ಮೇಘಾಲಯದ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (UDP) ಪಕ್ಷದ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ಡಾ. ಜಿಮಿನೋ ಮಾವ್ತೋಹ್ ಅವರು ಶನಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿಲ್ಲಾಂಗ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಅಧಿಕೃತವಾಗಿ ಕಮಲ ಪಡೆಗೆ ಧುಮುಕಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಯುಡಿಪಿ ಪಕ್ಷದ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮಾವ್ತೋಹ್, ಬೆಂಬಲಿಗರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ಎಎಪಿ ಸಂಸದರು ಬಿಜೆಪಿ ಸೇರ್ಪಡೆ: ‘ತನಿಖಾ ಸಂಸ್ಥೆಗಳ ದುರುಪಯೋಗದ ಪರಿಣಾಮ’ ಎಂದ ಸಿಪಿಐಎಂ ನಾಯಕ
“ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಬಿಜೆಪಿಯ ಅಭಿವೃದ್ಧಿ ನೀತಿಗಳನ್ನು ಗಮನದಲ್ಲಿಟ್ಟುಕೊಂಡು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ” ಎಂದು ಸೇರ್ಪಡೆ ಬಳಿಕ ಮಾವ್ತೋಹ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಮಾವ್ತೋಹ್ ಅವರ ನಿರ್ಗಮನದ ಬೆನ್ನಲ್ಲೇ, ಯುಡಿಪಿಯ 12 ಶಾಸಕರ ಪೈಕಿ ಕನಿಷ್ಠ 8 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ರಾಜಕೀಯ ವದಂತಿಗಳು ಬಲವಾಗಿ ಕೇಳಿಬರುತ್ತಿವೆ. ಇತ್ತೀಚೆಗೆ ನಡೆದ ಯುಡಿಪಿ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗೆ 6 ಶಾಸಕರು ಗೈರುಹಾಜರಾಗಿರುವುದು ಹಾಗೂ 3 ಶಾಸಕರು ಬಿಜೆಪಿಯೊಂದಿಗೆ ಮಾತುಕತೆಯಲ್ಲಿರುವುದನ್ನು ಒಪ್ಪಿಕೊಂಡಿರುವುದು ಈ ವದಂತಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಒಂದು ವೇಳೆ 8 ಶಾಸಕರು ಬಿಜೆಪಿಗೆ ಸೇರ್ಪಡೆಯಾದರೆ, 60 ಸದಸ್ಯರ ಮೇಘಾಲಯ ವಿಧಾನಸಭೆಯಲ್ಲಿ ಬಿಜೆಪಿಯ ಬಲ 10ಕ್ಕೇರಲಿದ್ದು, ಶಾಸನಸಭೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪ್ರಸ್ತುತ ಮೇಘಾಲಯದಲ್ಲಿ ಎನ್‌ಪಿಪಿ (NPP) ನೇತೃತ್ವದ ಮೇಘಾಲಯ ಡೆಮಾಕ್ರಟಿಕ್ ಅಲೈಯನ್ಸ್ (MDA) ಸರ್ಕಾರವಿದ್ದು, ಯುಡಿಪಿ ಮತ್ತು ಬಿಜೆಪಿ ಎರಡೂ ಈ ಮೈತ್ರಿಕೂಟದ ಭಾಗವಾಗಿವೆ.





