ವರ್ಷ 2000ರ ಕೊಲೆ ಪ್ರಕರಣವೊಂದರಲ್ಲಿ ಕಳೆದ 16 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ರಂಜೀತ್ ಕುಮಾರ್ ಝಾ ಎಂಬ ವ್ಯಕ್ತಿಯನ್ನು ಪಟನಾ ಹೈಕೋರ್ಟ್ ನಿರ್ದೋಷಿ ಎಂದು ಘೋಷಿಸಿ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ಹೇಳಿಕೆಯಲ್ಲಿ ಗಂಭೀರ ವೈರುಧ್ಯಗಳಿದ್ದು, ಆರೋಪಿಯ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿರುವುದನ್ನು ಗಮನಿಸಿದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್ ಮತ್ತು ನ್ಯಾಯಮೂರ್ತಿ ಕುಮಾರ್ ಮನೀಶ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದ್ದು, 2000ರಲ್ಲಿ ಬಿಹಾರದ ಸಮಸ್ತಿಪುರದ ಪವನ್ ಕುಮಾರ್ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯ ಆದೇಶವನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: 12 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ, ಪ್ರಕರಣ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
3,300 ರೂಪಾಯಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ರಂಜೀತ್ ಕುಮಾರ್, ಪವನ್ ಮೇಲೆ ಗುಂಡು ಹಾರಿಸಿ ಕೊಂದಿದ್ದರು ಎಂದು ದೂರುದಾರರು ಆರೋಪಿಸಿದ್ದರು. ಆದರೆ, ಘಟನಾ ಸ್ಥಳದಲ್ಲಿ ಯಾವುದೇ ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿಲ್ಲ ಹಾಗೂ ಖಾಸಗಿ ಸಾಕ್ಷಿಗಳ ಹೇಳಿಕೆಯಲ್ಲಿ ಪರಸ್ಪರ ವಿರೋಧಾಭಾಸಗಳಿದ್ದವು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಘಟನಾ ಸ್ಥಳದಲ್ಲಿದ್ದ ಬೆಳಕಿನ ವ್ಯವಸ್ಥೆ ಮತ್ತು ವಶಪಡಿಸಿಕೊಂಡ ಆಯುಧದ ವಿಧಿವಿಜ್ಞಾನ (FSL) ತಪಾಸಣೆ ನಡೆಸದಿರುವುದು ಸೇರಿದಂತೆ ತನಿಖೆಯಲ್ಲಿ ಹಲವು ಲೋಪದೋಷಗಳನ್ನು ನ್ಯಾಯಾಲಯ ಬೆರಳು ಮಾಡಿ ತೋರಿಸಿದೆ.
ಅಷ್ಟೇ ಅಲ್ಲದೆ, ಸುಳ್ಳು ಪ್ರಕರಣ ದಾಖಲಿಸಲು ಸಾಕ್ಷಿಗಳೊಂದಿಗೆ ಶಾಮೀಲಾಗಿರುವ ಪೋಲಿಸ್ ಅಧಿಕಾರಿಗಳ ವಿರುದ್ಧ ಎರಡು ತಿಂಗಳೊಳಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಬಿಹಾರ ಡಿಜಿಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ದೀರ್ಘಕಾಲದ ಜೈಲುವಾಸದಿಂದಾಗಿ ರಂಜೀತ್ ಕುಮಾರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.





