ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕೃಷಿ ಚಟುವಟಿಕೆಗಳು ನಿರೀಕ್ಷಿತ ವೇಗ ಪಡೆಯದೆ ಕುಂಠಿತಗೊಂಡಿವೆ. ಜೂನ್ ತಿಂಗಳ ಅಂತ್ಯದತ್ತ ಸಾಗುತ್ತಿದ್ದರೂ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಭತ್ತ, ಜೋಳ ಸೇರಿದಂತೆ ಪ್ರಮುಖ ಬೆಳೆಗಳ ಬಿತ್ತನೆ ಕಾರ್ಯ ವಿಳಂಬವಾಗಿದ್ದು, ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಿಂದಲೇ ಜಿಲ್ಲೆಯ ಮಲೆನಾಡು, ಅರೆಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭತ್ತ ನಾಟಿ, ಗದ್ದೆ ಉಳುಮೆ, ಜೋಳ ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತವೆ.
ಆದರೆ ಈ ಬಾರಿ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ರೈತರು ಕೃಷಿ ಚಟುವಟಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ. ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಅಗತ್ಯವಿರುವ ಭತ್ತ ಮತ್ತು ಜೋಳದ ಬೀಜಗಳು, ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದ್ದರೂ, ಅವುಗಳ ಬೇಡಿಕೆ ಕಳೆದ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.
ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಪೂರೈಸಲು 4,700 ಕ್ವಿಂಟಲ್ ಭತ್ತದ ಬೀಜ ಮತ್ತು 998 ಕ್ವಿಂಟಲ್ ಜೋಳದ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿತ್ತು. ಜೂನ್ ಅರ್ಧ ತಿಂಗಳು ಕಳೆದರೂ ಕೇವಲ 2,950 ಕ್ವಿಂಟಲ್ ಮಾತ್ರ ರೈತರಿಂದ ಖರೀದಿಯಾಗಿದೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಜೂನ್ 1 ರಿಂದ 21ರವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 37.5 ಸೆಂ.ಮೀ. ಮಳೆ ಬೀಳಬೇಕಿತ್ತು. ಆದರೆ ಈ ಬಾರಿ ಕೇವಲ 14.3 ಸೆಂ.ಮೀ. ಮಾತ್ರ ಮಳೆಯಾಗಿದ್ದು, ಶೇ. 62ರಷ್ಟು ಮಳೆ ಕೊರತೆ ದಾಖಲಾಗಿದೆ.
ಮಳೆಯ ಅನಿಶ್ಚಿತತೆಯ ಕಾರಣದಿಂದ ರೈತರು ಬಿತ್ತನೆಗೆ ಮುಂದಾಗುತ್ತಿಲ್ಲ ಎನ್ನುವುದು ಕೃಷಿ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವಾಗಿದೆ. ಜೂನ್ ಆರಂಭದಲ್ಲಿ ಕೆಲವು ಭಾಗಗಳಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನು ನಂಬಿಕೊಂಡು ಬನವಾಸಿ, ಮುಂಡಗೋಡ, ಯಲ್ಲಾಪುರ ಭಾಗದ ಕೆಲವು ರೈತರು ಬಿತ್ತನೆ ಮಾಡಿದ್ದರು. ಆದರೆ ನಂತರ ಮಳೆ ಸ್ಥಗಿತಗೊಂಡು ಬಿಸಿಲಿನ ತಾಪ ಹೆಚ್ಚಾದ ಕಾರಣ ಮೊಳಕೆಯೊಡೆದ ಗಿಡಗಳು ಒಣಗಿ ಹಾಳಾಗಿವೆ.
