ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶೋಚನೀಯ ಸ್ಥಿತಿಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ರಾಜ್ಯದಲ್ಲಿ 611 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ ಎಂಬ ಶಾಕಿಂಗ್ ಮಾಹಿತಿಯನ್ನು ರಾಜಸ್ಥಾನ ಸರ್ಕಾರ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ. ಸಿಜೆಪಿ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಬಳಿಕ ಈ ಮಾಹಿತಿ ಬಹಿರಂಗವಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಟೀಕಾರಾಮ್ ಜೂಲಿ ಅವರು ಕೇಳಿದ ಪ್ರಶ್ನೆಗೆ ಉತ್ತರವಾಗಿ, 2025-26ರ ಸಮಗ್ರ ಶಿಕ್ಷಣ ಅಭಿಯಾನದ ಯು-ಡೈಸ್ (UDISE) ಅಧಿಕೃತ ದತ್ತಾಂಶವನ್ನು ಆಧರಿಸಿ ಸರ್ಕಾರ ಈ ವಿವರಗಳನ್ನು ಮಂಡಿಸಿದೆ.
ಇದನ್ನೂ ಓದಿ: ಶಾಲೆಗೆ ಅಕ್ರಮ ಪ್ರವೇಶ ಆರೋಪ: ಸಿಜೆಪಿ ಸಂಚಾಲಕ ದೀಪ್ಕೆ ವಿರುದ್ಧ ಎಫ್‌ಐಆರ್
ಒಟ್ಟು 611 ಶಾಲೆಗಳಲ್ಲಿ ಸ್ವಂತ ಕಟ್ಟಡವಿಲ್ಲ, ಇದರಲ್ಲಿ 10 ಹೆಣ್ಣು ಮಕ್ಕಳ ಶಾಲೆಗಳೂ ಸೇರಿವೆ. ರಾಜಧಾನಿ ಜೈಪುರ ಒಂದರಲ್ಲೇ 38 ಶಾಲೆಗಳು ಕಟ್ಟಡ ರಹಿತವಾಗಿ ನಡೆಯುತ್ತಿದ್ದರೆ, ಝಾಲಾವಾರ್ ಜಿಲ್ಲೆಯ ಅಕ್ಲೇರಾ ಬ್ಲಾಕ್‌ನಲ್ಲಿ ಗರಿಷ್ಠ ಅಂದರೆ 23 ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ.
ಸ್ವಂತ ಕಟ್ಟಡ ಹೊಂದಿರುವ 64,484 ಸರ್ಕಾರಿ ಶಾಲೆಗಳ ಪೈಕಿ 2,047 ಶಾಲೆಗಳಲ್ಲಿ ಶೌಚಾಲಯ ಸೌಲಭ್ಯವಿಲ್ಲ ಮತ್ತು 1,049 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂದು ವರದಿ ತಿಳಿಸಿದೆ.
ಜೈಪುರದ ಬಗ್ರು ಕ್ಷೇತ್ರದ ರಂಪುರ ಕನ್ವರ್‌ಪುರದಲ್ಲಿ ಶಾಲೆಯೊಂದರ ಕಟ್ಟಡ ಶಿಥಿಲಗೊಂಡಿದ್ದರಿಂದ ಅದನ್ನು ದನದ ಕೊಟ್ಟಿಗೆಯಲ್ಲಿ ನಡೆಸಲಾಗುತ್ತಿತ್ತು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕ ಆಶುತೋಷ್ ರಾಂಕಾ ನೇತೃತ್ವದ ನಿಯೋಗವು ‘ಸ್ಕೂಲ್ ಠೀಕ್ ಕರೋ’ (ಶಾಲೆಗಳನ್ನು ಸರಿಪಡಿಸಿ) ಅಭಿಯಾನದ ಭಾಗವಾಗಿ ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳ ತಪಾಸಣೆ ನಡೆಸುತ್ತಿತ್ತು. ಜೈಪುರ ಬಳಿಯ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದಾಗ ಸಿಜಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿತ್ತು. ಈ ಘಟನೆ ನಡೆದು ಒಂದು ದಿನದ ನಂತರ ಸರ್ಕಾರ ಶಾಸನಸಭೆಯಲ್ಲಿ ಈ ಅಂಕಿ-ಅಂಶಗಳನ್ನು ಮಂಡಿಸಿದೆ.
ವಿಧಾನಸಭೆಯಲ್ಲಿ ಬಿಜೆಪಿಯ ಹಾಲಿ ಸರ್ಕಾರವು ಶಾಲೆಗಳ ಈ ದುಸ್ಥಿತಿಗೆ ಹಿಂದಿನ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದೆ. ಪ್ರಸ್ತುತ ಆಡಳಿತವು ಶಾಲಾ ಕಟ್ಟಡಗಳ ದುರಸ್ತಿಗೆ 550 ಕೋಟಿ ರೂ. ಹಾಗೂ ನೂತನ ಕಟ್ಟಡಗಳ ನಿರ್ಮಾಣಕ್ಕೆ 450 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಹಂತ ಹಂತವಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದೆ. ಆದರೆ ಈವರೆಗೆ ಯಾಕೆ ಸರಿಪಡಿಸಿಲ್ಲ ಎಂಬ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ.




