ಕೇರಳದಲ್ಲಿ ನಾಳೆ ಅಂದರೆ ಏಪ್ರಿಲ್ 9ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಕೇರಳ ಬಿಜೆಪಿ ಕಾರ್ಯಕರ್ತರು ಹಣ ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಏಪ್ರಿಲ್ 8ರ ಬುಧವಾರ ಪಾಲಕ್ಕಾಡ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ವಿತರಿಸುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಘಟಕ ಬಿಡುಗಡೆ ಮಾಡಿದೆ.
ಇದು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಕನ್ನಡಿ ಪಂಚಾಯತ್ ಪ್ರದೇಶದ ವಿಡಿಯೋ ಎಂದು ಹೇಳಲಾಗಿದೆ. ತಿರುವುಕ್ಕುರಿಸ್ಸಿಯ ಮನೆಯ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಿರಿಯ ನಾಗರಿಕನೊಬ್ಬರಿಗೆ ಮಹಿಳೆಯೊಬ್ಬರು ಹಣ ನೀಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಮಹಿಳೆ ಬಿಜೆಪಿ ಕಾರ್ಯಕರ್ತೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಕೇರಳ | ಕಾಂಗ್ರೆಸ್ ಕೌನ್ಸಿಲರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪಾಲಕ್ಕಾಡ್‌ನಲ್ಲಿ ಹೆಚ್ಚಿದ ರಾಜಕೀಯ ಕಾವು
ಕೆಲವು ದಿನಗಳ ಹಿಂದೆ ಸಾವು ಸಂಭವಿಸಿದ ಹತ್ತಿರದ ಮನೆಗೆ ಭೇಟಿ ನೀಡುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಈ ಘಟನೆಯನ್ನು ಗಮನಿಸಿದ್ದಾರೆ ಎಂದು ಕೆಎಸ್‌ಯುನ ಪಾಲಕ್ಕಾಡ್ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ರಾಜಕೀಯ ಕಾರ್ಯಕರ್ತರು ಮತ ಕೇಳಲು ಮನೆಗಳಿಗೆ ಭೇಟಿ ನೀಡುವುದಕ್ಕೆ ತಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಹಣ ನೀಡುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಪ್ರಯತ್ನಕ್ಕೂ ನಮ್ಮ ಆಕ್ಷೇಪವಿದೆ ಎಂದು ಹೇಳಿದ್ದಾರೆ.
ಶೋಭಾ ಸುರೇಂದ್ರನ್ ಹಣ ನೀಡುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ಕಾರ್ಯಕರ್ತರು ವಿಡಿಯೋ ಮಾಡಿದ್ದಾರೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ವಾಗ್ವಾದ ನಡೆದಿದೆ. ಆದರೆ ವೃದ್ಧ ಮಹಿಳೆ ಮಾತ್ರ ತನ್ನ ಕೈಯಲ್ಲಿರುವ ಹಣ ಪಿಂಚಣಿಯ ಹಣ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ!
ಬಿಜೆಪಿಯೂ ಆರೋಪವನ್ನು ನಿರಾಕರಿಸಿದೆ. ಮದ್ಯ ವಿತರಣೆ, ಹಣ ವಿತರಣೆ ಮೊದಲಾದ ಆರೋಪಗಳನ್ನು ಪ್ರತಿಸ್ಪರ್ಧಿ ಪಕ್ಷಗಳು ಮಾಡುತ್ತಲ್ಲೇ ಇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಸುರೇಶ್ ಹೇಳಿದ್ದಾರೆ. ಈ ನಡುವೆ ಪಾಲಕ್ಕಾಡ್ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪಿಶಾರಡಿ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ಸೌತ್ ಫಸ್ಟ್ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಹಣಬಲದಿಂದ ಕೇರಳಂ ಬಿಜೆಪಿ ಅಧ್ಯಕ್ಷರಾಗಿರುವ ರಾಜೀವ್ ಚಂದ್ರಶೇಖರ್: ಪ್ರಿಯಾಂಕ್ ಖರ್ಗೆ
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾತನಾಡಿದ ಶೋಭಾ ಸುರೇಂದ್ರನ್, ಆರೋಪವನ್ನು ನಿರಾಕರಿಸಿದ್ದಾರೆ. ಇದು ಕಟ್ಟುಕಥೆ ಎಂದು ಹೇಳಿದ್ದಾರೆ. “ವಿಡಿಯೋದಲ್ಲಿ ಕಂಡುಬರುವ ಮಹಿಳೆ ತಮ್ಮ ಕಾರಿನಲ್ಲಿ ಪ್ರಯಾಣಿಸಿಲ್ಲ ಮತ್ತು ಬಿಜೆಪಿ ಕಾರ್ಯಕರ್ತೆಯಲ್ಲ” ಎಂದು ಹೇಳಿಕೊಂಡಿದ್ದಾರೆ.