ಮೆಕ್ಕೆಜೋಳ ಹಾಗೂ ಭತ್ತ ಬಿತ್ತನೆ ಮಾಡಿ ಮಳೆಗೆ ಕಾಯುತ್ತಿರುವ ರೈತ ಪ್ರಕಾಶ ದೊಡ್ಮನಿ ಈದಿನ.ಕಾಮ್ ಜೊತೆ ಮಾತನಾಡಿ, “ಬೀಜ ಬಿತ್ತನೆ, ಗೊಬ್ಬರ ಹಾಗೂ ಹೊಲವನ್ನು ಹದ ಮಾಡಲು ಈಗಾಗಲೇ ಸಾವಿರಾರು ರೂಪಾಯಿ ಖರ್ಚಾಗಿದೆ. ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರೆ ಈಗ ಒಂದು ಎಕರೆಗೆ ಮಾಡಿರುವ 8 ರಿಂದ 10 ಸಾವಿರ ರೂಪಾಯಿ ಖರ್ಚು ಸಹಿತ ನಮ್ಮ ಮೇಲೆ ಬೀಳಲಿದೆ. ಕೃಷಿ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಬೆಳೆ ಕೈಕೊಟ್ಟರೆ ಸಾಲದ ಹೊರೆಯೂ ಹೆಚ್ಚುವ ಸಾಧ್ಯತೆ ಇದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ನಾಟಿ ಪದ್ಧತಿಯ ಮೂಲಕ ಭತ್ತ ಬೆಳೆಯಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಭತ್ತದ ಕೃಷಿ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಲ್ಲ. ಆದರೆ ಇನ್ನೂ ಕೆಲವು ವಾರಗಳ ಕಾಲ ಮಳೆ ವಿಳಂಬವಾದರೆ ಕೃಷಿ ಚಟುವಟಿಕೆ ಮತ್ತು ನಾಟಿ ಕಾರ್ಯಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ಕೃಷಿ ತಜ್ಞರ ಪ್ರಕಾರ, “ಮುಂಗಾರು ಮತ್ತಷ್ಟು ವಿಳಂಬವಾದರೆ ರೈತರು ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಭತ್ತದ ತಳಿಗಳತ್ತ ಮುಖ ಮಾಡಬೇಕಾಗಬಹುದು. 105 ರಿಂದ 120 ದಿನಗಳಲ್ಲಿ ಕೊಯ್ಲಿಗೆ ಬರುವ ತಳಿಗಳನ್ನು ಆಯ್ಕೆ ಮಾಡಿಕೊಂಡರೆ ಆಗಬಹುದಾದ ನಷ್ಟವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು” ಎಂದು ಸಲಹೆ ನೀಡಿದ್ದಾರೆ.
ತಜ್ಞರ ಪ್ರಕಾರ ಈ ವರ್ಷ ಜಾಗತಿಕ ಹವಾಮಾನ ವೈಪರೀತ್ಯದ ಭಾಗವಾಗಿ ಎಲ್ ನಿನೋ ಹಾಗೂ ಸಂಬಂಧಿತ ಹವಾಮಾನ ಬದಲಾವಣೆಗಳ ಪರಿಣಾಮ ದೇಶದ ಹಲವು ಭಾಗಗಳಲ್ಲಿ ಮಳೆಯ ಹಂಚಿಕೆ ಅಸಮತೋಲನವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅದರ ಪರಿಣಾಮ ಗೋಚರಿಸುತ್ತಿದ್ದು, ವಾಡಿಕೆಯಷ್ಟು ಮಳೆ ದಾಖಲಾಗಿಲ್ಲ.
ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಜೂನ್ ತಿಂಗಳಲ್ಲೇ ಸಾಕಷ್ಟು ಮಳೆಯಾಗುವ ಕಾರಣ ಜಲಾಶಯಗಳು, ಕೆರೆಗಳು ಮತ್ತು ಕೃಷಿ ಭೂಮಿಗಳಿಗೆ ನೀರಿನ ಕೊರತೆ ಎದುರಾಗುವುದಿಲ್ಲ. ಆದರೆ ಈ ಬಾರಿ ಮಳೆಯ ಕೊರತೆ ಮುಂದುವರಿದರೆ ಕೃಷಿಯ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.
ಮುಂಗಾರು ಆಧಾರಿತ ಕೃಷಿಯನ್ನೇ ನಂಬಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ರೈತ ಕುಟುಂಬಗಳು ಈಗ ಆಕಾಶದತ್ತ ನೋಡುತ್ತಿದ್ದಾರೆ. ಮಳೆ ಆರಂಭವಾದರೆ ಕೃಷಿ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲಿವೆ. ಆದರೆ ಮಳೆಯ ಕೊರತೆ ಹೀಗೆ ಇನ್ನೂ ಮುಂದುವರಿದರೆ ಬಿತ್ತನೆ ಕುಸಿಯುವ ಜೊತೆಗೆ ಉತ್ಪಾದನೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ಜಿಲ್ಲೆಯ ಕೃಷಿ ಕ್ಷೇತ್ರದ ಭವಿಷ್ಯ ಮುಂದಿನ ಒಂದೆರಡು ವಾರಗಳಲ್ಲಿ ಸುರಿಯುವ ಮಳೆಯ ಮೇಲೆ ಬಹುತೇಕ ಅವಲಂಬಿತವಾಗಿದೆ. ಉತ್ತಮ ಮಳೆಯಾದರೆ ರೈತರ ಆತಂಕ ದೂರವಾಗಬಹುದು. ಇಲ್ಲದಿದ್ದರೆ ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಸವಾಲಿನ ವರ್ಷವಾಗಿ ಪರಿಣಮಿಸುವ ಸಾಧ್ಯತೆ ಇದೆ.



