ಗುಜರಾತ್‌ನ ವಡೋದರಾದಲ್ಲಿರುವ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದ (MS University) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಜಾಗೃತ್ ಗಡಿತ್ ಅವರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಪೂಜೆ, ಆರತಿ, ಕಥೆ ಹಾಗೂ ಧಾರ್ಮಿಕ ಚಿಹ್ನೆಗಳ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸಬೇಕೆಂದು ಕೋರಿ ಕುಲಪತಿ ಪ್ರೊ. ಬಿ.ಎಂ. ಭಾಣಗೆ ಅವರಿಗೆ ಮುಕ್ತ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ದಿಕ್ಸೂಚಿ ಕಾರ್ಯಕ್ರಮದಲ್ಲಿ ಸರಸ್ವತಿ ದೇವಿಯ ಭಾವಚಿತ್ರದ ಮುಂದೆ ದೀಪ ಬೆಳಗಿಸುವುದು, ಮಂತ್ರ ಪಠಣ ಮಾಡುವುದು ಮತ್ತು ಶೂಗಳನ್ನು ಹೊರಗಿಡುವಂತಹ ಆಚರಣೆಗಳನ್ನು ನಡೆಸಲಾಗಿತ್ತು. ಈ ಆಚರಣೆಯು ಸಾರ್ವಜನಿಕ ವೇದಿಕೆಗೆ ಸೂಕ್ತವಲ್ಲ ಎಂದು ಪ್ರತಿಭಟಿಸಿ ಪ್ರೊ. ಜಾಗೃತ್ ಗಡಿತ್ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು.
ಇದನ್ನೂ ಓದಿ: ‘ಆಳ್ವಾಸ್ ಇಫ್ತಾರ್’ನಲ್ಲಿ ಭಾಗವಹಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಿ…
ತಮ್ಮ ಪತ್ರದಲ್ಲಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ‘ಕೇಶವಾನಂದ ಭಾರತಿ’ ತೀರ್ಪನ್ನು ಉಲ್ಲೇಖಿಸಿರುವ ಅವರು, “ಸಂವಿಧಾನದ ಮೂಲ ರಚನೆಯಲ್ಲಿ ಜಾತ್ಯತೀತತೆ ಪ್ರಮುಖ ಭಾಗವಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ವಿಶ್ವವಿದ್ಯಾಲಯಗಳು ಮುಕ್ತವಾಗಿ ಪ್ರಶ್ನಿಸುವ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಸ್ಥಳಗಳಾಗಬೇಕು. ಇಲ್ಲಿ ನಾಸಿಕತೆ ಬಗ್ಗೆಯೂ ಮುಕ್ತ ಚರ್ಚೆ ನಡೆಯಬೇಕು” ಎಂದು ಪ್ರತಿಪಾದಿಸಿದ್ದಾರೆ.
ಹಿಂದೆ ಕೇವಲ ಸಾಂಕೇತಿಕವಾಗಿ ನೆರವೇರುತ್ತಿದ್ದ ಕಾರ್ಯಕ್ರಮಗಳು ಈಗ ಪೂರ್ಣಪ್ರಮಾಣದ ಧಾರ್ಮಿಕ ವಿಧಿವಿಧಾನಗಳಾಗಿ ಬದಲಾಗುತ್ತಿವೆ. ಹೊಸ ಲ್ಯಾಬ್‌ಗಳ ಉದ್ಘಾಟನೆಗೆ ಪುರೋಹಿತರನ್ನು ಕರೆಸಿ ಪೂಜೆ ಮಾಡಿಸುವುದು ಮತ್ತು ಹಾಸ್ಟೆಲ್‌ಗಳಲ್ಲಿ ಗಣೇಶೋತ್ಸವ ಆಯೋಜಿಸುವುದು ಹೆಚ್ಚುತ್ತಿದೆ. ಪ್ರತಿಯೊಬ್ಬರಿಗೂ ವೈಯಕ್ತಿಕ ಧಾರ್ಮಿಕ ನಂಬಿಕೆಗಳಿರಬಹುದು., ಆದರೆ ಅವುಗಳನ್ನು ಸಾರ್ವಜನಿಕ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹೇರಬಾರದು ಎಂದು ಪ್ರೊಫೆಸರ್ ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು, ಪೂಜೆಗಳು ಮತ್ತು ಧಾರ್ಮಿಕ ಸಂಕೇತಗಳ ಬಹಿರಂಗ ಪ್ರದರ್ಶನವನ್ನು ನಿಷೇಧಿಸುವಂತಹ ಕಟ್ಟುನಿಟ್ಟಿನ ನೀತಿಯನ್ನು ರೂಪಿಸಬೇಕೆಂದು ಅವರು ವಿವಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.





