲೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. “ತಮ್ಮ ಭೇಟಿಯ ಸಮಯದಲ್ಲಿ ಹಾಜರಾತಿ ಹೆಚ್ಚಿಸಿ ತೋರಿಸಲು ಬೇರೆ ಶಾಲೆಯ ಮಕ್ಕಳನ್ನು ಕರೆತಂದು ಕೂರಿಸಲಾಗಿತ್ತು” ಎಂದು ಆರೋಪಿಸಿ ಅವರು ಶಾಲೆಯ ತೇಜೋವಧೆ ಮಾಡಿದ್ದಾರೆ ಮತ್ತು ಶಿಕ್ಷಕರನ್ನು ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಲೆಗೆ ಅಕ್ರಮ ಪ್ರವೇಶ ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಕುರಿತು ಜಿಲ್ಲಾ ಪರಿಷತ್ ಉರ್ದು ಶಾಲೆಯ ಶಿಕ್ಷಕಿ ಸಯ್ಯದ್ ಶಂಶಾದ್‌ಬಾನೋ ಖೈರತಾಲಿ (53) ಅವರು ಔಸಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಾಯ್ದೆಗಳಡಿ ದೂರು ದಾಖಲಿಸಲಾಗಿದೆ.