ಇನ್ನು ಬುಧವಾರ ಈ ಘಟನೆ ನಡೆದಾಗ ಶೋಭಾ ಜತೆಗಿದ್ದ ಪಾಲಕ್ಕಾಡ್‌ನ ಹಿರಿಯ ಬಿಜೆಪಿ ನಾಯಕಿ ಪ್ರಮೀಳಾ ಶಶಿಧರನ್, ಸೌತ್ ಫಸ್ಟ್‌ಗೆ ಪ್ರತಿಕ್ರಿಯಿಸುತ್ತಾ, “ಪಾಲಕ್ಕಾಡ್‌ನ ಹಿರಿಯ ಬಿಜೆಪಿ ನಾಯಕಿ ಪ್ರಮೀಳಾ ಶಶಿಧರನ್, ಸೌತ್ ಫಸ್ಟ್‌ಗೆ ಮಾತನಾಡುತ್ತಾ, ಶೋಭಾ ಅವರ ಕಡೆಗೆ ಲೈಂಗಿಕವಾಗಿ ಸನ್ನೆ ಮಾಡಿದ್ದಾನೆ. ನಾವು ಅದನ್ನು ಗಮನಿಸಿ ಕಾರನ್ನು ನಿಲ್ಲಿಸುವಂತೆ ಹೇಳಿ ಪ್ರಶ್ನಿಸಿದೆವು. ಶೀಘ್ರದಲ್ಲೇ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ” ಎಂದು ಹೇಳಿಕೊಂಡಿದ್ದಾರೆ.
ಈ ನಡುವೆ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್ ದೂರು ನೀಡಿದೆ. ರಾಜ್ಯ ಚುನಾವಣಾ ಆಯೋಗವು ಪಾಲಕ್ಕಾಡ್ ಜಿಲ್ಲಾಧಿಕಾರಿಗೆ ಈ ವಿಷಯದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಕೇಳಿದೆ. ಸದ್ಯ ಕಾಂಗ್ರೆಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿದೆ.
“ಚುನಾವಣೆಯ ಮುನ್ನಾದಿನ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಹಣ ವಿತರಿಸುವಾಗ ಸಿಕ್ಕಿಬಿದ್ದಿದ್ದಾರೆ! ಚುನಾವಣಾ ಆಯೋಗವು ನಿದ್ರಿಸುತ್ತಿರುವಾಗ ಈ ಘಟನೆ ನಡೆದಿದೆ. ಏನೇ ಆಗಲಿ, ಎಲ್ಲೇ ಆಗಲಿ, ಚುನಾವಣೆಯಲ್ಲಿ ಮೋಸ ಮಾಡುವುದು ಬಿಜೆಪಿಯ ಡಿಎನ್‌ಎಯಲ್ಲಿದೆ. ಈ ಅಪರಾಧ ಮತ್ತು ಚುನಾವಣಾ ನಿಯಮಗಳ ಈ ಸ್ಪಷ್ಟ ಉಲ್ಲಂಘನೆಗಾಗಿ ಅಭ್ಯರ್ಥಿಗೆ ಶಿಕ್ಷೆಯಾಗಬೇಕು. ಅಭ್ಯರ್ಥಿಯಾಗಿ ಮುಂದುವರಿಯಲು ಅವರಿಗೆ ಕಾನೂನು ಮತ್ತು ನೈತಿಕ ಸ್ಥಾನಮಾನವಿಲ್ಲ” ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.




