ಬ್ಯಾಂಕುಗಳಿಂದ ಪಡೆದ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಪಾವತಿಸದೆ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಗಳನ್ನು ಜಪ್ತಿ ಮಾಡಿ, ಬ್ಯಾಂಕುಗಳಿಗೆ 14,131.6 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಮರುಪಾವತಿಸಲಾಗಿದೆ. ಆದರೆ, ಈ ಆಸ್ತಿ ಮರುಪಡೆಯುವಿಕೆ ಅಥವಾ ಸಾಲ ತೀರಿದ್ದರಿಂದಲೇ ಅವರ ಮೇಲಿರುವ ಅಕ್ರಮ ಹಣ ವರ್ಗಾವಣೆ (PMLA) ಕ್ರಿಮಿನಲ್ ಪ್ರಕರಣ ಕೊನೆಗೊಳ್ಳುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಬಾಂಬೆ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಮುಚ್ಚಿಹೋಗಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗಾಗಿ ಪಡೆದಿದ್ದ ಸುಮಾರು 9,000 ಕೋಟಿ ರೂಪಾಯಿ ಸಾಲದ ಪೈಕಿ 3,500 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮಲ್ಯ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬ ಆರೋಪವಿದೆ.
ಇದನ್ನೂ ಓದಿ: 1000ದ ನೋಟು ಚಲಾವಣೆ ಹೆಚ್ಚಳ; ಕೆನ್ಯಾದಲ್ಲಿ ಬ್ಲ್ಯಾಕ್ ಮನಿ ಆತಂಕ!
ವಿಶೇಷ ನ್ಯಾಯಾಲಯದ ಆದೇಶದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಮಲ್ಯ ಅವರಿಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ (ಯುಬಿಎಚ್‌ಎಲ್) ಷೇರುಗಳು ಸೇರಿದಂತೆ 14,131.6 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹಸ್ತಾಂತರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ.
ಬ್ಯಾಂಕುಗಳ ಸಾಲ ಮರುಪಾವತಿ ಪ್ರಕ್ರಿಯೆ ಮತ್ತು PMLA ಅಡಿಯ ಕ್ರಿಮಿನಲ್ ತನಿಖೆಗಳೆರಡೂ ಸಂಪೂರ್ಣವಾಗಿ ವಿಭಿನ್ನ ಕಾನೂನು ವ್ಯಾಪ್ತಿಗೆ ಬರುತ್ತವೆ. ಸಂತ್ರಸ್ತ ಬ್ಯಾಂಕುಗಳ ನಷ್ಟವನ್ನು ಸರಿದೂಗಿಸಲು ಆಸ್ತಿಯನ್ನು ಹಸ್ತಾಂತರಿಸುವುದು PMLA ಕಾಯ್ದೆಯಡಿ ಒಂದು ನಿಯಮವಷ್ಟೇ. ಬ್ಯಾಂಕುಗಳಿಗೆ ಹಣ ತಲುಪಿದೆ ಎಂದಾಕ್ಷಣ ಅಕ್ರಮ ಹಣ ವರ್ಗಾವಣೆಯ ಅಪರಾಧ ಅಥವಾ ಆರೋಪಗಳು ಇಲ್ಲವಾಗುವುದಿಲ್ಲ ಎಂಬುದು ಇಡಿ ಹೇಳಿದೆ.
ಬ್ಯಾಂಕುಗಳ ಸಾಲ ಮರುಪಾವತಿಯಾಗಿದ್ದು, ಇದು ಕೇವಲ ವಾಣಿಜ್ಯ ವ್ಯಾಜ್ಯವಾಗಿರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಮಲ್ಯ ಪರ ವಕೀಲರು ಮಾಡಿದ ವಾದವನ್ನು ಇಡಿ ‘ತಪ್ಪು ಗ್ರಹಿಕೆ’ ಎಂದು ತಳ್ಳಿಹಾಕಿದೆ. ಪ್ರಸ್ತುತ ಲಂಡನ್‌ನಲ್ಲಿರುವ ವಿಜಯ್ ಮಲ್ಯ ಅವರನ್ನು ಭಾರತೀಯ ನ್ಯಾಯಾಲಯಗಳು ‘ತಲೆಮರೆಸಿಕೊಂಡ ಆರ್ಥಿಕ ಅಪರಾಧಿ’ ಎಂದು ಘೋಷಿಸಿವೆ.





